ನಾಳೆಯಿಂದ ಸಂಸತ್ ಅಧಿವೇಶನ : ಸರ್ಕಾರದ ತರಾಟೆಗೆ ತುದಿಗಾಲಲ್ಲಿ ನಿಂತ ವಿಪಕ್ಷಗಳು

ಈ ಸುದ್ದಿಯನ್ನು ಶೇರ್ ಮಾಡಿ

Parliament

ನವದೆಹಲಿ, ಜು.16- ಭಾರತ-ಚೀನಾ ಗಡಿ ಬಿಕ್ಕಟ್ಟು, ಕಾಶ್ಮೀರದಲ್ಲಿ ಮುಂದುವರಿದ ಭಯೋತ್ಪಾದಕರ ಅಟ್ಟಹಾಸ, ದೇಶದ ವಿವಿಧೆಡೆ ರೈತರ ಸರಣಿ ಆತ್ಮಹತ್ಯೆ, ಗೋರಕ್ಷಕರ ದೌರ್ಜನ್ಯ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತಿರುವಾಗಲೇ ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಜ್ಜಾಗಿವೆ. ಜುಲೈ 17ರಿಂದ ಆಗಸ್ಟ್ 11ರ ವರೆಗೆ ಅಧಿವೇಶನ ನಡೆಯಲಿದ್ದು, ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ಜ್ವಲಂತ ಸಮಸ್ಯೆಗಳು ಭಾರೀ ಚರ್ಚೆಗೆ ಗ್ರಾಸವಾಗಿ ಕೋಲಾಹಲದ ವಾತಾವರಣ ಸೃಷ್ಟಿಸುವ ಸಾಧ್ಯತೆ ಇದೆ.

ಚಿತ್ರನಟ ಮತ್ತು ಲೋಕಸಭಾ ಸದಸ್ಯ ವಿನೋದ್ ಖನ್ನಾ ಮತ್ತು ರಾಜ್ಯಸಭೆ ಸದಸ್ಯೆ ಪಲ್ಲವಿ ರೆಡ್ಡಿ ಅವರ ನಿಧನಕ್ಕೆ ಸಂತಾಪ ಸೂಚಿಸುವುದರೊಂದಿಗೆ ಎರಡೂ ಸದನಗಳ ಮೊದಲು ದಿನದ ಕಲಾಪ ಮುಕ್ತಾಯಗೊಳ್ಳಲಿದೆ.  ಮಂಗಳವಾರದಿಂದ ಅಧಿಕೃತ ಕಲಾಪ ಆರಂಭವಾಗಲಿದ್ದು, ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳನ್ನು ಅಸ್ತ್ರವನ್ನಾಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿಗೆ ವಿರೋದ ಪಕ್ಷಗಳು ತುದಿಗಾಲಲ್ಲಿ ನಿಂತಿವೆ.

ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಂನಲ್ಲಿ ಭಾರತ-ಚೀನಾ ನಡುವೆ ಸಮರ ಸದೃಶ ವಾತಾವರಣಕ್ಕೆ ಕಾರಣವಾಗಿರುವ ಗಡಿ ಬಿಕ್ಕಟ್ಟು, ಕಾಶ್ಮೀರ ಕಣಿವೆಯಲ್ಲಿ ಉಗ್ರರ ಮುಂದುವರಿದ ದಾಳಿ, ಅಮರನಾಥ ಯಾತ್ರಿಕರ ಮಾರಣ ಹೋಮ, ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆ ಮತ್ತು ಹಲ್ಲೆ ಪ್ರಕರಣಗಳು, ದೇಶದ ವಿವಿಧ ರಾಜ್ಯಗಳಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು, ಉತ್ತರ ಪ್ರದೇಶ, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ, ಮುಂಗಾರು ಕೊರತೆಯಿಂದ ಕರ್ನಾಟಕ ಒಳಗೊಂಡಂತೆ ಕೆಲವು ರಾಜ್ಯಗಳಲ್ಲಿ ಆವರಿಸಿರುವ ಬರದ ಛಾಯೆ, ಜಿಎಸ್‍ಟಿ ಗೊಂದಲ ಇವೇ ಮೊದಲಾದ ವಿಷಯಗಳನ್ನು ಪ್ರತಿಪಕ್ಷಗಳ ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದೆ.

16 ಹೊಸ ಮಸೂದೆಗಳ ಮಂಡನೆ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 16 ಹೊಸ ವಿಧೇಯಕಗಳು ಮಂಡನೆಯಾಗಲಿವೆ. ಜಿಎಸ್‍ಟಿ, ಬ್ಯಾಂಕಿಂಗ್ ನಿಬಂಧನೆ ತಿದ್ದುಪಡಿ, ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ಮಸೂದೆ, ಪೌರತ್ವ ತಿದ್ದುಪಡಿ ಮಸೂದೆ, ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ತಿದ್ದುಪಡಿ ಮಸೂದೆ ಸೇರಿದಂತೆ ಹೊಸ ವಿಧೇಯಕಗಳು ಅನುಮೋದನೆಗಾಗಿ ಮಂಡನೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಸಂಜೆ ಸರ್ವಪಕ್ಷ ಸಭೆ:

ಅಧಿವೇಶನದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸಂಜೆ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಬಿಕ್ಕಟ್ಟು ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಬೇಕೆ ಹೊರತು ಗಲಭೆ ಮತ್ತು ಕಲಾಪಕ್ಕೆ ಅಡ್ಡಿಯುಂಟುಮಾಡಿ ಕಾಲಹರಣ ಮಾಡದಂತೆ ಅವರು ವಿರೋಧ ಪಕ್ಷಗಳ ಮುಖಂಡರಿಗೆ ಮನವಿ ಮಾಡಲಿದ್ದಾರೆ.

ಎನ್‍ಡಿಎ ಸಭೆ:

ಇದೇ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿರುವ ಪ್ರತಿಪಕ್ಷಗಳ ಪ್ರತಿಭಟನೆಗೆ ಪ್ರತಿತಂತ್ರ ರೂಪಿಸಲು ಎನ್‍ಡಿಎ ಮುಖಂಡರು ಇಂದು ಸಂಜೆ ಸಭೆ ಸೇರಿ ಚರ್ಚಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin