ಟೀಮ್ ಇಂಡಿಯಾದ ಹೊಸ ಕೋಚ್ ರವಿಶಾಸ್ತ್ರಿ ಸಂಭಾವನೆ ಎಷ್ಟು ಗೊತ್ತೇ ..!

ಈ ಸುದ್ದಿಯನ್ನು ಶೇರ್ ಮಾಡಿ

Ravishastri--01

ನವದೆಹಲಿ, ಜು.16- ಭಾರತ ತಂಡದ ನೂತನ ಕೋಚ್ ರವಿಶಾಸ್ತ್ರಿ ಸೇರಿದಂತೆ ಇತರ ಸಲಹೆಗಾರರ ಸಂಭಾವನೆಯನ್ನು ನಿಗದಿಗೊಳಿಸಲು ಸಿಒಎ ಸಮಿತಿ ರಚಿಸಿರುವ ಬೆನ್ನಲ್ಲೇ ರವಿಶಾಸ್ತ್ರಿಗೆ ವಾರ್ಷಿಕ 7 ರಿಂದ 7.5 ಕೋಟಿ ರೂ. ಸಂಭಾವನೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೆ ಅನಿಲ್‍ಕುಂಬ್ಳೆಗೆ ವಾರ್ಷಿಕ 7.5 ಕೋಟಿ ರೂ.ಗಳನ್ನು ನೀಡುತ್ತಿದ್ದು ಈಗ ಅದೇ ವೇತನವನ್ನು ನಿಗದಿಪಡಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ರವಿಶಾಸ್ತ್ರಿಯವರು ಭಾರತ ತಂಡದ ನಿರ್ದೇಶಕರಾಗಿದ್ದ ಅವರಿಗೆ 7 ರಿಂದ 7.5 ಕೋಟಿಗಳನ್ನು ವಾರ್ಷಿಕ ವೇತನ ರೂಪದಲ್ಲಿ ನೀಡಲಾಗುತ್ತಿತ್ತು.
ಶಾಸ್ತ್ರಿಯೊಂದಿಗೆ ಕಾರ್ಯನಿರ್ವಹಿಸುವ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್‍ಗಳ ಸಂಭಾವನೆಯು ಕೂಡ 2 ಕೋಟಿಗೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಅದರ ಅನ್ವಯ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ , ರವಿಶಾಸ್ತ್ರಿಯವರ ಬಯಕೆಯಂತೆ ಪೂರ್ಣ ಪ್ರಮಾಣದ ಬೌಲಿಂಗ್ ಕೋಚ್ ಆಗಿರುವ ಭರತ್ ಅರುಣ್ ಅವರು ಸಂಭಾವನೆ ರೂಪದಲ್ಲಿ ವಾರ್ಷಿಕ 2 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ.

ಸಂಜಯ್‍ಬಂಗಾರ್ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‍ನ ಕೋಚ್ ಆಗಿ ಮತ್ತು ಅರುಣ್ ಆರ್‍ಸಿಬಿ ತಂಡದ ಕೋಚ್ ಅಲ್ಲದೆ ಹೈದ್ರಾಬಾದ್‍ನ ರಣಜಿ ತಂಡದ ತರಬೇತುದಾರ ಹುದ್ದೆಯಿಂದ ಹಿಂದೆ ಸರಿಯುವ ಸೂಚನೆಗಳು ಸಿಕ್ಕಿವೆ. ಭಾರತ ಎ ತಂಡ ಹಾಗೂ ಅಂಡರ್ 19 ತಂಡಗಳ ತರಬೇತುದಾರರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರು ವಾರ್ಷಿಕ 5 ಕೋಟಿ ರೂ.ಗಳ ಸಂಭಾವನೆ ಪಡೆಯುತ್ತಿದ್ದು , ಈ ಎರಡು ಜವಾಬ್ದಾರಿಗಳ ಜೊತೆಗೆ ಭಾರತ ತಂಡವು ವಿದೇಶಿಗಳಲ್ಲಿ ಆಡುವ ಪಂದ್ಯಗಳಿಗೆ ದ್ರಾವಿಡ್ ಮುಖ್ಯ ಸಲಹೆಗಾರರಾಗಿರುವುದರಿಂದ ಆ ಹುದ್ದೆಗೆ ನೀಡಬೇಕಾಗಿರುವ ವೇತನವನ್ನು ಕೂಡ ನಿರ್ಧರಿಸಲು ಬಿಸಿಸಿಐ ಮುಂದಾಗಿದೆ.

ಇನ್ನು ತಂಡದ ಬೌಲಿಂಗ್ ಸಲಹೆಗಾರರಾಗಿರುವ ಜಹೀರ್‍ಖಾನ್ ಅವರ ಸೇವಾ ಅವಧಿಯನ್ನು ಪರಿಗಣಿಸಿ ಅವರ ವೇತನವನ್ನು ನಿರ್ಧರಿಸಲು ಬಿಸಿಸಿಐ ಯೋಚಿಸಿದ್ದರೆ, ಜಹೀರ್ 100 ದಿನಗಳ ಸೇವಾ ಅವಧಿಗೆ 4 ಕೋಟಿ ರೂ.ಗಳನ್ನು ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಏನೇ ಆಗಲಿ ಇವರೆಲ್ಲರ ವಾರ್ಷಿಕ ಸಂಭಾವನೆ ಎಷ್ಟು ಎಂಬುದನ್ನು ತಿಳಿಯಲು ಜುಲೈ 19ರವರೆಗೂ ಕಾಯಲೇಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin