ಜೈಲು ಅವ್ಯವಹಾರ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು,ಜು.17-ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ಡಿಐಜಿ ಮತ್ತು ಡಿಜಿಪಿ ನಡುವಿನ ಸಂಘರ್ಷವನ್ನು ಗಮನಿಸಿದರೆ ಸರ್ಕಾರದ ದಿವಾಳಿತನ ಪ್ರದರ್ಶನವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.  ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ರಾಷ್ಟ್ರಪತಿ ಚುನಾವಣೆ ಮತದಾನಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜೈಲಿನಲ್ಲಿ ನಡೆದಿರುವ ಭ್ರಷ್ಟಾಚಾರ, ಅಧಿಕಾರಿಗಳ ನಡುವಿನ ಬಹಿರಂಗ ಆರೋಪ, ಪ್ರತ್ಯಾರೋಪಗಳನ್ನು ಗಮನಿಸಿದರೆ ಸರ್ಕಾರ ದಿವಾಳಿಯ ಹಂತಕ್ಕೆ ತಲುಪಿದೆ. ಯಾರ ಮೇಲೂ ಸರ್ಕಾರಕ್ಕೆ ಹಿಡಿತವಿದ್ದಂತಿಲ್ಲ ಎಂದು ಹೇಳಿದರು.  ಡಿಐಜಿ ರೂಪಾ, ಡಿಜಿ ಸತ್ಯನಾರಯಣ್ ಅವರು ಒಂದೊಂದು ವರದಿ  ಕೊಡುತ್ತಾರೆ. ಯಾರ ಮೇಲೂ ಯಾರಿಗೂ ನಿಯಂತ್ರಣವಿಲ್ಲದಂತಾಗಿದೆ. ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ , ಗುಪ್ತಚರ ಇಲಾಖೆಯ ಡಿಜಿಪಿ ಎಂ.ಎನ್.ರೆಡ್ಡಿ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಈಗಲಾದರೂ ಅವರಿಗೆ ಜ್ಞಾನೋದಯವಾದಂತಾಗಿದೆ. ಇಲಾಖೆಯ ವೈಫಲ್ಯದಿಂದ ಇಷ್ಟೆಲ್ಲ ರಾದ್ದಾಂತವಾಗಿದೆ ಎಂದರು.

ಜೈಲಿನ ಅಕ್ರಮಗಳ ಮಾಹಿತಿ ಹಿನ್ನೆಲೆಯಲ್ಲಿ ಅಲ್ಲಿನ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ. ಜೈಲು ಸಿಬ್ಬಂದಿ ಅನಾಗರಿಕವಾಗಿ ವರ್ತಿಸಿದ್ದಾರೆ. ಕೈದಿಗಳನ್ನು ಸ್ಥಳಾಂತರ ಮಾಡಿರುವುದರಿಂದ ಅವರ ಕುಟುಂಬದವರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಅಲ್ಲಿನ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ವಿಫಲ:

ನುಡಿದಂತೆ ನಡೆದಿದ್ದೀವಿ ಎಂದು ನಾಲ್ಕು ಪುಟಗಳ ಜಾಹಿರಾತನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಪಾರದರ್ಶಕ ಆಡಳಿತವಿಲ್ಲ. ಭ್ರಷ್ಟಾಚಾರ ನಿಯಂತ್ರಿಸಿಲ್ಲ. ಮೊದಲ ಹೆಜ್ಜೆಯಲ್ಲೇ ಅವರು ವಿಫಲರಾಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin