ಎನ್‍ಡಿಎ ಅಭ್ಯರ್ಥಿ ರಾಮ್‍ನಾಥ್ ಕೋವಿಂದ್ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

Meera-Vs-Kovind-Kovi-nd

ನವದೆಹಲಿ, ಜು.17- ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಗಾಂಧಿ ನಡುವಿನ ಪ್ರತಿಷ್ಟೆಯ ಕಣವಾಗಿದ್ದ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ ನಡೆದಿದ್ದು, ನಿರೀಕ್ಷೆಯಂತೆ ಎನ್‍ಡಿಎ ಬೆಂಬಲಿತ ಅಭ್ಯರ್ಥಿ ರಾಮ್‍ನಾಥ್ ಕೋವಿಂದ್ ಆಯ್ಕೆಯಾಗುವುದು ನಿಚ್ಚಳವಾಗಿದೆ.ಇದೇ 20ರಂದು ಮತಗಳ ಎಣಿಕೆ ನಡೆಯಲಿದ್ದು, ಅಂದು ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. 24ರಂದು ಹಾಲಿ ರಾಷ್ಟ್ರಪತಿ ಪ್ರಣಬ್‍ಮುಖರ್ಜಿ ಅಧಿಕಾರಾವಧಿ ಕೊನೆಗೊಂಡು 25ರಂದು ದೇಶದ 14ನೇ ರಾಷ್ಟ್ರಪತಿಯಾಗಿ ರಾಮ್‍ನಾಥ್ ಕೋವಿಂದ್ ಅಧಿಕಾರ ಸ್ವೀಕರಿಸಲಿದ್ದಾರೆ.

ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‍ನಲ್ಲಿ ನೂತನ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಖೇಹರ್ ಸಿಂಗ್ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ಮೋದಿ ಮೇಲುಗೈ:

ರಾಷ್ಟ್ರಪತಿ ಚುನಾವಣೆಯಲ್ಲಿ ಶತಾಯಗತಾಯ ಎನ್‍ಡಿಎ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ ರಾಮ್‍ನಾಥ್ ಕೋವಿಂದ್ ಅವರನ್ನು ಸೋಲಿಸಲು ಮುಂದಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗುವುದು ಬಹುತೇಕ ಖಚಿತ. 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ನಾಗಾಲೋಟವನ್ನು ಕಟ್ಟಿಹಾಕಲು ಪ್ರಯತ್ನಿಸಿದ್ದ ಪ್ರತಿಪಕ್ಷಗಳ ತಂತ್ರಕ್ಕೆ ಮೋದಿ ಪ್ರತಿ ತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಮ್‍ನಾಥ್ ಕೋವಿಂದ್ ಅವರಿಗೆ ಕೇವಲ ಎನ್‍ಡಿಎ ಅಲ್ಲದೆ, ವೈಎಸ್‍ಆರ್, ಜೆಡಿಯು, ಟಿಆರ್‍ಎಸ್, ಬಿಜೆಡಿ ಬೆಂಬಲ ನೀಡಿದ್ದರಿಂದ ಅಗತ್ಯ ಮತಗಳನ್ನು ಕ್ರೂಢೀಕರಿಸುವಲ್ಲಿ ಅವರು ಯಶಸ್ವಿಯಾಗಿದ್ದರು.
ಈಗಾಗಲೇ ನೂತನ ರಾಷ್ಟ್ರಪತಿ ಅಭ್ಯರ್ಥಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಬಿರುಸಿನ ಮತದಾನ:

ಸಂಸತ್ ಭವನ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಿ ಸಂಜೆ 5ಗಂಟೆವರೆಗೆ ನಡೆಯಿತು.  ಸಂಸತ್‍ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‍ಗಾಂಧಿ, ವಿವಿಧ ಪಕ್ಷಗಳ ಸಂಸದರು ಮತ್ತು ಮುಖಂಡರು ಉತ್ಸಾಹದಿಂದ ಮತ ಚಲಾಯಿಸಿದರು.
ದೇಶಾದ್ಯಂತ 32 ಮತದಾನ ಕೇಂದ್ರಗಳಲ್ಲಿ, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಕಾರ್ಯದರ್ಶಿ ಅವರು ರಿಟರ್ನಿಂಗ್ ಆಫೀಸರ್ ಆಗಿದ್ದಾರೆ. ಚುನಾವಣೆಗೆ 33 ವೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದೆ. ಇಬ್ಬರು ವೀಕ್ಷಕರು ಲೋಕಸಭೆಯಲ್ಲಿ ಉಪಸ್ಥಿತರಿರಲಿದ್ದು, ವಿಧಾನಸಭೆಗಳಲ್ಲಿ ಒಬ್ಬರು ಉಪಸ್ಥಿತರಿರಲಿದ್ದಾರೆ.

ವಿಶೇಷ ಪೆನ್ ಬಳಕೆ:

ಮತದಾನ ಕೇಂದ್ರಕ್ಕೆ ಮತದಾರ ಜನಪ್ರತಿನಿಧಿಗಳು ಪೆನ್ನು ತೆಗೆದುಕೊಂಡು ಹೋಗುವಂತಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಚುನಾವಣೆಗೆ ಮತಪತ್ರದಲ್ಲಿ ಟಿಕ್ ಮಾಡುವ ಮೂಲಕ ಮತ ಹಾಕಬೇಕು. ಇದಕ್ಕೆ ಮತದಾನ ಕೇಂದ್ರದಲ್ಲೇ ನೀಡುವ ವಿಶಿಷ್ಟ ನಮೂನೆಯ ಮಾರ್ಕರ್ ಪೆನ್‍ಗಳನ್ನೇ ಬಳಸಬೇಕು. ಮತದಾರರು ತಮ್ಮ ಪೆನ್‍ಗಳಿಂದಲೇ ಟಿಕ್ ಮಾಡಿದರೆ ಮತ ಅಸಿಂಧು ಆಗುತ್ತದೆ. ಆದ್ದರಿಂದ ಈ ಪೆನ್ನನ್ನು ನಿಷೇಧಿಸಲಾಗಿದೆ.
ಆಯಾ ರಾಜ್ಯಗಳ ವಿಧಾನಸಭೆಗಳಲ್ಲಿ ಮುಖ್ಯಮಂತ್ರಿಗಳು, ಸಚಿವರು, ಸಂಸದರು ಮತ್ತು ಶಾಸಕರು ತಮ್ಮ ಹಕ್ಕುಗಳನ್ನು ಚಲಾಯಿಸಿದರು.

ಒಟ್ಟು 4852 ಮತದಾರರಿದ್ದು, ಇವರಲ್ಲಿ 748 ಸಂಸದರು ಮತ್ತು 4,104 ಶಾಸಕರಿದ್ದಾರೆ. ವಿಧಾನಪರಿಷತ್ ಸದಸ್ಯರು, ಇಬ್ಬರು ಆಂಗ್ಲೋ ಇಂಡಿಯನ್ನರು, ರಾಜ್ಯಸಭೆಯ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ. ಇನ್ನು ಸಂಸತ್ತಿನಲ್ಲಿ 10 ಸ್ಥಾನಗಳು ಖಾಲಿ ಇವೆ.
ರಾಮನಾಥ್ ಕೋವಿಂದ್ ಪರ ಶೇ.60.30. ಇದರಲ್ಲಿ ಎನ್‍ಡಿಎ ಮತಗಳ ಮೌಲ್ಯ-5,27,371 ಹಾಗೂ ಎನ್‍ಡಿಎ ಬೆಂಬಲಿಗರ ಮತಗಳ ಮೌಲ್ಯ-1,33,90, ಹೀಗಾಗಿ ಒಟ್ಟು ಮತ-6,61,228 ಹಾಗೂ ಮೀರಾ ಕುಮಾರ್ ಪರ ಶೇ.39.70, ಇದರಲ್ಲಿ ಯುಪಿಎ ಮಿತ್ರಪಕ್ಷದ ಮತಗಳ ಬೆಂಬಲ-1,73,849 ಹಾಗೂ ಯುಪಿಎ ಬೆಂಬಲಿಗರ ಮತಗಳು-2,60,392, ಹೀಗಾಗಿ ಒಟ್ಟು ಮತ-4,34,241.

ಒಟ್ಟು ಮತದಾರರಲ್ಲಿ ಶೇ.9ರಷ್ಟು ಮಹಿಳೆಯರಿದ್ದಾರೆ ಹಾಗೂ ಶೇ.71ರಷ್ಟು ಕೋಟ್ಯಾಧಿಪತಿಗಳಿದ್ಧಾರೆ. ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಮತದಾರರ ಪ್ರಮಾಣ ಶೇ.33ರಷ್ಟಿದೆ. ಶೇ.63ರಷ್ಟು ಮತದಾರರು ಬಿಹಾರದ ಮಾಜಿ ರಾಜ್ಯಪಾಲ ಕೋವಿಂದ್ ಅವರಿಗೆ ಈಗಾಗಲೇ ಬೆಂಬಲ ಘೋಷಿಸಿದ್ದು, ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.  ಲೋಕಸಭೆ ಮಾಜಿ ಸಭಾಧ್ಯಕ್ಷೆ ಮೀರಾ ಕುಮಾರ್ ಅವರಿಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಜೆಡಿಎಸ್ ಸೇರಿದಂತೆ 16 ಪಕ್ಷಗಳು ಬೆಂಬಲ ನೀಡಿವೆ.

71 ವರ್ಷದ ಕೋವಿಂದ್ ಉತ್ತಮ ಧುರೀಣರೆಂಬ ವರ್ಚಸ್ಸು ಹೊಂದಿದ್ದಾರೆ. ಕಾನೂನು ಮತ್ತು ಸಂವಿಧಾನದಲ್ಲಿ ಪಾಂಡಿತ್ಯ ಹೊಂದಿರುವ ಅವರು ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಸರಳ ವ್ಯಕ್ತಿತ್ವದವರು. ಮಾಜಿ ಉಪ ಪ್ರಧಾನಮಂತ್ರಿ ಬಾಬು ಜಗಜೀವನರಾಂ ಅವರ ಪುತ್ರಿಯಾದ ಅವರು ಲೋಕಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. ಕಾನೂನು ಪರಿಣಿತರು ಹಾಗೂ ವಿದೇಶಿ ನೀತಿಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಮತಗಳ ಎಣಿಕೆ ಇದೇ 20ರಂದು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ದೇಶದ 14ನೇ ಪ್ರಥಮ ಪ್ರಜೆ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಒಟ್ಟು ಮತಗಳ ಮೌಲ್ಯ – 10,95,519
ಎನ್‍ಡಿಎ – 6,61,278 – 60.30%
ಯುಪಿಎ – 4,34,241 – 39.70%

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin