ಡಿ.ರೂಪಾ ಸೇರಿ ಹಲವು ಪೊಲೀಸ್ ಅಧಿಕಾರಿಗಳ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

Roopa-Parappana-Agrahara--0

ಬೆಂಗಳೂರು, ಜು.17-ಸರ್ಕಾರಕ್ಕೆ ತೀವ್ರ ಮುಜುಗರಕ್ಕೀಡು ಮಾಡಿದ್ದ ಮಂಗಳೂರು ಕೋಮುಗಲಭೆ ಪ್ರಕರಣ ಮತ್ತು ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ರಾದ್ಧಾಂತ ಪ್ರಕರಣಕ್ಕೆ ಹಿರಿಯ ಅಧಿಕಾರಿಗಳ ತಲೆದಂಡವಾಗಿದೆ. ವಿವಾದದ ಕೇಂದ್ರಬಿಂದುವಾಗಿದ್ದ ಬಂಧಿಖಾನೆ ಹಿರಿಯ ಅಧಿಕಾರಿಗಳು ಮತ್ತು ಗುಪ್ತದಳದ ಡಿಜಿಪಿಯವರನ್ನು ಸರ್ಕಾರ ಎತ್ತಂಗಡಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಅದರಲ್ಲಿ ಬಂಧಿಖಾನೆ ಇಲಾಖೆಯ ಡಿಜಿಪಿ ಸತ್ಯನಾರಾಯಣರಾವ್ ಅವರನ್ನು ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಜೈಲಿನ ಅವ್ಯವಹಾರಗಳ ಬಗ್ಗೆ ವರದಿ ನೀಡಿ ಅದನ್ನು ಮಾಧ್ಯಮಗಳಿಗೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಮತ್ತು ಬಹಿರಂಗ ಹೇಳಿಕೆಗಳನ್ನು ನೀಡಿ ಪದೇ ಪದೇ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದ ಬಂಧಿಖಾನೆ ಇಲಾಖೆಯ ಡಿಐಜಿ ರೂಪಾ ಅವರನ್ನು ವರ್ಗಾವಣೆ ಮಾಡಿದ್ದು, ಬೆಂಗಳೂರು ನಗರದ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಗಿದೆ. ಮಂಗಳೂರು ಗಲಭೆ ಮತ್ತು ಜೈಲು ರಾದ್ಧಾಂತ ಪ್ರಕರಣದಲ್ಲಿ ಸೂಕ್ತ ಮಾಹಿತಿ ಸಂಗ್ರಹಿಸಿ, ಸರ್ಕಾರಕ್ಕೆ ನೀಡದೆ ದೊಡ್ಡ ರಾದ್ಧಾಂತ ಸೃಷ್ಟಿಯಾಗಲು ಅವಕಾಶ ಮಾಡಿಕೊಟ್ಟ ಗುಪ್ತದಳಕ್ಕೂ ಸಿಎಂ ಚಾಟಿ ಬೀಸಿದ್ದಾರೆ.

ಡಿಜಿಪಿ ಎಂ.ಎನ್.ರೆಡ್ಡಿ ಅವರನ್ನು ವರ್ಗಾವಣೆ ಮಾಡಿ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಮಹಾನಿರ್ದೇಶಕರನ್ನಾಗಿ ನಿಯೋಜಿಸಿದ್ದಾರೆ. ನಿನ್ನೆಯಷ್ಟೆ ಎಂ.ಎನ್.ರೆಡ್ಡಿಯವರನ್ನು ಮನೆಗೆ ಕರೆಸಿಕೊಂಡಿದ್ದ ಮುಖ್ಯಮಂತ್ರಿಯವರು ಈ ಎರಡೂ ಪ್ರಕರಣಗಳ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಈವರೆಗೂ ಭ್ರಷ್ಟಾಚಾರ ನಿಗ್ರಹದಳದಲ್ಲಿ ಡಿಜಿಪಿಯಾಗಿ ಕೆಲಸ ಮಾಡುತ್ತಿದ್ದ ಎಂ.ಎಸ್.ಮೆಘರಿಕ್ ಅವರನ್ನು ಬಂಧಿಖಾನೆ ಇಲಾಖೆಯ ಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರದ ಸಂಚಾರ ವಿಭಾಗದ ಆಯುಕ್ತರಾಗಿದ್ದ ಎ.ಎಸ್.ಎನ್.ಮೂರ್ತಿ ಅವರನ್ನು ಅರಣ್ಯಕೋಶದ ಎಡಿಜಿಪಿಯನ್ನಾಗಿ ನೇಮಿಸಲಾಗಿದೆ. ಗುಪ್ತದಳದ ಡಿಜಿಪಿ ಎಂ.ಎನ್.ರೆಡ್ಡಿ ವರ್ಗಾವಣೆಯಿಂದ ತೆರವಾದ ಸ್ಥಾನ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನಿಭಾಯಿಸಲು ಗುಪ್ತದಳದ ಐಜಿಪಿಯಾಗಿರುವ ಅಮೃತ್‍ಪಾಲ್ ಅವರಿಗೆ ಅಧಿಕಾರ ನೀಡಲಾಗಿದೆ.  ಈ ಮೂಲಕ ಇತ್ತೀಚಿನ ದಿನಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ಪ್ರಕರಣಗಳನ್ನು ತಹಬದಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಸಾಹಸಪಟ್ಟಿದ್ದಾರೆ.

ಎನ್.ಎಸ್.ಮೆಘರಿಕ್-ಎಡಿಜಿಪಿ(ಕಾರಾಗೃಹ)
ಡಾ.ಎ.ಎಸ್.ಎನ್.ಮೂರ್ತಿ-ಎಡಿಜಿಪಿ (ಫಾರೆಸ್ಟ್‍ಸೆಲ್)
ಅಮ್ರಿತ್‍ಪೌಲ್-ಡಿಜಿಪಿ(ಗುಪ್ತದಳ)
ಡಿ.ರೂಪಾ-ಆಯುಕ್ತರು (ಬೆಂಗಳೂರು ಸಂಚಾರ ವಿಭಾಗ)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin