ಕನ್ನಡ ಧ್ವಜದಿಂದ ಸಂವಿಧಾನದ ಆಶಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ : ಕೇಂದ್ರಕ್ಕೆ ಸಿಎಂ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ಜು.19-ರಾಜ್ಯಕ್ಕೆ ಧ್ವಜ ಇರಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ. ಪ್ರತ್ಯೇಕ ಧ್ವಜ ರೂಪಿಸಿಕೊಳ್ಳುವುದರಿಂದ ರಾಷ್ಟ್ರದ ಸಾರ್ವಭೌಮತ್ವ ಹಾಗೂ ಐಕ್ಯತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.6 ರಂದು ಪ್ರತ್ಯೇಕ ಧ್ವಜ ಕುರಿತಂತೆ ಸಮಿತಿಯನ್ನು ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಸಮಿತಿ ವರದಿ ಬಂದ ನಂತರ ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ಪರಾಮರ್ಶೆ ನಡೆಸಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ರಾಷ್ಟ್ರಧ್ವಜ ಎತ್ತರದಲ್ಲಿ ಹಾರಿದರೆ ನಾಡಧ್ವಜ ಅದಕ್ಕಿಂತ ಕೆಳಭಾಗದಲ್ಲಿ ಹಾರಾಡುತ್ತದೆ. ರಾಷ್ಟ್ರಗೀತೆ ಇರುವಂತೆ ನಾಡಗೀತೆಯನ್ನು ಬಳಸಲಾಗುತ್ತಿದೆ. ಇದರಿಂದ ದೇಶದ ಅಖಂಡತೆಗೆ, ಐಕ್ಯತೆಗೆ ಯಾವ ರೀತಿಯಲ್ಲೂ ತೊಂದರೆಯಾಗಿಲ್ಲ. ಸುಪ್ರೀಂಕೋರ್ಟ್ ಸಹ ಎಲ್ಲಿಯೂ ಪ್ರತ್ಯೇಕ ಧ್ವಜವಿರಬಾರದೆಂದು ಹೇಳಿಲ್ಲ. ಬೇಕು-ಬೇಡ ಎಂಬ ಯಾವುದೇ ಅಂಶವನ್ನು ಸ್ಪಷ್ಟಪಡಿಸಿಲ್ಲ ಎಂದು ಹೇಳಿದರು.  ಬಿಜೆಪಿಯವರು ಇದಕ್ಕೆ ವಿರೋಧಿಸುತ್ತಿರುವುದು ಕೇವಲ ರಾಜಕಾರಣಕ್ಕಾಗಿ. ಐದು ವರ್ಷ ಅಧಿಕಾರದಲ್ಲಿದ್ದರೂ ಇದನ್ನು ಜಾರಿಗೆ ತರಲಿಲ್ಲ. ಬರೀ ವಿರೋಧವಾದದ್ದನ್ನೇ ಮಾಡುತ್ತಾ ಬಂದರು. ಆ ಕಾರಣಕ್ಕಾಗಿ ಈಗ ಇದರ ವಿರೋಧ ಮಾಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯವರು ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗೋವಾ ರಾಜ್ಯದ ಸಚಿವರು ಬರೆದಿರುವ ಪತ್ರದಲ್ಲಿ ಡರ್ಟಿ ಎಂಬ ಪದ ಬಳಸಿ ಉದ್ಧಟತನ ತೋರಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಮಹದಾಯಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಒಕ್ಕೂಟ ವ್ಯವಸ್ಥೆ ಪರಸ್ಪರ ಸಹಕಾರ ಅತಿ ಮುಖ್ಯ. ಈ ಬಗ್ಗೆ ಎಷ್ಟೇ ಪತ್ರ ಬರೆದರೂ ಸಚಿವರು ಈ ರೀತಿ ಉತ್ತರಿಸಿರುವುದು ಸರಿಯಲ್ಲ ಎಂದರು.  ಪ್ರಧಾನಿಯವರು ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದೇವೆ. ಈ ಬಗ್ಗೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ. ಬಿಜೆಪಿಯವರು ಈ ವಿಚಾರದಲ್ಲಿ ಪ್ರಧಾನಿಯವರನ್ನು ಒಪ್ಪಿಸಲಿ ಎಂದರು.

ಸೆರೆ ವಾಸ ಅನುಭವಿಸುತ್ತಿರುವ ಶಶಿಕಲಾ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ರೂಪಾ ಅವರ ವರ್ಗಾವಣೆ ಕುರಿತಂತೆ ವಿಪಕ್ಷಗಳು ಅನಗತ್ಯ ಟೀಕೆ ಮಾಡುತ್ತಿವೆ. ವರ್ಗಾವಣೆಯನ್ನು ವಿಪಕ್ಷದವರನ್ನು ಕೇಳಿ ಮಾಡಬೇಕೇ ಎಂದು ಹರಿಹಾಯ್ದರು.  ಪೊಲೀಸರಿಗೆ ಶಿಸ್ತು ಬಹಳ ಮುಖ್ಯ. ಈ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.   ಕೆರೆಗಳು ಸಹಜ ಗುಣಲಕ್ಷಣಗಳನ್ನು ಕಳೆದುಕೊಂಡಿದ್ದರೆ ಅಂತಹ ಕೆರೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಸ್‍ನಿಲ್ದಾಣವಾಗಿರುವ (ಕೆಂಪೇಗೌಡ ಬಸ್‍ನಿಲ್ದಾಣ) ಕೆಂಪಾಬುಧಿ ಕೆರೆಯನ್ನು ಉಳಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಂಸದೆ ಶೋಭಾಕರಂದ್ಲಾಜೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮುಖ್ಯಮಂತ್ರಿ, ಶೋಭಾ ಅವರ ವಿಚಾರವನ್ನು ಗಮನಿಸುವುದನ್ನೇ ಬಿಟ್ಟಿದ್ದೇನೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin