ಡಿ.ಕೆ.ಶಂಕರಮೂರ್ತಿ, ವೆಂಕಯ್ಯನಾಯ್ಡು ಇಬ್ಬರಲ್ಲಿ ಒಬ್ಬರಿಗೆ ಉಪರಾಷ್ಟ್ರಪತಿ ಹುದ್ದೆ ಸಾಧ್ಯತೆ..?

ಈ ಸುದ್ದಿಯನ್ನು ಶೇರ್ ಮಾಡಿ

Venkaiah--naidu

ಬೆಂಗಳೂರು, ಜು.17- ವಿಧಾನಪರಿಷತ್ ಸಭಾಧ್ಯಕ್ಷ ಡಿ.ಕೆ.ಶಂಕರಮೂರ್ತಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರಲ್ಲಿ ಒಬ್ಬರಿಗೆ ಉಪರಾಷ್ಟ್ರಪತಿ ಹುದ್ದೆ ದೊರೆಯುವ ಸಂಭವವಿದೆ. ಇಂದು ಸಂಜೆಯೊಳಗೆ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿ ಕೂಟ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಷಾ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟಿಸಲಿದ್ದಾರೆ. ಮೂಲಗಳ ಪ್ರಕಾರ ಕರ್ನಾಟಕ ವಿಧಾನಪರಿಷತ್ ಸಭಾಧ್ಯಕ್ಷರಾದ ಡಿ.ಎಚ್.ಶಂಕರಮೂರ್ತಿ ಇಲ್ಲವೇ ವೆಂಕಯ್ಯನಾಯ್ಡು ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಪರಿಗಣಿಸಲು ಪ್ರಧಾನಿ ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ. [ ರಾಷ್ಟ್ರಪತಿ ಚುನಾವಣೆ (Live Updates) ]

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಎನ್‍ಡಿಎ ಅಭ್ಯರ್ಥಿ ರಾಮ್‍ನಾಥ್ ಕೋವಿಂದ್ ಉತ್ತರ ಭಾರತಕ್ಕೆ ಸೇರಿದ್ದಾರೆ. ಉಪರಾಷ್ಟ್ರಪತಿ ಹುದ್ದೆಯನ್ನು ದಕ್ಷಿಣ ಭಾರತದವರಿಗೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಆನೆ ಬಲ ಬರುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಉಪರಾಷ್ಟ್ರಪತಿ ಹುದ್ದೆ ಅಲಂಕರಿಸಲು ವೆಂಕಯ್ಯನಾಯ್ಡು ನಿರಾಕರಿಸಿದ್ದಾರೆ. ನಾನು ಸದ್ಯಕ್ಕೆ ಮೋದಿ ಸಂಪುಟದಲ್ಲಿ ಸಂತೃಪ್ತನಾಗಿದ್ದೇನೆ. ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸುವಂತಹ ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ಪರ್ಧೆಯಲ್ಲಿಲ್ಲ ಎಂಬ ಸುಳಿವು ನೀಡಿದ್ದಾರೆ.

ಇನ್ನು ಆರ್‍ಎಸ್‍ಎಸ್ ಮೂಲದಿಂದ ಬಂದಿರುವ ಶಂಕರಮೂರ್ತಿ ಬಿಜೆಪಿಯ ಹಿರಿಯ ಕಟ್ಟಾಳುಗಳಲ್ಲಿ ಒಬ್ಬರು. ಈಗಲೂ ಸಂಘ-ಪರಿವಾರದ ಮೇಲೆ ಅಪಾರ ನಿಷ್ಟೆಯನ್ನು ಇಟ್ಟುಕೊಂಡಿದ್ದಾರೆ. ಜನಸಂಘದ ಹಿನ್ನೆಲೆಯಲ್ಲಿ ಬಂದಿರುವ ಶಂಕರಮೂರ್ತಿ ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ, ಬಿಜೆಪಿ ಭೀಷ್ಮ ಪಿತಾಮಹ ಎಲ್.ಕೆ.ಅಡ್ವಾಣಿ ಸೇರಿದಂತೆ ಆರ್‍ಎಸ್‍ಎಸ್ ನಾಯಕರ ಜತೆ ಬೆಳೆದು ಬಂದವರು. ಈ ಹಿಂದೆ ಅವರನ್ನು ರಾಜ್ಯಪಾಲರ ಹುದ್ದೆಗೆ ಬಿಜೆಪಿ ಪರಿಗಣಿಸಿತ್ತು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಯಾವುದಾದರೊಂದು ರಾಜ್ಯಕ್ಕೆ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಸುದ್ದಿ ಪಕ್ಷದ ವಲಯದಲ್ಲಿ ಹಬ್ಬಿತ್ತು.

ಆದರೆ, ಕೇಂದ್ರದಲ್ಲಿ ನಡೆದ ಕ್ಷಿಪ್ರ ಬೆಳೆವಣಿಗೆಗಳು ಹಾಗೂ ಸ್ವತಃ ಶಂಕರಮೂರ್ತಿ ಮೇಲೆ ಕೇಳಿ ಬಂದ ಕೆಲ ಆಪಾದನೆಗಳಿಂದ ರಾಜ್ಯಪಾಲರ ಹುದ್ದೆ ಕೂದಲೆಳೆ ಅಂತರದಲ್ಲಿ ಕೈ ತಪ್ಪಿ ಹೋಗಿತ್ತು.  ಇದೀಗ ಶಂಕರಮೂರ್ತಿ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾದರೆ ಆಯ್ಕೆಯಾಗುವುದು ಖಚಿತ. ಏಕೆಂದರೆ ಲೋಕಸಭೆಯಲ್ಲಿ ಎನ್‍ಡಿಎ ಸ್ಪಷ್ಟ ಬಹುಮತ ಹೊಂದಿರುವುದರಿಂದ ರಾಜ್ಯಸಭೆಯಲ್ಲೂ ಮೈತ್ರಿ ಪಕ್ಷಗಳು ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ.
ಈಗಿನ ಬಲಾಬಲದ ಪ್ರಕಾರ ಎನ್‍ಡಿಎಯಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಗೆಲುವು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಷ್ಟ್ರಪತಿ ಮಹಾತ್ಮಾಗಾಂಧೀಜಿಯವರ ಮೊಮ್ಮಗ ಗೋಪಾಲ್‍ಗಾಂಧಿ ಕಣಕ್ಕಿಳಿದಿದ್ದಾರೆ.

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಬಿಜೆಪಿ ಉಪರಾಷ್ಟ್ರಪತಿ ಹುದ್ದೆಗೆ ಶಂಕರಮೂರ್ತಿ ಅವರನ್ನು ಕಣಕ್ಕಳಿಸಿದರೆ ದೇಶದ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಕರ್ನಾಟಕದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಈ ಹಿಂದೆ ಉಪರಾಷ್ಟ್ರಪತಿಯಾಗಿ ಬಿ.ಡಿ.ಜತ್ತಿ ಅವರು ಕಾರ್ಯ ನಿರ್ವಹಿಸಿದ್ದರು. ಆ.5ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಲಿ ಉಪರಾಷ್ಟ್ರಪತಿ ಅಮೀದ್ ಅನ್ಸಾರಿ ಅಧಿಕಾರವಧಿ ಆ.4ಕ್ಕೆ ಕೊನೆಗೊಳ್ಳಲಿದ್ದು, 5ರಂದು ಮತದಾನ ನಡೆದು ಅಂದು ಸಂಜೆ ಫಲಿತಾಂಶ ಹೊರ ಬೀಳಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ಸಂಸದರು ಮತ್ತು ರಾಜ್ಯಸಭೆ ಸದಸ್ಯರು ಮಾತ್ರ ಮತದಾನದ ಹಕ್ಕು ಹೊಂದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin