ನಾಳೆ ರಾಷ್ಟ್ರಪತಿ ಚುನಾವಣೆ , ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನ

Kovind-Vs-Meera

ಬೆಂಗಳೂರು,ಜು.16-ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆಗೆ ವಿಧಾನಸೌಧದ ಮೊದಲ ಮಹಡಿಯಲ್ಲಿರುವ 106ನೇ ಕೊಠಡಿಯಲ್ಲಿ ನಾಳೆ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಸ್.ಮೂರ್ತಿ ತಿಳಿಸಿದ್ದಾರೆ. ಇದೇ ವೇಳೆ, ರಾಷ್ಟ್ರಪತಿ ಅವರನ್ನು ಆಯ್ಕೆ ಮಾಡುವ ಹಕ್ಕು ಹೊಂದಿರುವ ಜನಪ್ರತಿನಿಧಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆಯೂ ಮಾಹಿತಿ ನೀಡಿರುವ ಅವರು ಪ್ರತಿಯೊಬ್ಬ ಮತದಾರನಿಗೂ ಗುರುತಿನ ಚೀಟಿ ಅತ್ಯಗತ್ಯ ಎಂದು ತಿಳಿಸಿದ್ದಾರೆ.

ಜುಲೈ 17ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ. ಜನರಿಂದ ವಿಧಾನಸಭೆಗೆ ಚುನಾಯಿತರಾಗಿರುವ ಸದಸ್ಯರು (ಶಾಸಕರು) ಹಾಗೂ ಚುನಾವಣಾ ಆಯೋಗದಿಂದ ಅನುಮತಿ ಪಡೆದಿರುವ ರಾಜ್ಯದ ಸಂಸತ್ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ.
ಪ್ರತಿಯೊಬ್ಬ ಮತದಾರರು ಮರೆಯದೆ ಗುರುತಿನ ಚೀಟಿ ತಂದು ಮತಪತ್ರ ಪಡೆಯುವಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿದ್ದು , ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಮತದಾರರಿಗೆ ಸೂಚನೆ:

ಇದು ಏಕ ವರ್ಗಾವಣೀಯ ಮತದ ವಿಧಾನ ಪದ್ಧತಿಯಾಗಿದೆ. ಇದರಡಿ ಪ್ರತಿಯೊಬ್ಬ ಮತದಾರ ಒಂದು ಮತ ಮಾತ್ರ ಹೊಂದಿದ್ದು , ಕಣದಲ್ಲಿರುವ ಅಭ್ಯರ್ಥಿಗಳಿಗೆ ಆದ್ಯತೆ ಸೂಚಿಸಿ ಮತ ನೀಡಬಹುದು.  ಮತಪತ್ರದಲ್ಲಿ ಯಾವ ಅಭ್ಯರ್ಥಿಗೆ ನೀವು ಮೊದಲ ಆದ್ಯತೆ ಕೊಡುತ್ತೀರಿ ಅವರ ಹೆಸರಿನ ಮುಂದೆ `1′ ಎಂದು ಸ್ಪಷ್ಟವಾಗಿ ನಮೂದಿಸಬೇಕು. ನಂತರ ನೀವು ಇಚ್ಛಿಸಿದ ಇತರ ಅಭ್ಯರ್ಥಿಗಳಿಗೆ 2, 3, 4 ಇತ್ಯಾದಿ ಗುರುತಿನ ಮೂಲಕ ಆದ್ಯತೆ ಸೂಚಿಸಬಹುದು.
ಯಾವುದೇ ಕಾರಣಕ್ಕೂ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಬಾರದು. ಮತವನ್ನು ಯಾರಿಗೆ ನೀಡಿದ್ದೀರಿ ಎಂಬುದು ಗೊಂದಲಕ್ಕೆಡೆ ಮಾಡಬಾರದು. ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಒಂದೇ ಅಂಕಿ ನಮೂದಿಸಬೇಕು.

ಗುರುತು ಮಾಡಲು ನಿಗದಿಪಡಿಸಿರುವ ಒಂದೇ ಪೆನ್‍ನಿಂದ ಗುರುತು ಮಾಡಬೇಕೆ ಹೊರತು ಬೇರೆ ನಿಮ್ಮ ಸ್ವಂತ ಪೆನ್ ಬಳಸುವಂತಿಲ್ಲ. ಮತ ಪತ್ರದಲ್ಲಿ ನಿಮ್ಮ ಸಹಿ ಮಾಡುವುದಾಗಲಿ, ಹೆಬ್ಬೆಟ್ಟಿನ ಗುರುತು ಮಾಡುವುದಾಗಲಿ ಮಾಡಬಾರದು.  ಒಬ್ಬ ಅಭ್ಯರ್ಥಿಗೆ ಆದ್ಯತೆಯ ಮತ `1′ ಎಂದು ಬರೆಯುವುದು ಕಡ್ಡಾಯ. ಐಚ್ಛಿಕವಾಗಿ ಇತರ ಅಭ್ಯರ್ಥಿಗಳಿಗೆ 2, 3, 4 ಇತ್ಯಾದಿ ಗುರುತು ಮಾಡುವುದು ನಿಮಗೆ ಬಿಟ್ಟಿದ್ದು.

ಪ್ರತಿಯೊಬ್ಬರೂ ಮತದಾನದ ರಹಸ್ಯವನ್ನು ಕಾಪಾಡಬೇಕು. ನೀವು ಯಾರಿಗೆ ಮತ ಹಾಕುತ್ತಿದ್ದೀರಿ ಎಂಬುದು ರಹಸ್ಯವಾಗಿರಬೇಕು. 1, 2, 3 ಇತ್ಯಾದಿ ಗುರುತು ಮಾಡುವುದರಲ್ಲಿ ಯಾವುದೇ ವ್ಯತ್ಯಾಸವಾದರೂ ನಿಮ್ಮ ಮತ ಅಸಿಂಧುವಾಗುತ್ತದೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

 

Facebook Comments

Sri Raghav

Admin