ಉಪರಾಷ್ಟ್ರಪತಿ ಹುದ್ದೆಗೆ ನಾಯ್ಡು, ಗಾಂಧಿ ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Venkaiha--01

ನವದೆಹಲಿ, ಜು.18-ನಿನ್ನೆಯಷ್ಟೇ ರಾಷ್ಟ್ರಪತಿ ಚುನಾವಣೆ ಮುಗಿದ ಬೆನ್ನಲ್ಲೇ ಇಂದು ಉಪರಾಷ್ಟ್ರಪತಿ ಹುದ್ದೆಗೆ ಕೇಂದ್ರದ ಮಾಜಿ ಸಚಿವ ಎಂ.ವೆಂಕಯ್ಯನಾಯ್ಡು ಹಾಗೂ ಮಹಾತ್ಮಗಾಂಧೀಜಿಯವರ ಮೊಮ್ಮಗ ಗೋಪಾಲ್‍ಗಾಂಧಿ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 11 ಗಂಟೆಗೆ ಸಂಸತ್‍ನಲ್ಲಿ ಲೋಕಸಭೆ ಕಾರ್ಯದರ್ಶಿ ಅವರಿಗೆ ಮೊದಲು ಬಿಜೆಪಿ ಬೆಂಬಲಿತ, ಎನ್‍ಡಿಎ ಅಭ್ಯರ್ಥಿ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ವೆಂಕಯ್ಯನಾಯ್ಡು ಅವರು ನಾಮಪತ್ರ ಸಲ್ಲಿಸಿದರು.
ವೆಂಕಯ್ಯನಾಯ್ಡು ನಾಮಪತ್ರ ಸಲ್ಲಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ಕೇಂದ್ರ ಸಚಿವರಾದ ರಾಜನಾಥ್‍ಸಿಂಗ್, ಅರುಣ್‍ಜೇಟ್ಲಿ, ಸುಷ್ಮಾಸ್ವರಾಜ್, ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಬಿಜೆಪಿ ಬೆಂಬಲಿತ ಎನ್‍ಡಿಎ ಸಚಿವರು ಹಾಗೂ ಕೆಲ ಸಂಸದರು ಹಾಜರಿದ್ದರು.

ಎನ್‍ಡಿಎ ಅಭ್ಯರ್ಥಿಗೆ ಸೂಚಕರಾಗಿ ಅನಂತ್‍ಕುಮಾರ್ ಮತ್ತು ಎಂ.ಗಣಪತಿರಾಜು ಸಹಿ ಹಾಕಿದ್ದಾರೆ. ವೆಂಕಯ್ಯನಾಯ್ಡು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಲಿದೆ. ಈ ಸಂಬಂಧ ಅವರಿಗೆ ಬೆಂಬಲ ನೀಡುವಂತೆ ಇನ್ನೂ ಕೆಲವು ಮುಖಂಡರ ಬೆಂಬಲ ಪಡೆಯುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಈಗಾಗಲೇ ಎನ್‍ಡಿಎ ಜತೆಗೆ ಎಐಎಡಿಎಂಕೆ, ವೈಎಸ್‍ಆರ್, ಟಿಆರ್‍ಎಸ್ ಸೇರಿದಂತೆ ಕೆಲ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡುವ ಸಾಧ್ಯತೆ ಇದೆ.

Gandhi---01

ನಾಯ್ಡು ನಾಮಪತ್ರ ಸಲ್ಲಿಕೆ ನಂತರ ಕಾಂಗ್ರೆಸ್ ಬೆಂಬಲಿತ ಯುಪಿಎ ಅಭ್ಯರ್ಥಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಮೊಮ್ಮಗ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ್‍ಗಾಂಧಿ ನಾಮಪತ್ರ ಸಲ್ಲಿಸಿದರು. ಗೋಪಾಲ್‍ಗಾಂಧಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‍ಗಾಂಧಿ, ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂನಬಿ ಆಜಾದ್, ಉಪ ನಾಯಕ ಆನಂದ್ ಶರ್ಮ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್‍ಪಿ ನಾಯಕಿ ಮಾಯಾವತಿ, ಆರ್‍ಜೆಡಿ ಮುಖಂಡ ಲಾಲೂಪ್ರಸಾದ್‍ಯಾದವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‍ಯಾದವ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

ಆ.5ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಾಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅಧಿಕಾರವಾಧಿ ಆ.4ರಂದು ಅಂತ್ಯಗೊಳ್ಳಲಿದೆ. 5ರಂದು ಮತದಾನ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಿನ ಬಲಾಬಲದ ಪ್ರಕಾರ ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ವೆಂಕಯ್ಯನಾಯ್ಡು ಗೆಲ್ಲುವುದು ಖಚಿತ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಲೋಕಸಭೆಯ 543 ಹಾಗೂ ರಾಜ್ಯಸಭೆಯ 250 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಸದ್ಯದ ಬಲಾಬಲ ಪ್ರಕಾರ ಎನ್‍ಡಿಎ ಅಭ್ಯರ್ಥಿಗೆ 490ಕ್ಕೂ ಹೆಚ್ಚು ಮತಗಳು ಬಂದರೆ, ಯುಪಿಎ ಅಭ್ಯರ್ಥಿಗೆ 225 ಮತಗಳು ಲಭಿಸುವ ಸಾಧ್ಯತೆ ಇದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಯು ಗೋಪಾಲ್‍ಗಾಂಧಿಗೆ ಬೆಂಬಲ ಸೂಚಿಸಿದೆ. ಆದರೆ, ಇನ್ನು ಕೆಲವು ಪ್ರಾದೇಶಿಕ ಪಕ್ಷಗಳು ತಮ್ಮ ನಿರ್ಧಾರವನ್ನು ಪ್ರಕಟಿಸಿಲ್ಲ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin