ಸಂಸತ್‍ನಲ್ಲಿ ರೂಪಾ ವರ್ಗಾವಣೆ ಪ್ರತಿಧ್ವನಿ, ಗದ್ದಲ-ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

Session-Parliament

ನವದೆಹಲಿ, ಜು.18- ದೇಶದೆಲ್ಲೆಡೆ ಗೋರಕ್ಷಕರಿಂದ ಹೆಚ್ಚುತ್ತಿರುವ ಹಿಂಸಾಚಾರ ಪ್ರಕರಣ ಮತ್ತು ರೈತರ ದುರವಸ್ಥೆ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಇಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ ಗದ್ದಲ-ಕೋಲಾಹಲ ವಾತಾವರಣ ಸೃಷ್ಟಿಸಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ನಾಳೆಗೆ ಮುಂದೂಡಲಾಗಿದೆ.

ಸಂಸತ್ ಮುಂಗಾರು ಅಧಿವೇಶನದ ಎರಡನೆ ದಿನವಾದ ಇಂದು ಲೋಕಸಭೆಯಲ್ಲಿ ಸದನ  ಸಮಾವೇಶಗೊಳ್ಳುತ್ತಿದ್ದಂತೆ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆರ್‍ಜೆಡಿ ಮತ್ತು ಎಡಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ ಸಭಾಧ್ಯಕ್ಷರ ಮುಂದಿನ ಬಾವಿಗೆ ಧಾವಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ದೇಶದ ವಿವಿಧೆಡೆ ಗೋರಕ್ಷಕರಿಂದ ಹಿಂಸಾಚಾರ ನಡೆಯುತ್ತಿದೆ. ಮತ್ತೊಂದೆಡೆ ಬೆಳೆ ನಷ್ಟದಿಂದ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ ಎಂದು ಆರೋಪಿಸಿ ಧರಣಿ ನಡೆಸಿದರು.

ಇದೇ ವೇಳೆ ಕಾಂಗ್ರೆಸ್ ಸದಸ್ಯರ ಧರಣಿಗೆ ಪ್ರತಿಯಾಗಿ ಕರ್ನಾಟಕದ ಬಿಜೆಪಿ ಸಂಸದರು ನಿಮ್ಮ ಆಡಳಿತದ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿದಾಗ ಪರಸ್ಪರ ವಾದ-ವಾಗ್ವಾದ ನಡೆಯಿತು. ಕಾರಾಗೃಹ ಡಿಐಜಿ ರೂಪಾ ಅವರ ವರ್ಗಾವಣೆ ಪ್ರಕರಣ ಸಂಸತ್ತಿನಲ್ಲಿ ಪ್ರತಿಧ್ವನಿಸಿ ರಾಜ್ಯದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಯಿತು.  ಧರಣಿ ಮುಂದುವರೆದು ಸದನದಲ್ಲಿ ಕೋಲಾಹಲ ವಾತಾವರಣ ಸೃಷ್ಟಿಯಾದ ಕಾರಣ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸದನವನ್ನು ಮಧ್ಯಾಹ್ನ 12ಗಂಟೆಯವರೆಗೆ ಮುಂದೂಡಿದರು. ಆನಂತರ ಸದನ ಸಮಾವೇಶಗೊಂಡಾಗ ಇದೇ ಗದ್ದಲದ ವಾತಾವರಣ ಮುಂದುವರೆದ ಕಾರಣ ಸದನವನ್ನು ನಾಳೆಗೆ ಮುಂದೂಡಿದರು.

ರಾಜ್ಯಸಭೆ ಮುಂದೂಡಿಕೆ:

ದೇಶದ ಅನೇಕ ರಾಜ್ಯಗಳಲ್ಲಿ ಗೋರಕ್ಷಕರಿಂದ ಹೆಚ್ಚುತ್ತಿರುವ ಕೊಲೆ ಮತ್ತು ಹಲ್ಲೆ ಪ್ರಕರಣ ಮತ್ತು ರೈತರ ಆತ್ಮಹತ್ಯೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ರಾಜ್ಯಸಭೆಯಲ್ಲೂ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ ಗದ್ದಲ-ಕೋಲಾಹಲ ವಾತಾವರಣ ಸೃಷ್ಟಿಸಿದ ಕಾರಣ ಕಲಾಪವನ್ನು ಮುಂದೂಡಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin