ಸಿಎಂ ಸಿದ್ದರಾಮಯ್ಯನವರ ಮನವಿ ತಿರಸ್ಕರಿಸಿದ ಗೋವಾ, ಮಹದಾಯಿಗೆ ಮತ್ತೆ ಗ್ರಹಣ

Goa-CM--01

ಬೆಂಗಳೂರು, ಜು.18- ಉತ್ತರ ಕರ್ನಾಟಕದ ಜನತೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿ ನೀರು ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ನಿಚ್ಚಳವಾಗಿದೆ. ನ್ಯಾಯಾಲಯದ ಹೊರಗಡೆ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳೋಣ ಎಂಬ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವಿಯನ್ನು ಗೋವಾ ಸರ್ಕಾರ ತಿರಸ್ಕರಿಸಿದೆ. ಇದರಿಂದ ರಾಜ್ಯ ಸರ್ಕಾರದ ಯೋಜನೆಗೆ ಮತ್ತೆ ಗ್ರಹಣ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಅಲ್ಲದೆ, ಸಮಸ್ಯೆಯನ್ನು ಮಾತುಕತೆ ಮೂಲಕವೇ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೂ ಹಿನ್ನಡೆ ಉಂಟಾಗಿದೆ.  ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದು ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳೋಣ. ಇದಕ್ಕಾಗಿ ದಿನಾಂಕ ನಿಗದಿಪಡಿಸಿ ಎಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಇಂದು ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ್ ಪಾಳ್ಯೇಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ಮಾತುಕತೆ ಮೂಲಕ ಮಹದಾಯಿ ನದಿನೀರು ಯೋಜನೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಈ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಮಾತುಕತೆ ನಡೆಸಲು ಸಾಧ್ಯವಿಲ್ಲ. ಈಗಾಗಲೇ ನ್ಯಾಯಾಧಿಕರಣದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಇಂತಹ ವೇಳೆ ಮಾತುಕತೆ ಅದ್ಹೇಗೆ ಸಾಧ್ಯ, ನಾವು ಗೋವಾ ಜನತೆಗೆ ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಬೇಡ:

ಇದೇ ವೇಳೆ ಪತ್ರದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಚಿವ ವಿನೋದ್ ಪಾಳ್ಯೇಕರ್ ಅವರು ಕಲುಷಿತ ನೀರಿನಲ್ಲಿ ರಾಜಕಾರಣ ಮಾಡಬೇಡಿ. ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ತಾಳ್ಮೆಯಿಂದ ಕಾಯಬೇಕು ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.  ಮಹದಾಯಿ ನದಿ ನೀರು ಯೋಜನೆಯನ್ನು ಗೋವಾದ ಕಾನೂನು ತಂಡದ ಮುಖ್ಯಸ್ಥ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮಾರಾಮ್ ನಡ್‍ಕರ್ಣಿ ಅವರು ನಮ್ಮ ರಾಜ್ಯದ ಪರವಾಗಿ ವಾದ ಮಂಡಿಸುತ್ತಿದ್ದಾರೆ. ನಮಗೆ ನ್ಯಾಯಾಲಯದಲ್ಲಿ ಸಂಪೂರ್ಣ ವಿಶ್ವಾಸವಿದೆ. ಅಂತಿಮ ಆದೇಶ ಬರುವವರೆಗೂ ನಾವು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ವಾರ ಸಿದ್ದರಾಮಯ್ಯನವರು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದು ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಲು ಕರ್ನಾಟಕ ಸರ್ಕಾರ ಸಿದ್ಧವಿದೆ. ದಿನಾಂಕವನ್ನು ನೀವೇ ನಿಗದಿಪಡಿಸಬೇಕೆಂದು ಪತ್ರದಲ್ಲಿ ಕೋರಿದ್ದರು. ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಮಾತುಕತೆಗೆ ಸಿದ್ಧ ಎಂದು ಘೊಷಣೆ ಮಾಡಿರುವಾಗ ಗೋವಾ ಪುನಃ ಅಡ್ಡಗಾಲು ಹಾಕಿರುವುದು ಯೋಜನೆ ಅನುಷ್ಠಾನ ಇನ್ನಷ್ಟು ವಿಳಂಬವಾಗುವುದರಲ್ಲಿ ಸಂದೇಹವಿಲ್ಲ.

ಹೆಚ್ಚಿದ ಪ್ರತಿಭಟನೆ:

ನಿನ್ನೆಯಷ್ಟೆ ಮಹದಾಯಿ ನದಿ ನೀರು ಯೋಜನೆ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಭಾಗದ ರೈತರು, ಕೆಲ ಜನಪ್ರತಿನಿಧಿಗಳು ಬೃಹತ್ ಹೋರಾಟ ನಡೆಸಿದ್ದರು. ಹೇಗಾದರೂ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಯೋಜನೆ ಅನುಷ್ಠಾನಕ್ಕಾಗಿ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ.

ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಸೇರಿದಂತೆ ಈ ಭಾಗದ ಸುತ್ತಮುತ್ತಲಿನ ನಗರ ಪ್ರದೇಶ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಕೆಲ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರನ್ನು ಒದಗಿಸುವುದೇ ಮಹದಾಯಿ ನದಿನೀರು ಯೋಜನೆಯಾಗಿದೆ.  ಗೋವಾದಲ್ಲಿ ಹರಿಯುವ ಮಹದಾಯಿ ನದಿಯಿಂದ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಕಳಸಾ-ಬಂಡೂರಿ ನಾಲಾ ಮೂಲಕ ನೀರನ್ನು ಪೂರೈಕೆ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶ.   ರಾಜ್ಯ ಸರ್ಕಾರ ಯೋಜನೆಗಾಗಿ ಹಲವು ರೀತಿಯ ಪ್ರಯತ್ನ ನಡೆಸಿದರೂ ಗೋವಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin