ರಾಜ್ಯದಲ್ಲಿ ಮತ್ತೆ ಮಳೆ ಕೊರತೆ, ಅಲ್ಪವಾಧಿ ಬೆಳೆ ಬೆಳೆಯುವಂತೆ ರೈತರಿಗೆ ಸರ್ಕಾರ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Former-dvdggv

ಬೆಂಗಳೂರು, ಜು.18- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಕೊರತೆ ಪ್ರಮಾಣ ಹೆಚ್ಚಾಗುತ್ತಿದ್ದು ಮತ್ತೆ ಬರ ಪರಿಸ್ಥಿತಿ ಆವರಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸತೊಡಗಿವೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ದೀರ್ಘಾವಧಿ ಬೆಳೆಗಳನ್ನು ಕೈ ಬಿಟ್ಟು ಅಲ್ಪವಾಧಿ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡುತ್ತಿದೆ.  ಹವಾ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗಾಗಿ ಸತತ ಬರದ ಛಾಯೆಗೆ ಸಿಲುಕಿದ್ದ ರಾಜ್ಯ ಮತ್ತೆ ಬರಗಾಲ ಪರಿಸ್ಥಿತಿಯನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗತೊಡಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಜೂ.1ರಿಂದ ಇದುವರೆಗೆ ಶೇ.23ರಷ್ಟು ಮಳೆ ಕೊರತೆ ಕಂಡು ಬಂದಿದ್ದರೆ, ಜುಲೈ ತಿಂಗಳಲ್ಲಿ ಶೇ.46ರಷ್ಟು ಮಳೆ ಕೊರತೆ ಉಂಟಾಗಿದೆ.

ಇದರಿಂದ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿಲ್ಲ. ಸಣ್ಣಪುಟ್ಟ ಕೆರೆಗಳು ಕೂಡ ಭರ್ತಿಯಗಿಲ್ಲ. ಕರಾವಳಿಯನ್ನು ಹೊರತುಪಡಿಸಿದರೆ. ಉಳಿದಂತೆ ರಾಜ್ಯದಲ್ಲಿ ಸಣ್ಣಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಜೂ.1ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 348 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 248 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.42ರಷ್ಟು, ಮಲೆನಾಡಿನಲ್ಲಿ ಶೇ.36ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ವಾಡಿಕೆ ಪ್ರಮಾಣದಲ್ಲಿ ಬಿತ್ತನೆ ಕೂಡ ಆಗುತ್ತಿಲ್ಲ. ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಜುಲೈ ತಿಂಗಳಲ್ಲಿ ಹೆಚ್ಚೂಕಡಿಮೆ ಶೇ.50ರಷ್ಟು ಮಳೆ ಕೊರತೆ ರಾಜ್ಯಾದ್ಯಂತ ಕಂಡು ಬಂದಿದೆ.

ಇನ್ನೊಂದು ವಾರ ಕಾಲ ಇದೇ ಪರಿಸ್ಥಿತಿ ಮುಂದುವರೆದರೆ ಬರ ಘೋಷಣೆ ಮಾಡುವುದು ಅನಿವಾರ್ಯವಾಗಲಿದೆ. ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ಅವರ ಪ್ರಕಾರ ಇನ್ನೂ ಒಂದು ವಾರ ಕಾಲ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಕಂಡು ಬರುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಬರ ಪರಿಸ್ಥಿತಿ ಎದುರಿಸಲು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದೆ. ಪರಿಣಾಮವಾಗಿ ಕೃತಕ ಮಳೆ ತರಿಸಲು ಮೋಡ ಬಿತ್ತನೆ ಮಾಡುವ ತಯಾರಿ ಬಿರುಸಿನಿಂದ ನಡೆಯುತ್ತಿದೆ. ಬೆಂಗಳೂರಿನ ಹೆಬ್ಬಾಳ, ಸುರಪುರ, ಗದಗಗಳಲ್ಲಿ ಮೊದಲ ಹಂತದಲ್ಲಿ ಮೋಡ ಬಿತ್ತನೆ ಕೈಗೊಳ್ಳುವ ಡಾಪ್ಲಾರ್ ರಾಡರ್ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಡವಾಗಿ ಆರಂಭವಾದ ಮುಂಗಾರು ದುರ್ಬಲವಾಗಿಯೇ ಮುಂದುವರೆಯುತ್ತಿದೆಯೇ ಹೊರತು ಚೇತರಿಕೆ ಕಾಣಲಿಲ್ಲ. ಈಗ ಬಿತ್ತನೆಕಾಲವಾಗಿದ್ದು, ಕೃಷಿ ಚಟುವಟಿಕೆಗೆ ಪೂರಕವಾದ ಮಳೆಯಾಗುತ್ತಿಲ್ಲ. ನಿತ್ಯ ಮೋಡ, ಕೆಲವೆಡೆ ಹಗುರ ಮಳೆ, ಬಲವಾದ ಮೇಲ್ಮೈಗಾಳಿ ಬೀಸುವುದನ್ನು ಹೊರತು ಪಡಿಸಿದರೆ ಉತ್ತಮ ಮಳೆಯಾಗುವ ಸನ್ನಿವೇಶಗಳು ಕೂಡ ನಿರ್ಮಾಣವಾಗುತ್ತಿಲ್ಲ. ಕಾವೇರಿ ಜಲಾನಯನ ಭಾಗದ ಜಲಾಶಯಗಳಿಗೂ ನೀರಿನ ಕೊರತೆ ಗಣನೀಯವಾಗಿ ಹೆಚ್ಚಾಗಿದೆ. ಒಳ ಹರಿವು ಕೂಡ ತೀರ ಕಡಿಮೆ ಇದ್ದು, ಕಳೆದ ವರ್ಷಕ್ಕಿಂತ ಈ ವರ್ಷ 20ಅಡಿಗಳಷ್ಟು ಕಡಿಮೆ ನೀರು ಹೇಮಾವತಿ ಮತ್ತು ಕೆಆರ್‍ಎಸ್ ಜಲಾಶಯಗಳಲ್ಲಿಸಂಗ್ರಹವಾಗಿದೆ.   ಇದೇ ಪರಿಸ್ಥಿತಿ ಆಗಸ್ಟ್‍ನಲ್ಲೂ ಮುಂದುವರೆದರೆ ಕೃಷಿಗಿರಲಿ ಕುಡಿಯುವ ನೀರಿಗೂ ರಾಜ್ಯ ತೀವ್ರ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin