ರಾಷ್ಟ್ರಪತಿ ಚುನಾವಣೆ : ಮತದಾನದಲ್ಲೂ ಅಪ್ಪ-ಮಗನ ಭಿನ್ನಾಭಿಪ್ರಾಯ, ಅಡ್ಡಮತದಾನ ಸಾಧ್ಯತೆ

Akhilesh--1

ಲಕ್ನೋ, ಜು.16-ನಾಳೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮುನ್ನವೇ ಉತ್ತರಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಭಿನ್ನಾಬಿಪ್ರಾಯ ಭುಗಿಲೆದ್ದಿದೆ. ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮತ್ತು ರಾಜ್ಯ ಅಧ್ಯಕ್ಷ ಅಖಿಲೇಶ್ ಯಾದವ್ ಬಣದಲ್ಲಿ ಮತದಾನದ ವಿಷಯದಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿ ಪ್ರತಿಸ್ಪರ್ಧಿ ಅಭ್ಯರ್ಥಿಗಳ ವಿರುದ್ಧ ಮತ ಚಲಾವಣೆಯಾಗಲಿದೆ. ಇದೇ ವೇಳೆ ಚುನಾವಣೆಯಲ್ಲಿ ಅಡ್ಡ-ಮತದಾನದ ಸಾಧ್ಯತೆಯೂ ಇದೆ.  ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯದಿಂದಾಗಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರದಿದ್ದರೂ, ಮತ್ತೆ ಕೌಟುಂಬಿಕ ಕಲಹಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಎನ್‍ಡಿಎ ಅಭ್ಯರ್ಥಿಯಾಗಿ ರಾಮ್‍ನಾಥ್ ಕೋವಿಂದ್ ಅವರು ಆಯ್ಕೆಯಾದ ದಿನದಿಂದಲೂ ಈ ವಿಷಯದಲ್ಲಿ ಪಕ್ಷದ ಉನ್ನತ ನಾಯಕರ ನಡುವೆ ತೀವ್ರ ಭಿನ್ನಾಭಿಪ್ರಾಯದ ಹೊಗೆಯಾಡುತ್ತಿದೆ.

ಕೋವಿಂದ್ ಹೆಸರು ಘೋಷಣೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಯೋಜಿಸಿದ್ದ ಔತಣಕೂಟದಲ್ಲಿ ಮುಲಾಯಂ ಸಿಂಗ್ ಹಾಜರಾಗಿದ್ದರು. ಇದರಿಂದ ಮುಲಾಯಂ ಎನ್‍ಡಿಎ ಅಭ್ಯರ್ಥಿಗೆ ಮತ ನೀಡುವುದು ಸ್ಪಷ್ಟ ಎಂದು ರಾಜಕೀಯ ವಲಯದಲ್ಲಿ ದೃಢಪಟ್ಟಿತ್ತು.  ಇದೇ ಔತಣಕೂಟಕ್ಕೆ ಸಮಾಜವಾದಿ ಪಕ್ಷದ ರಾಜ್ಯ ಅಧ್ಯಕ್ಷ ಅಖಿಲೇಶ್ ಯಾದವ್ ಗೈರು ಹಾಜರಾಗಿ ತಾವು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರ ಪರವಾಗಿ ಇರುವ ಸ್ಪಷ್ಟ ಸಂದೇಶ ರವಾನಿಸಿದ್ದರು.

ಅಪ್ಪ ಮತ್ತು ಮಗ ಈ ವಿಷಯದಲ್ಲಿ ಉತ್ತರ-ದಕ್ಷಿಣ ದಿಕ್ಕಿನೆಡೆ ಸಾಗಿರುವುದು ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಮುಲಾಂ ಮತ್ತು ಅಖಿಲೇಶ್ ಬಣಗಳು ಪರಸ್ಪರ ಪ್ರತಿಸ್ಪರ್ಧಿಗಳಿಗೆ ಮತದಾನ ಹಾಕಲಿದ್ದು, ಇದೇ ವೇಳೆ ಅಡ್ಡ ಮತದಾನ ನಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಸಭೆ :

ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಇಂದಿನಿಂದಲೇ ಚಟುವಟಿಕೆಗಳು ಬಿರುಸಾಗಿದ್ದು, ಎಲ್ಲ ರಾಜ್ಯಗಳ ಸಂಸದರು, ಸಚಿವರು ಮತ್ತು ಶಾಸಕರು ಧಾವಿಸುತ್ತಿದ್ದಾರೆ. ರಾಜಧಾನಿಯಲ್ಲಿ ಇಂದು ಬೆಳಗ್ಗಿನಿಂದಲೇ ಎನ್‍ಡಿಎ ಮತ್ತು ಯುಪಿಎ ಸಭೆಗಳು ನಡೆದವು.  ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಬೆಳಗ್ಗೆ ಕರೆದಿದ್ದ ಸಭೆಯಲ್ಲಿ ಎನ್‍ಡಿಎ ಮಿತ್ರಪಕ್ಷಗಳು ಭಾಗವಹಿಸಿದ್ದವು, ಇನ್ನೊಂದೆಡೆ ಯುಪಿಎ ನೇತೃತ್ದ 18 ಪಕ್ಷಗಳ ಮುಖಂಡರೂ ಸಭೆ ನಡೆಸಿ ಚುನಾವಣೆ ಕುರಿತು ಸಮಾಲೋಚನೆ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin