ನಕಲು ತಡೆಯಲು ಏಕಕಾಲದಲ್ಲಿ SSLC – PUC ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

SSLC-Exams

ಬೆಂಗಳೂರು, ಜು.16- ಪರೀಕ್ಷೆ ಸಂದರ್ಭದಲ್ಲಿ ಹೆಚ್ಚುತ್ತಿರುವ ನಕಲು ಹಾವಳಿ, ಪ್ರಶ್ನೆ ಪತ್ರಿಕೆ ಸೋರಿಕೆ, ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಏಕಕಾಲದಲ್ಲಿ ನಡೆಸಲು ಮುಂದಾಗಿದೆ.  ಈ ಸಂಬಂಧ ಈಗಾಗಲೇ ಶಿಕ್ಷಣ ತಜ್ಞರು, ಪೋಷಕರು ಸೇರಿದಂತೆ ಸಾರ್ವಜನಿಕರಿಂದಲೂ ಅಭಿಪ್ರಾಯಪಡೆದಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ.

2018ರ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಏಕಕಾಲದಲ್ಲಿ ನಡೆಸಲು ಆಲೋಚಿಸಲಾಗಿದೆ. ಇದಕ್ಕೆ ಬೇಕಾದ ಸಿದ್ದತೆಗಳನ್ನು ಕೈಗೊಳ್ಳಬೇಕೆಂದು ಇಲಾಖೆಯು ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಆಡಳಿತ ಮಂಡಳಿಗೆ ಮೌಖಿಕ ಸೂಚನೆ ನೀಡಿದೆ.
ಈಗಾಗಲೇ ಇಲಾಖೆ ಅಧಿಕಾರಿಗಳು ಕೂಡ ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇನ್ನು ಎರಡು ಸುತ್ತಿನ ಮಾತುಕತೆ ನಡೆಸಿದ ಬಳಿಕ ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿಯೊಂದನ್ನು ನೀಡಲಿದೆ. ಇದಕ್ಕೆ ಅನುಮೋದನೆ ಸಿಕ್ಕರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರುವ ಶೈಕ್ಷಣಿಕ ವರ್ಷದಿಂದಲೇ ಒಂದೇ ಹಂತದಲ್ಲಿ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ತಿಳಿಸಿದ್ದಾರೆ.

ಪರೀಕ್ಷಾ ವಿಧಾನ ಹೇಗೆ ?

ಈವರೆಗೂ ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿತ್ತು. ಈ ವೇಳೆ ನಕಲು, ಪ್ರಶ್ನೆ ಪತ್ರಿಕೆ ಸೋರಿಕೆ, ಅದಲು-ಬದಲು ಸೇರಿದಂತೆ ಒಂದಿಲ್ಲೊಂದು ಗೊಂದಲಗಳು ಮೂಡಿ ಪರೀಕ್ಷೆಯನ್ನು ಮುಂದೂಡಿದ ಪ್ರಸಂಗಗಳು ನಡೆದಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರ ಜತೆಗೆ ಪೋಷಕರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆಯು ಈ ಎರಡೂ ಪರೀಕ್ಷೆಗಳನ್ನು ಒಂದೇ ಹಂತದಲ್ಲಿ ನಡೆಸಲಿದೆ. ಅಂದರೆ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪ್ರತಿ ಒಂದು ಡೆಸ್ಕ್‍ಗೆ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸುವುದು ಇದರ ಉದ್ದೇಶ.

ಆಯಾ ಪ್ರಶ್ನೆ ಪತ್ರಿಕೆಗಳನ್ನು ಸಂಬಂಧಪಟ್ಟ ಶಿಕ್ಷರೇ ವಿತರಣೆ ಮಾಡಬೇಕು. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಒಂದೇ ವಾಹನದಲ್ಲಿ ತಂದು ಪರೀಕ್ಷೆ ಆರಂಭಕ್ಕೂ ಮುನ್ನ ಐದು ನಿಮಿಷಕ್ಕೆ ಮುಂಚಿತವಾಗಿ ತೆರೆಯಬೇಕು.  ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 15 ಲಕ್ಷ ದಾಟುತ್ತದೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ವಿಭಾಗದಿಂದ 8 ಲಕ್ಷ, ಪಿಯುಸಿ ವಿಭಾಗದಿಂದ 6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಈ ಬಾರಿ ಇದರ ಸಂಖ್ಯೆ ಹೆಚ್ಚಾಗಲಿದ್ದು, 15 ಲಕ್ಷ ಗಡಿ ದಾಟುವ ಸಂಭವವಿದೆ.

ಸದ್ಯಕ್ಕೆ ರಾಜ್ಯದಲ್ಲಿ 16ಸಾವಿರ ಸರ್ಕಾರಿ ಪ್ರೌಢಶಾಲೆಗಳು(ಅನುದಾನ/ಅನುದಾನ ರಹಿತ ಸೇರಿ) ಹಾಗೂ 5ಸಾವಿರ ಪವಿ ಪೂರ್ವ ಕಾಲೇಜುಗಳಿವೆ. ಒಂದೇ ಹಂತದಲ್ಲಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಬೇಕಾದ ಕೊಠಡಿ, ವಾಹನ ಸೌಲಭ್ಯ ಸೇರಿದಂತೆ ಕೆಲ ಮೂಲಭೂತ ಸೌಕರ್ಯಗಳ ಸಮಸ್ಯೆ ಎದುರಾಗುವ ಸಂಭವವಿದೆ.  ಇದನ್ನು ತಪ್ಪಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಸರ್ಕಾರದ ಅನುಮತಿಗೆ ಎದುರು ನೋಡುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin