ಮಹದಾಯಿ ಹೋರಾಟಕ್ಕೆ 2 ವರ್ಷ : ನರಗುಂದದಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನೆ

Mahadayi--01

ಗದಗ,ಜು.16- ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯುವ ನೀರು ಒದಗಿಸಲು ಕಳಸಾ-ಬಂಡೂರಿ(ಮಹದಾಯಿ) ನಾಲೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಇಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಇಂದಿಗೆ ಎರಡು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸಾವಿರಾರು ರೈತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.  20 ಮಂದಿ ಮಠಾಧೀಶರು, ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಸೇರಿ ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪ್ರತಿಭಟನೆ ನಡೆಸಿದರು.

ರೈತರ ಈ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ನರಗುಂದ ಪಟ್ಟಣದಲ್ಲಿ ಅಘೋಷಿತ ಬಂದ್ ಏರ್ಪಟ್ಟಿತ್ತು. ಅಂಗಡಿ-ಮುಂಗಟ್ಟುಗಳು, ವ್ಯಾಪಾರ-ವಹಿವಾಟುಗಳು ಸ್ಥಗಿತಗೊಂಡಿದ್ದವು. ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಪ್ರತಿಭಟನೆ ಪ್ರಯುಕ್ತ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ನಾಲ್ಕು ಕೆಎಸ್‍ಆರ್‍ಪಿ ಮತ್ತು ಮೂರು ಡಿಆರ್ ತುಕ್ಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಾರ್ವಜನಿಕರು ಸ್ವಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ಸಂಬಂಧ ವಿವಿಧ ಮಠಗಳ ಮಠಾಧೀಶರು ಮತ್ತು ರೈತ ನಾಯಕರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.  ಮಹದಾಯಿಗಾಗಿ ನಾವು ನಡೆಸುತ್ತಿರುವ ಹೋರಾಟ ಆರಂಭವಾಗಿ ಎರಡು ವರ್ಷಗಳು ಕಳೆದಿದ್ದರೂ, ಕೆಲವು ಮಂದಿ ಪ್ರಾಣ ಕಳೆದುಕೊಂಡಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ದುರಂತ ಎಂದರು.  ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಈ ಸಂದರ್ಭ ರೈತರು ಸ್ಪಷ್ಟಪಡಿಸಿದರು.   ಪ್ರತಿಭಟನೆ ವೇಳೆ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin