ತನಿಖೆಗೆ ಮೊದಲೇ ಅಧಿಕಾರಿಗಳ ವರ್ಗಾವಣೆ ಸರಿಯಲ್ಲ : ಅಶೋಕ್
ದೇವನಹಳ್ಳಿ, ಜು.19- ಡಿಐಜಿ ರೂಪಾ ಅವರಿಂದ ಪರಪ್ಪನ ಅಗ್ರಹಾರ ಕಾರಾಗೃಹದ ಕರ್ಮಕಾಂಡ ಬಯಲಾಗಿದ್ದು, ರಾಜ್ಯದಲ್ಲಿ ಪ್ರಾಮಾಣಿಕ, ದಕ್ಷ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದು ದುರಾದೃಷ್ಟವೆಂದು ಮಾಜಿ ಗೃಹ ಸಚಿವ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಗ್ರಾಮಗಳಲ್ಲಿ ಬಿಜೆಪಿ ಯಿಂದ ಆಯೋಜಿಸಿರುವ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಟೌನಿನ ಬೈ-ಪಾಸ್ ರಸ್ತೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಡಿಐಜಿ ರೂಪಾ ಸೇರಿದಂತೆ ಬಂಧಿಖಾನೆ ಇಲಾಖೆಯ ಕೆಲವು ಅಧಿಕಾರಿಗಳನ್ನು ಬೇರೆ ವಿಭಾಗಗಳಿಗೆ ಎತ್ತಂಗಡಿ ಮಾಡಿರುವುದು ಹಾಸ್ಯಾಸ್ಪದವಾಗಿದೆ. ಸರ್ಕಾರ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಎಷ್ಟು ಸರಿ, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು. ಜೈಲಿನಲ್ಲಿ ಐಷಾರಾಮಿಯಾಗಿ ಜೀವನ ನಡೆಸುತ್ತಿರುವ, ತಮಿಳುನಾಡಿನ ಶಶಿಕಲಾ, ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್ ತೆಲಗಿ ಸೇರಿದಂತೆ ಅನೇಕರು ಜೈಲಿನ ಅಧಿಕಾರಿಗಳು ಹಣ ಪಡೆದು ಅದ್ದೂರಿ ಜೀವನ ನಡೆಸಲು ಸಹಕರಿಸಿ ಶಿಸ್ತನ್ನು ಉಲ್ಲಂಘಿಸಿದ್ದಾರೆ ಅಂತಹವರನ್ನು ಅಮಾನತು ಮಾಡಿ ತನಿಖೆ ಮಾಡಿ ಶಿಕ್ಷಿಸುವುದನ್ನು ಬಿಟ್ಟು ರಕ್ಷಣೆ ಮಾಡಲು ಸರ್ಕಾರ ಹೊರಟಿರುವುದು ನಾಚಿಗೆ ಗೇಡಿನ ಸಂಗತಿ ಎಂದರು.
ಮಾಜಿ ಶಾಸಕ ಚಂದ್ರಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ರಾಜಣ್ಣ, ಮುಖಂಡರಾದ ನಾರಾಯಣಗೌಡ, ಡಿ.ಆರ್. ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ನಾಗರಾಜಗೌಡ, ಸುನಿಲ್, ತಮ್ಮೇಗೌಡ, ಅನಿಲ್ಗೌಡ, ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS