ಹಿರಿಯ ಅಧಿಕಾರಿಗಳ ಸಂಘರ್ಷದಲ್ಲಿ ಹೈರಾಣಾದ ಖೈದಿಗಳು

Jail

ಬೆಂಗಳೂರು, ಜು.16- ಗಂಡ- ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಬಂಧಿಖಾನೆ ಇಲಾಖೆಯ ಹಿರಿಯ ಅಧಿಕಾರಿಗಳ ಸಂಘರ್ಷದಲ್ಲಿ ಜನಸಾಮಾನ್ಯರು ಮತ್ತು ಖೈದಿಗಳು ಪರಿತಪಿಸುವಂತಾಗಿದೆ. ಖೈದಿಯೊಬ್ಬನ ತಂದೆ ಮೃತಪಟ್ಟಿದ್ದರೂ ಆ ಸುದ್ದಿಯನ್ನು ತಿಳಿಸಲಾಗದೆ, ಅಂತ್ಯಸಂಸ್ಕಾರಕ್ಕೆ ಮಗನನ್ನು ಕರೆದೊಯ್ಯಲಾಗದೆ ಸಂಬಂಧಿಕರು ರೋದಿಸುತ್ತಿದ್ದ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿಂದು ನಡೆದಿದೆ. ತುಮಕೂರು ಮೂಲದ ರಾಜಣ್ಣ ಎಂಬುವರು ಅಪರಾಧ ಕೃತ್ಯವೊಂದರಲ್ಲಿ ಜೈಲು ಪಾಲಾಗಿದ್ದರು. ಇಂದು ಬೆಳಗ್ಗೆ ರಾಜಣ್ಣ ಅವರ ತಂದೆ ಲಕ್ಷ್ಮಿನರಸಿಂಹಯ್ಯ ಮೃತಪಟ್ಟಿದ್ದಾರೆ. ಆದರೆ ಆ ವಿಷಯವನ್ನು ಜೈಲಿನಲ್ಲಿರುವ ರಾಜಣ್ಣನಿಗೆ ತಿಳಿಸಲು ಪತ್ನಿ ಅರುಣಾ, ನಾದಿನಿ ಪ್ರೇಮಾ ಬೆಳಿಗ್ಗೆಯೇ ಆಗಮಿಸಿದ್ದರು.

ಜೈಲಿನಲ್ಲಿ ಗಲಾಟೆಯಾಗುತ್ತಿದೆ. ಯಾರನ್ನೂ ಭೇಟಿ ಮಾಡಲು ಬಿಡುವುದಿಲ್ಲ ಎಂದು ಹೇಳಿ ಜೈಲು ಅಧಿಕಾರಿಗಳು ಅರುಣಾ ಅವರಿಗೆ ರಾಜಣ್ಣ ಅವರ ಭೇಟಿ ಮಾಡುವ ಅವಕಾಶ ನಿರಾಕರಿಸಿದ್ದಾರೆ.  ರಾಜಣ್ಣ ಅವರ ತಂದೆ ನಿಧನರಾಗಿದ್ದು, ಅಂತ್ಯಸಂಸ್ಕಾರಕ್ಕೆ ಮಗನ ಅಗತ್ಯತೆ ಇದೆ. ದಯವಿಟ್ಟು ಕಳುಹಿಸಿಕೊಡಿ ಎಂದು ಅರುಣಾ ಎಷ್ಟೇ ಅಂಗಲಾಚಿದರೂ ಜೈಲು ಅಧಿಕಾರಿಗಳು ಕರುಣೆ ತೋರಲಿಲ್ಲ. ನಾವೇ ಮಾಹಿತಿ ನೀಡುತ್ತೇವೆ ಎಂದು ಹೇಳಿ ಅರುಣಾ ಅವರನ್ನು ಕಳುಹಿಸುವ ಪ್ರಯತ್ನ ಮಾಡಿದ್ದಾರೆ.  ಈ ನಡುವೆ ರಾಜಣ್ಣ ಪರವಾದ ವಕೀಲರು ಸ್ಥಳಕ್ಕಾಗಮಿಸಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ ಜೈಲು ಅಧಿಕಾರಿಗಳು ಸಹಾಯ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇಂದು ಭಾನುವಾರ ರಜಾ ದಿನವಾಗಿರುವುದರಿಂದ ಕೋರ್ಟ್ ಕಲಾಪಗಳು ನಡೆಯುತ್ತಿಲ್ಲ, ಹೀಗಾಗಿ ನ್ಯಾಯಾಲಯದಿಂದ ಅನುಮತಿ ಪಡೆದು ರಾಜಣ್ಣ ಅವರನ್ನು ಕರೆದುಕೊಂಡು ಹೋಗಲು ದುಸ್ತರವಾಗಿದೆ. ಸಂಬಂಧಿಕರು ಇಂದು ಮಧ್ಯಾಹ್ನವೇ ಅಂತ್ಯಕ್ರಿಯೆ ಮಾಡಬೇಕು ಎಂದು ಹೇಳುತ್ತಿದ್ದಾರೆರೆ. ಮಗನಿಲ್ಲದೆ ತಂದೆಗೆ ಅಂತ್ಯಕ್ರಿಯೆ ನಡೆಯಬಾರದು ಎಂದು ಅರುಣಾ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಗೋಳಿಡುತ್ತಿದ್ದರು. ಕಾರಾಗೃಹ ಇಲಾಖೆಯ ಡಿಜಿಪಿ ಸತ್ಯನಾರಾಯಣರಾವ್ ಮತ್ತು ಡಿಐಜಿ ರೂಪಾ ನಡುವಿನ ಸಂಘರ್ಷದಿಂದಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ರೂಪಾ ಅವರಿಗೆ ಜೈಲಿನ ಅವ್ಯವಹಾರಗಳ ಮಾಹಿತಿ ನೀಡಿದ ಖೈದಿಗಳನ್ನು ಬಳ್ಳಾರಿ ಜೈಲಿಗೆ ಎತ್ತಂಗಡಿ ಮಾಡಲಾಗಿದೆ.

ರೂಪಾ ಅವರ ರಹಸ್ಯ ಸಭೆಯ ಮಾಹಿತಿಯನ್ನು ಸೋರಿಕೆ ಮಾಡಿದ ಖೈದಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಜೈಲು ಅಧಿಕಾರಿಗಳು ಮುಂದಾಗಿದ್ದಾರ.
ಈ ಘಟನೆಯಿಂದ ಬಂಧಿಖಾನೆಯಲ್ಲಿರುವ ಇತರ ಖೈದಿಗಳು ರೊಚ್ಚಿಗೆದ್ದಿದ್ದು, ಪ್ರತಿಭಟನೆಗೆ ಮುಂದಾಗುವ ಸಾಧ್ಯತೆಗಳಿದ್ದವು. ಹೀಗಾಗಿ ನಿನ್ನೆಯಿಂದಲೂ ಜೈಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿರುವವರನ್ನು ಭೇಟಿ ಮಾಡಲು ಸಂಬಂಧಿಕರಿಗೆ, ಸ್ನೇಹಿತರಿಗೆ ಅವಕಾಶ ನಿರಾಕರಿಸಿದ್ದರಿಂದ ಬಹಳಷ್ಟು ಮಂದಿ ಪರಿತಪಿಸುವಂತಾಯಿತು. ಅದರಲ್ಲೂ ರಾಜಣ್ಣ ಅವರ ಪ್ರಕರಣ ಜೈಲಿನ ಮುಂದಿದ್ದವರ ಮನ ಕಲಕಿತು.

ಐಪಿಎಸ್‍ಗಳ ಪ್ರತಿಷ್ಠೆಯೇ ಜೈಲು ರಾದ್ಧಾಂತಕ್ಕೆ ಕಾರಣ : 

ಜೈಲು ಸಂಘರ್ಷ ತಾರಕ್ಕೇರಲು ಇಬ್ಬರು ಹಿರಿಯ ಅಧಿಕಾರಿಗಳ ಸ್ವಪ್ರತಿಷ್ಠೆಯೇ ಕಾರಣವಾಯಿತೇ…? ಹೌದು . ಡಿಐಜಿ ರೂಪಾ, ಡಿಜಿಪಿ ಸತ್ಯನಾರಾಯಣರಾವ್ ಅವರು ಸಂಯಮ ವಹಿಸಿದ್ದರೆ ಪೊಲೀಸ್ ಇಲಾಖೆಯ ಮಾನ ಹರಾಜಾಗುತ್ತಿರಲಿಲ್ಲ. ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತಿರಲಿಲ್ಲ.  ಕಳೆದ ಜೂನ್ 29ರಂದು ಡಿಐಜಿ ರೂಪಾ ಅವರು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೈದಿಗಳ ಸೆಲ್‍ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಅವಲೋಕಿಸಿದ್ದಾರೆ. ನ್ಯೂನತೆಗಳ ಬಗ್ಗೆ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ಡಿಜಿಪಿ ಸತ್ಯನಾರಾಯಣರಾವ್ ಅವರು ಈ ಸಂಬಂಧ ಡಿಜಿಪಿ ರೂಪಾ ಅವರಿಗೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್‍ನಿಂದ ಶುರುವಾದ ಈ ಇಬ್ಬರ ನಡುವಿನ ಸಮರ ಈ ಮಟ್ಟಕ್ಕೆ ಬಂದು ನಿಂತಿದೆ.

ಡಿಐಜಿ ರೂಪಾ ಅವರು ಜೈಲಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಮಾನಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಬೇಕು. ಅವರು ಸ್ಪಂದಿಸದಿದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ, ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತರಬೇಕು.  ಆದರೆ ಏಕಾಏಕಿ ಮಾಧ್ಯಮಗಳಲ್ಲಿ ವಿಷಯಗಳು ಬಹಿರಂಗವಾಗಿದೆ. ಡಿಜಿ ಸತ್ಯನಾರಾಯಣ್‍ರಾವ್ ಅವರು ಕೂಡ ತಮ್ಮ ಕೈಕೆಳಗಿನ ಅಧಿಕಾರಿಯೊಬ್ಬರು ಜೈಲಿಗೆ ಭೇಟಿ ನೀಡಿದ ಮಾಹಿತಿಯನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕಿತ್ತು. ಅದನ್ನು ಬಿಟ್ಟು ಅವರಿಗೆ ನೋಟಿಸ್ ನೀಡಿದ್ದಾರೆ.

ಈ ಇಬ್ಬರ ನಡುವಿನ ಶೀತಲ ಸಮರ, ಮುಸುಕಿನ ಗುದ್ದಾಟ, ಪ್ರತಿಷ್ಠೆ ಈಗ ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಇಬ್ಬರು ಸಂಯಮದಿಂದ ವರ್ತಿಸಿದ್ದರೆ ಜೈಲು ವ್ಯವಸ್ಥೆಯನ್ನು ಸುಧಾರಿಸಬಹುದಿತ್ತು. ಮೇಲಾಗಿ ಸತ್ಯನಾರಾಯಣ್ ರಾವ್ ಅವರು ತಿಂಗಳಾಂತ್ಯದಲ್ಲಿ ನಿವೃತ್ತಿಯಾಗುತ್ತಿದ್ದರು. ಆ ಸ್ಥಳಕ್ಕೆ ಬೇರೆಯವರು ಬರುತ್ತಿದ್ದರು.  ರೂಪಾ ಅವರು ವ್ಯವಸ್ಥೆ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಇಬ್ಬರು ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದ ಇಲಾಖೆಯ ಮಾನ ಹಾದಿಬೀದಿಗಳಲ್ಲಿ ಹರಾಜಾಗಿದೆ.

ಪೊಲೀಸ್ ಇಲಾಖೆಗೆ ತನ್ನದೇ ಆದ ಶಿಸ್ತು, ಗೌಪ್ಯತೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳು ಗೌಪ್ಯತೆ, ಶಿಸ್ತು ಕಾಪಾಡಿ ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಬೇಕು. ಆದರೆ ಇವರೇ ಹಾದಿಬೀದಿ ರಂಪ ಮಾಡಿಕೊಂಡರೆ ಕಿರಿಯ ಅಧಿಕಾರಿಗಳು ಹೇಗೆ ನಡೆದುಕೊಳ್ಳುತ್ತಾರೆ. ಅಲ್ಲದೆ ಜೈಲಿನಲ್ಲಿರುವ ಖೈದಿಗಳು ಹೇಗೆ ವರ್ತಿಸುತ್ತಾರೆ. ಶಿಸ್ತು ಹೇಗೆ ಬರಲು ಸಾಧ್ಯ.

ಕಾರಾಗೃಹಗಳಲ್ಲಿನ ಅಕ್ರಮ, ಅವ್ಯವಹಾರಗಳು ಇಂದು ನಿನ್ನೆಯದಲ್ಲ. ರಾತ್ರೋರಾತ್ರಿ ನಿರ್ಮೂಲನೆಯಾಗುವಂತಹ ವ್ಯವಸ್ಥೆ ಕೂಡ ಅಲ್ಲ. ಹಂತ ಹಂತವಾಗಿ ನಿಯಂತ್ರಣಕ್ಕೆ ತರಬೇಕು. ಅಲ್ಲಿನ ಅಕ್ರಮಗಳನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸಿ ನಿರ್ಮೂಲನೆ ಮಾಡುವ ಅಗತ್ಯವೇನಿಲ್ಲ. ಅಕ್ರಮಗಳನ್ನು, ಅನ್ಯಾಯವನ್ನು ಸರಿಪಡಿಸಬೇಕಾದರೆ ಖೈದಿಗಳನ್ನು ಮನವೊಲಿಸಿ ಜೈಲಿನ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕು.  ಕಾರಾಗೃಹಗಳಲ್ಲಿನ ಅಕ್ರಮಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಬ್ಬರು ಕಿತ್ತಾಡಿಕೊಳ್ಳುತ್ತಿರುವುದರ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ.   ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಿದಂತೆ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿದ ನಂತರವೂ, ತನಿಖೆಗೆ ಆದೇಶಿಸಿದ ಮೇಲೂ ಇಬ್ಬರೂ ಅಧಿಕಾರಿಗಳು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮುಂದುವರೆಸಿ ಮುಜಗರ ಉಂಟು ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin