ಸೌಂದರ್ಯವರ್ಧನೆ ಜೊತೆಗೆ ಆರೋಗ್ಯಕ್ಕಾಗಿ ‘ಅಭ್ಯಂಗ ಸ್ನಾನ’ ಮಾಡಿನೋಡಿ

Abhyanga-Snana-Batha

ತಲೆ, ಕುತ್ತಿಗೆ ಮತ್ತು ಮುಖದ ಅಭ್ಯಂಗ :
ಕುತ್ತಿಗೆಯ ಮೇಲ್ಬಾಗ ತಲೆ ಮತ್ತು ಮುಖ, ಇವು ದೇಹದ ಅತಿಪ್ರಮುಖ ಅಂಗಗಳು. ತಲೆ, ಇಂದ್ರಿಯ ಮತ್ತು ಮನಸ್ಸಿನ ಅವಾಸಸ್ಥಾನವಾಗಿದೆ. ಮುಖ, ವ್ಯಕ್ತಿಯ ರೂಪು ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಅಂಗ. ಈ ಅಂಗಗಳಿಗೆ ಪ್ರತಿದಿನ ಅಭ್ಯಂಗ ಸ್ನಾನ ಮಾಡುವುದರಿಂದ, ಇಂದ್ರಿಯಗಳಿಗೆ ಪುಷ್ಟಿ ಉಂಟಾಗಿ ಅವುಗಳ ಕ್ರಿಯಾಶೀಲತೆ ಹೆಚ್ಚುತ್ತದೆ. ಕೂದಲು ಕಪ್ಪಾಗಿ, ದಟ್ಟವಾಗಿ ಬೆಳೆಯುತ್ತವೆ. ಅಕಾಲಿಕ ನರೆ ದೂರವಾಗುತ್ತದೆ. ಕೂದಲಿನ ಸೌಂದರ್ಯವರ್ಧನೆಗೆ ಅಭ್ಯಂಗ ಸ್ನಾನ ಒಂದು ಪ್ರಕೃತಿಕ ಚಿಕಿತ್ಸೆ.

ಇಂದಿನ ಯಾಂತ್ರಿಕ ಯುಗದಲ್ಲಿ ಅನಿದ್ರತ ಒಂದು ಶಾಪವಾಗಿ ಬಹುಜನರನ್ನು ಕಾಡುತ್ತದೆ. ನಿದ್ರೆಗಾಗಿ ಪ್ರತಿದಿನ ಗುಳಿಗೆಗಳನ್ನು ನೂಂಗಿ ಮೈ ಮತ್ತು ಮನಸ್ಸಿನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಇಂದಿನ ನವ ಪೀಳಿಗೆಗೆ ಅಭ್ಯಂಗ ಒಂದು ವರದಾನ. ಅಭ್ಯಂಗಕ್ಕೆ ಉಪಯೋಗಿಸುವ ತೈಲಗಳನ್ನು ವ್ಯಕ್ತಿಯ ಪ್ರಕೃತಿಯನ್ನು ಅನುಸರಿಸಿ ಆಯ್ದುಕೊಳ್ಳುವುದು ಒಳ್ಳೆಯದು. ಸೌಂದರ್ಯವರ್ಧನೆಗೆ, ಇದೇ ರೀತಿ ಮುಖದ ಸೌಂದರ್ಯವನ್ನು ಬಯಸುವವರು, ಕೃತಕ ಆಧುನಿಕ ಸೌಂದರ್ಯ ವರ್ಧಕಗಳನ್ನು ಸೌಂದರ್ಯವನ್ನು ಬಯಸುವವರು, ಕೃತಕ ಆಧುನಿಕ ಸೌಂದರ್ಯ ವರ್ಧಕಗಳನ್ನು ಉಪಯೋಗಿಸಿ ಅಪಾಯ ತಂದುಕೊಳ್ಳುವ ಬದಲು, ಪ್ರತಿ ನಿತ್ಯ ಮುಖಕ್ಕೆ ಕೆಲವು ಭಷಧಿಯುಕ್ತ ತೈಲಗಳನ್ನು ಉಪಯೋಗಿಸಿ ತೈಲಾಂಭ್ಯಂಗ ಮಾಡುವುದರಿಂದ ಸಹಜ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

Abhyanga-Snana-Batha-1

ಈ ರೀತಿ ಮಾಡುವುದರಿಂದ, ಮುಖದಲ್ಲಿ ಉಂಟಾಗಬಹುದುದಾದ ಮೊಡವೆ, ಕಲೆಗಳು ಬಿರುವುದಿಲ್ಲ, ಚರ್ಮದ ಸುಕ್ಕು ದೂರವಾಗುತ್ತದೆ. ಚರ್ಮವು ಮೃದುವಾಗಿ ಕಾಂತಿಯುತವಾಗಿ ಮುಖದ ಸೌಂದರ್ಯ ಸದಾ ಕಾಲ ಇರುತ್ತದೆ. ಚರ್ಮವು ಮಾನವನ ದೇಹದ ಅತಿ ಮಹತ್ವದ ಅಂಗ. ಪಂಚೇಂದ್ರಿಯಗಳಲ್ಲಿ ಒಂದಾದ ಸ್ಪರ್ಶನೇಂದ್ರಿಯ ಹಾಗೂ ದೇಹದಲ್ಲಿ ಉಂಟಾದ ಮಲವನ್ನು ಬೆವರಿನ ಮೂಲಕ ಹೊರಗೆ ಹಾಕಿ, ದೇಹವನ್ನು ಶುದ್ಧಿ ಮಾಡುವ ಶುದ್ಧೀಕರಣಾಂಗಗಳಲ್ಲಿ ಒಂದು. ಶರೀರದ ಉಷ್ಣತೆಯನ್ನು ನಿಯಂತ್ರಿಸಿ, ಹೊರಗಿನ ಬಿಸಿಲು, ಗಾಳಿ ಮುಂತಾದವುಗಳಿಂದ ಶರೀರವನ್ನು ಕಾಪಾಡುತ್ತದೆ.

ದೇಹದ ಮೂಳೆ, ಮಾಂಸ, ರಕ್ತನಾಳ, ನರ ಮುಂತಾದವುಗಳ ರಕ್ಷಾಕವಚ ಹಾಗೂ ದೇಹಕ್ಕೆ ಒಂದು ಸ್ವರೂಪ ಮತ್ತು ಸೌಂದರ್ಯವನ್ನು ಕೊಡುವ ಚರ್ಮ ದೇಹದ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಚರ್ಮದ ಆರೋಗ್ಯ ರಕ್ಷಣೆಯಲ್ಲಿ ತೈಲಾಂಭ್ಯಂಗದ ಪಾತ್ರ ಮಹತ್ತರವಾದುದು.

ರೋಗ ನಿರೋಧಕ :

ಅಭ್ಯಂಗನ ಮಾಡುವಾಗ ಹಚ್ಚುವ ತೈಲವು ಚರ್ಮದ ಒಳಭಾಗದಲ್ಲಿರುವ ನರ ರಕ್ತನಾಳಗಳ ತುದಿಯನ್ನು ಉತ್ತೇಜನಗೊಳಿಸಿ ಅವುಗಳ ಕಾರ್ಯ ಚಟುವಟಿಕೆಯನ್ನು ಹೆಚ್ಚು ಮಾಡುತ್ತದೆ. ಹೊರಗಿನ ಋತು ವೈಪರೀತ್ಯಗಳಿಂದ ದೇಹಕ್ಕೆ ಮತ್ತು ಚರ್ಮಕ್ಕೆ ಆಗಬಹುದಾದ ಅಪಾಯಗಳನ್ನು ತಡೆಯುವ ಶಕ್ತಿ ಉಂಟಾಗುತ್ತದೆ.  ಆಯುರ್ವೇದ ಗ್ರಂಥಗಳಲ್ಲಿ ಅಭ್ಯಂಗವನ್ನು ತಲೆ ಮತ್ತು ಪಾದಗಳಿಗೆ ವಿಶೇಷವಾಗಿ ಮಾಡಬೇಕೆಂದು ಹೇಳಿದೆ:  ಪಾದಗಳಿಗೆ ತೈಲಾಂಭ್ಯಂಗ ಮಾಡುವುದರಿಂದ ಪಾದಗಳು ದೃಢವಾಗಿ ಮೃದುವಾಗುತ್ತವೆ. ಕಾಲು ಒಡೆಯುವುದು, ಪಾದದಲ್ಲಿ ಉಂಟಾಗುವ ಅಣಿ ಚುಚ್ಚುವಿಕೆ ಮುಂತಾದ ರೋಗಗಳು ಬಾರದ ಹಾಗೆ ತಡೆಗಟ್ಟುವ ಶಕ್ತಿ ಅಭ್ಯಂಗಕ್ಕೆ ಇದೆ.

Abhyanga-Snana-Batha-2

ಪಾದಗಳು ಬಲವಾಗಿ, ಸ್ಥಿರವಾಗಿ, ಕೋಮಲವಾಗುತ್ತವೆ. ದೃಷ್ಟಿ ಪ್ರಸನ್ನವಾಗುತ್ತದೆ. ಚೆನ್ನಾಗಿ ನಿದ್ರೆ ಬರುತ್ತದೆ. ಕಾಲಿನ ಕೀಲುಗಳಲ್ಲಿ ಮತ್ತು ಸೊಂಟದ ಭಾಗದಲ್ಲಿ ಉಂಟಾಗುವ ವಾಯು ರೋಗಗಳು ಶಮನವಾಗುತ್ತವೆ. ಈ ರೀತಿಯಾಗಿ ಪಾದಾಭ್ಯಾಂಗವು ಆರೋಗ್ಯ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.  ದೇಹದ ಹೊರ ಭಾಗವಾದ ಚರ್ಮಕ್ಕೆ ಹಚ್ಚಿದ ತೈಲವು ಅದರಲ್ಲಿರುವ ರೋಮಕೂಪಗಳಿಂದಲೂ, ಧಮನಿಗಳಿಂದಲೂ ದೇಹವನ್ನು ಸೇರಿ ಎಲ್ಲಾ ಧಾತುಗಳಲ್ಲಿ ಬಲವನ್ನೂ, ಪುಷ್ಟಿಯನ್ನೂ ಉಂಟುಮಾಡುತ್ತದೆ. ಸೂಕ್ಷ್ಮ ರಕ್ತನಾಳಗಳಲ್ಲಿ ರಕ್ತ ಚಲನ ಹೆಚ್ಚಾಗಿ ಎಲ್ಲಾ ಧಾತುಗಳ ಪುಷ್ಟಿಗೊಂಡು ಮತ್ತು ವೃದ್ಧಿಯಾಗುತ್ತದೆ. ಮಾಂಸಖಂಡಗಳು ಮತ್ತು ನರಗಳು ಪುಷ್ಟಿಗೊಳ್ಳುತ್ತವೆ ಹಾಗೂ ಅವುಗಳ ಕ್ರಿಯಾಶೀಲಕೆ ಹೆಚ್ಚಾಗುತ್ತದೆ. ಮೂಳೆಗಳ ಸಂಧಿ, ಕೀಲುಗಳಿಗೆ ಮೃದುತ್ವ ಉಂಟಾಗಿ ಚಲನೆ ಸುಗಮವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ವೃದ್ಧಿಯಾಗುತ್ತದೆ. ಮನುಷ್ಯನ ಅಕಾಲಿಕ ಮುಪ್ಪು ದೂರವಾಗಿ ದೀರ್ಘಕಾಲ ಆರೋಗ್ಯವಂತನಾಗಿ ಬದುಕುತ್ತಾನೆ.

ಇಂದು ಅಭ್ಯಂಗವು ಹಬ್ಬ ಹರಿದಿನಗಳಲ್ಲಿ, ಮದುವೆ, ಮುಂಜಿಗಳಲ್ಲಿ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಸಂಪ್ರದಾಯ ಮಾತ್ರವಾಗಿ ಉಳಿದುಕೊಂಡಿದೆ.
ಆರೋಗ್ಯ ರಕ್ಷಣೆಗಾಗಿಯೇ ಇರುವ ಇದರ ಮಹತ್ವ ಇಂದಿನ ಜನಾಂಗಕ್ಕೆ ಬಹುಶಃ ಮರೆತುಹೋಗಿದೆ.  ಹಿಂದಿಗಿಂತಲೂ ಇಂದಿನ ಕೃತಕ, ಯಾಂತ್ರಿಕ ಬದುಕಿನಲ್ಲಿ ಅಭ್ಯಂಗದಂತಹ ಆರೋಗ್ಯ ಸಾಧನ ಅವಶ್ಯಕತೆ ಬಹಳವಾಗಿ ಇದೆ. ಇದರಿಂದ ವೈಭಿಕೃತ ಈಗಿನ ಜನಾಂಗ ಕೃತಕವಾದ, ಅನಾರೋಗ್ಯಕರವಾದ ಆರೋಗ್ಯ ರಕ್ಷಣೆ ಮಾರ್ಗಗಳನ್ನು ಬಿಟ್ಟು, ನಮ್ಮ ಪ್ರಾಚೀನ ಪಾರಂಪರಿಕ ತೈಲಾಭ್ಯಂಗ ಸ್ನಾನವನ್ನು ತಪ್ಪಿದೆ ದಿನನಿತ್ಯ ಮಾಡಿದರೆ ಆಯುರಾರೋತ್ಸವಗಳನ್ನು ಕಾಪಾಡಿಕೊಳ್ಳಬಹುದು.

ಆಯುರ್ವೇದ ತಜ್ಞ : ಡಾ. ಅಬ್ದುಲ್ ಖಾದರ್ ( Mob :  9845199790 )

< ಆರೋಗ್ಯ ಮತ್ತು ಆಯುರ್ವೇದ ಕುರಿತಾದ ನಿರಂತರ  Eesanje News 24/7 ನ್ಯೂಸ್ ಆ್ಯಪ್ ಸುದ್ದಿಗಳಿಗೆ  ಡೌನ್ಲೋಡ್ ಮಾಡಿಕೊಳ್ಳಿ  >

 Click Here to Download   Android / iOS

Facebook Comments

Sri Raghav

Admin