ಕನ್ನಡ ಕಲಿಯದ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಜಾಗವಿಲ್ಲ : ಸಿದ್ದರಾಮಯ್ಯ ಎಚ್ಚರಿಕೆ

Cm-Siddaramaiaha--01

ಬೆಂಗಳೂರು, ಜು.19- ಕನ್ನಡ ಕಲಿಯದಿರುವ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಜಾಗವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ನಗರದ ಗಾಂಧಿಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಎಎಸ್ ಪಾಸಾದ 59 ಮಂದಿ ಕನ್ನಡಿಗರನ್ನು ಅಭಿನಂದಿಸಿ ಮಾತನಾಡಿದ ಅವರು,  ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆ ಇದೆ ಎಂಬ ಕಾರಣಕ್ಕಾಗಿಯೇ ಕನ್ನಡ ಕಾವಲು ಸಮಿತಿ ರಚಿಸಲಾಯಿತು. ಇಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿ ಕನ್ನಡ ಕಲಿಯಲೇಬೇಕು ಎಂದರು.

ಈ ಹಿಂದೆ ಅಧಿಕಾರಿಯೊಬ್ಬರು ಕನ್ನಡ ಕಲಿಯುವುದಿಲ್ಲ ಎಂದಾಗ ಆತನಿಗೆ ನಿನ್ನ ಸೇವೆ ಸಾಕು ಎಂದು ಕೇಂದ್ರ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದೇವೆ ಎಂದು ಐಎಎಸ್ ಅಧಿಕಾರಿ ಶ್ರೀವಾತ್ಸವ್ ಅವರ ಹೆಸರೇಳದೆ ವಿಷಯ ಪ್ರಸ್ತಾಪಿಸಿದರು.  ಯಾವುದೇ ಐಎಎಸ್ ಅಧಿಕಾರಿ ಇಲ್ಲಿ ಕೆಲಸ ಮಾಡಬೇಕಾದರೆ ಕನ್ನಡ ಕಲಿಯುವುದು ಕಡ್ಡಾಯ. ಆಡಳಿತದಲ್ಲಿ ಕನ್ನಡ ಜಾರಿಗೊಳಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಐಎಎಸ್ ಪಾಸಗಿರುವ 59 ಮಂದಿಯಲ್ಲಿ ಅಲೆಮಾರಿ ಜನರೂ ಇದ್ದಾರೆ. ಇವರೆಲ್ಲ ವಿವಿಧ ರಾಜ್ಯಗಳಿಗೆ ನಿಯೋಜನೆಗೊಳ್ಳಲಿದ್ದಾರೆ. ಅವರು ಯಾವುದೇ ರಾಜ್ಯಗಳಿಗೆ ಹೋದಾಗಲೂ ಅಲ್ಲಿನ ಸ್ಥಳೀಯ ಭಾಷೆ ಕಲಿತು ಉತ್ತಮ ಆಡಳಿತ ನೀಡಬೇಕು. ಜತೆಗೆ ಕನ್ನಡ ನಾಡು-ನುಡಿಯ ಬಗ್ಗೆ ಭಾಷಾಭಿಮಾನ ಇಟ್ಟುಕೊಳ್ಳಬೇಕೆಂದು ಸಿದ್ದರಾಮಯ್ಯ ಸಲಹೆ ಮಾಡಿದರು. 2016ರ ಯುಪಿಎಸ್‍ಸಿ ಪರೀಕ್ಷೆಯಲ್ಲಿ 59 ಮಂದಿ ಕನ್ನಡಿಗರು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಹಿಂದುಳಿದ ಜಿಲ್ಲೆಯಾದ ಕೋಲಾರದ ನಂದಿನಿಯವರು ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ದೃಷ್ಟಿ ಚೇತನ ಹೊನ್ನಸಿದ್ಧಾರ್ಥ್ ಕೂಡ ಐಎಎಸ್ ಪಾಸು ಮಾಡಿದ್ದಾರೆ. ಅದರಲ್ಲೂ ಐದು ಮಂದಿ ಕನ್ನಡದಲ್ಲೇ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಪ್ರಶಂಸಿಸಿದರು.

ದೇಶಕ್ಕೇ ಪ್ರಥಮ ರ್ಯಾಂಕ್ ಪಡೆದಿರುವ ನಂದಿನಿಯವರು ಕೆಲಸ ಮಾಡಲು ಕರ್ನಾಟಕವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನನ್ನ ಆಗ್ರಹವಾಗಿದೆ ಎಂದ ಮುಖ್ಯಮಂತ್ರಿಗಳು ನಂದಿನಿ… ನೀನು ನಮ್ಮ ರಾಜ್ಯಕ್ಕೆ ಅಧಿಕಾರಿಯಾಗಿ ಬಾರಮ್ಮಾ ಎಂದು ನೇರವಾಗಿ ಆಹ್ವಾನಿಸಿದರು.  ಕಾರ್ಯಕ್ರಮದಲ್ಲಿ ಐದು ಮಂದಿ ಐಎಎಸ್ ಅಧಿಕಾರಿಗಳನ್ನು ಸಾಂಕೇತಿಕವಾಗಿ ಅಭಿನಂದಿಸಿದರು. ಉಳಿದವರನ್ನು ಸನ್ಮಾನಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಅಧಿಕಾರಿಗಳು ಕಾನೂನಿಗಿಂತಲೂ ಮಾನವೀಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನ ಹೊಂದಬೇಕು. ಎಲ್ಲಿ ಕೆಲಸ ಮಾಡಿದರೂ ತವರು ನೆಲ ಮರೆಯಬೇಡಿ ಎಂದರು.

ಭ್ರಷ್ಟಾಚಾರದಿಂದ ದೂರವಿದ್ದು, ಬಡವರ ಸೇವೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಯಾ, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಗೋವಿಂದರಾಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin