ರಾಷ್ಟ್ರಪತಿ ಚುನಾವಣೆ : ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಶಾಸಕರಿಂದ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Voting--01

ಬೆಂಗಳೂರು,ಜು.17-ರಾಷ್ಟ್ರಪತಿ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ರಾಜ್ಯದ ಶಾಸಕರು ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತ ಚಲಾಯಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ಹೆಚ್.ಸಿ.ಮಹದೇವಪ್ಪ, ರಮಾನಾಥ ರೈ, ಎಂ.ಕೃಷ್ಣಪ್ಪ , ಶಾಸಕರಾದ ಸಿ.ಟಿ.ರವಿ, ಅರವಿಂದ್ ಲಿಂಬಾವಳಿ ಸೇರಿದಂತೆ ಎಲ್ಲ ಶಾಸಕರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. [ ರಾಷ್ಟ್ರಪತಿ ಚುನಾವಣೆ (Live Updates) ]

ಸಂಸದ ಪ್ರಕಾಶ್ ಹುಕ್ಕೇರಿ ಹೊರತುಪಡಿಸಿ ರಾಜ್ಯದ ಎಲ್ಲ 27 ಸಂಸದರೂ ದೆಹಲಿಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು. ಸಂಸದ ಪ್ರಕಾಶ್ ಹುಕ್ಕೇರಿ ಅವರು ಇಲ್ಲಿಂದಲೇ ಮತ ಚಲಾಯಿಸಲಿದ್ದಾರೆ.  ಶಾಸಕರು ಮತ ಚಲಾವಣೆಗೂ ಮುನ್ನ ಮೂರೂ ಪಕ್ಷಗಳ ಶಾಸಕಾಂಗ ಪಕ್ಷದ ಸಭೆಗಳು ನಡೆದವು. ಸಭೆಯಲ್ಲಿ ಶಾಸಕಾಂಗ ನಾಯಕರು ಮತ ಚಲಾವಣೆ ಬಗ್ಗೆ ಮಾಹಿತಿ ನೀಡಿದರು.  ಪ್ರತಿ ಮತವೂ ಅಮೂಲ್ಯವಾಗಿದ್ದು , ಎಚ್ಚರಿಕೆಯಿಂದ ಮತ ಚಲಾಯಿಸುವ ಸೂಚನೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರಿಂದ ಬಂದಿತು. ನಂತರ ಎಲ್ಲ ಶಾಸಕರು ಸರತಿಸಾಲಿನಲ್ಲಿ ನಿಂತು ಮತ ಹಾಕಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಂದೇ ನಿಂತು ತಮ್ಮ ಶಾಸಕರಿಗೆ ಯಾವ ರೀತಿ ಮತ ಚಲಾಯಿಸಬೇಕೆಂಬ ಸೂಚನೆ ನೀಡುತ್ತಿದ್ದರು.  ಅದೇ ರೀತಿ ಬಿಜೆಪಿಯಿಂದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್‍ನಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಶಾಸಕರುಗಳಿಗೆ ಮತದಾನದ ಸೂಚನೆ ನೀಡಿದರು.   ಯುಪಿಎ ಅಭ್ಯರ್ಥಿ ಮೀರಾಕುಮಾರ್ ಏಜೆಂಟರ್ ಆಗಿ ಕೆ.ಎಸ್.ಬೋಸರಾಜ್, ಎನ್‍ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರ ಪರವಾಗಿ ಸುನೀಲ್‍ಕುಮಾರ್ ಕಾರ್ಯ ನಿರ್ವಹಿಸಿದರು.

ಮತಕೇಂದ್ರಕ್ಕೆ ತೆರಳುವ ಮುನ್ನ ಶಾಸಕರು ತಮ್ಮ ಬಳಿ ಇದ್ದ ಪೆನ್ನು, ಮೊಬೈಲ್ ಎಲ್ಲವನ್ನೂ ಹೊರಗಿಟ್ಟು ಚುನಾವಣಾ ಅಧಿಕಾರಿಗಳು ನೀಡುವ ಪೆನ್ನನ್ನು ಪಡೆದು ಒಳ ಹೋಗಿ ಅದೇ ಪೆನ್‍ನಲ್ಲಿ ಮತ ಪತ್ರದಲ್ಲಿ ಪ್ರಾಶಸ್ತ್ಯದ ಮತವನ್ನು ಗುರುತು ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅದೇ ಕ್ರಮದಂತೆ ಶಾಸಕರು ಮತ ಚಲಾವಣೆ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin