ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಹೆಚ್ಚುವರಿ ಬೋಗಿಗಳ ಜೋಡಣೆ

Metro--01

– ರಮೇಶ್ ಪಾಳ್ಯ

ಬೆಂಗಳೂರು,ಜು.19-ಪೂರ್ವ-ಪಶ್ಚಿಮದ ನೇರಳೆ ಕಾರಿಡಾರ್ ಮೆಟ್ರೊ ರೈಲು ಸಂಚಾರದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗುತ್ತಿರುವುದನ್ನು ಮನಗಂಡಿರುವ ಬಿಎಂಆರ್‍ಸಿಎಲ್, ಉತ್ತರ-ದಕ್ಷಿಣದ ಗ್ರೀನ್ ಕಾರಿಡಾರ್‍ನ ಮೂರು ಬೋಗಿಗಳನ್ನು ನೇರಳೆ ಕಾರಿಡಾರ್‍ಗೆ ಜೋಡಣೆ ಮಾಡಲು ತೀರ್ಮಾನಿಸಿದೆ.  ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿಗೆ ಸಂಚರಿಸುವ ನೇರಳೆ ಕಾರಿಡಾರ್ ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ನಾಗಸಂದ್ರ ದಿಂದ ಪುಟ್ಟೇನಹಳ್ಳಿವರೆಗಿನ ಹಸಿರು ಕಾರಿಡಾರ್ ಮೆಟ್ರೊ ರೈಲು ಸಂಚಾರಕ್ಕೆ ಪ್ರಯಾಣಿಕರಲ್ಲಿ ಉತ್ಸಾಹ ಕಂಡುಬರುತ್ತಿಲ್ಲ.

ಕಚೇರಿ ವೇಳೆಯಲ್ಲಿ ನೇರಳೆ ಕಾರಿಡಾರ್ ರೈಲಿನಲ್ಲಿ ಸಂಚರಿಸಲು ಪ್ರಯಾಣಿಕರು ಮುಗಿ ಬೀಳುತ್ತಿದ್ದಾರೆ. ಕೆಲ ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಮೆಟ್ರೋ ರೈಲಿನಲ್ಲಿ ಸಂಚರಿಸಲು ಸಾಧ್ಯವಾಗದೆ ಪರಿತಪಿಸುತ್ತಿರುವುದನ್ನು ಮನಗಂಡು ಹಸಿರು ವಲಯದ ಮೂರು ಬೋಗಿಗಳನ್ನು ಶಾಶ್ವತವಾಗಿ ನೇರಳೆ ವಲಯದ ಮೆಟ್ರೊ ರೈಲಿಗೆ ಜೋಡಣೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತರಾವ್ ತಿಳಿಸಿದ್ದಾರೆ.

ಸಾಮಾನ್ಯ ವೇಳೆಯಲ್ಲಿ ಉತ್ತರ-ದಕ್ಷಿಣದ ಹಸಿರು ಕಾರಿಡಾರ್‍ನಲ್ಲಿ 11 ರೈಲುಗಳು ಹಾಗೂ ಕಚೇರಿ ವೇಳೆಯಲ್ಲಿ 15 ರೈಲುಗಳು ಸಂಚರಿಸುತ್ತಿವೆ. ಇದೇ ರೀತಿ ನೇರಳೆ ಕಾರಿಡಾರ್‍ನಲ್ಲಿ 20 ರೈಲುಗಳ ಸಂಚಾರವಿದ್ದು, ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ರೈಲು ಹತ್ತಲು ಮುಗಿ ಬೀಳುವುದನ್ನು ತಪ್ಪಿಸುವ ಉದ್ದೇಶದಿಂದ ಹಸಿರು ವಲಯದ ಮೂರು ಬೋಗಿಗಳನ್ನು ನೇರಳೆ ವಲಯಕ್ಕೆ ಜೋಡಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿನಿತ್ಯ ನೇರಳೆ ವಲಯದಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುವುದರಿಂದ ಮೂರು ಬೋಗಿಗಳ ಜೋಡಣೆ ಸಹಕಾರಿಗಲಿದೆ ಎಂಬುದು ನಮ್ಮ ಭಾವನೆ ಎಂದು ಅವರು ವಿವರಿಸಿದರು.

ಪ್ರಯಾಣಿಕರ ವರ್ತನೆ ಬದಲಾಗಬೇಕು:

ಈ ಹಿಂದೆ ಬಿಎಂಟಿಸಿ ಬಸ್‍ನ ಹಿಂಬದಿ ಡೋರ್‍ನಲ್ಲಿ ಪ್ರಯಾಣಿಕರು ಜೋತುಬಿದ್ದು ಪ್ರಯಾಣ ಮಾಡುವುದು ವಾಡಿಕೆಯಾಗಿತ್ತು. ಬಸ್ ಪೂರ್ತಿ ಖಾಲಿ ಇದ್ದರೂ ಕೆಲವರು ಖಯಾಲಿಗಾಗಿ ಡೋರ್‍ಗೆ ಜೋತುಬಿದ್ದೇ ಪ್ರಯಾಣ ಮಾಡುತ್ತಿದ್ದರು. ಇಂಥದ್ದೇ ಖಯಾಲಿ ಮೆಟ್ರೊ ರೈಲು ಪ್ರಯಾಣಿಕರಲ್ಲೂ ಕಂಡುಬರುತ್ತಿದೆ.
ಕಚೇರಿ ವೇಳೆಯಲ್ಲಿ ಮೆಟ್ರೊ ರೈಲಿಗೆ ಹತ್ತುವ ಪ್ರಯಾಣಿಕರು ಖಾಲಿ ಇರುವ ಬೋಗಿಗೆ ತೆರಳದೆ ಮೆಟ್ರೊ ರೈಲಿನ ಡೋರ್ ಸಮೀಪವೇ ನಿಲ್ಲುತ್ತಿರುವುದರಿಂದ ಬೇರೆ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊನೆ ನಿಲ್ದಾಣದಲ್ಲಿ ಇಳಿಯಬೇಕಾದ ಪ್ರಯಾಣಿಕನು ಡೋರ್‍ನಲ್ಲೇ ನಿಂತು ಪ್ರಯಾಣಿಸುತ್ತಿರುವುದು ಮಾಮೂಲಾಗಿದೆ. ಪ್ರಯಾಣಿಕರ ಈ ವರ್ತನೆ ಬೇರೆ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗುತ್ತಿಲ್ಲ. ದೂರ ಪ್ರಯಾಣ ಮಾಡುವ ಪ್ರಯಾಣಿಕರು ಹಿಂಬದಿ ಬೋಗಿಗೆ ತಲುಪಿದರೆ ಬೇರೆ ಬೇರೆ ನಿಲ್ದಾಣಗಳಲ್ಲಿ ಇತರೆ ಪ್ರಯಾಣಿಕರು ರೈಲು ಹತ್ತಲು ಸಹಕಾರಿಯಾಗುತ್ತದೆ.  ಡೋರ್ ಪ್ರಯಾಣಿಕರ ಕಾಟದಿಂದ ಕೆಲ ಪ್ರಯಾಣಿಕರು ಮೆಟ್ರೊ ಹತ್ತಲು ಸಾಧ್ಯವಾಗದೆ ಪರಿತಪಿಸಿರುವ ಪ್ರಕರಣಗಳು ನಡೆದಿವೆ. ಈಗಿರುವ ಮೆಟ್ರೊ ರೈಲು ಸೌಲಭ್ಯದ ಪ್ರಕಾರ ಪ್ರತಿನಿತ್ಯ ಐದು ಲಕ್ಷ ಪ್ರಯಾಣಿಕರು ಸಂಚರಿಸಬಹುದಾಗಿದೆ. ಆದರೆ ಈ ಡೋರ್ ಪ್ರಯಾಣಿಕರ ಕಾಟದಿಂದ ಮೆಟ್ರೊ ರೈಲಿನಲ್ಲಿ ಕೇವಲ ಮೂರುವರೆ ಲಕ್ಷ ಪ್ರಯಾಣಿಕರು ಮಾತ್ರ ಸಂಚರಿಸುವಂತಾಗಿರುವುದು ದುರಂತವೇ ಸರಿ.

ಪ್ರಯಾಣಿಕರಿಗೆ ಎಷ್ಟೇ ಬುದ್ದಿ ಹೇಳಿದರೂ ಅವರು ತಮ್ಮ ವರ್ತನೆಯನ್ನು ಮಾತ್ರ ಬದಲಾಯಿಸಿಕೊಳ್ಳುತ್ತಿಲ್ಲ. ಹೀಗಾಗಿ ಭವಿಷ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಬೇಕಾದರೆ ಅನಿವಾರ್ಯವಾಗಿ ಹೆಚ್ಚುವರಿ ಬೋಗಿಗಳ ಜೋಡಣೆ ಮಾಡಬೇಕಾಗುತ್ತದೆ ಎನ್ನುತ್ತಾರೆ ವಸಂತ್‍ರಾವ್.  ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಪ್ರಯಾಣ ಬೆಳೆಸುವ ಮೆಟ್ರೊ ರೈಲು ಸಂಚಾರದಲ್ಲಿ ಒಂದು ಬಾರಿಗೆ 945 ಪ್ರಯಾಣಿಕರು ಸಂಚರಿಸಬಹುದು. ಆದರೆ ಡೋರ್ ಪ್ರಯಾಣಿಕರ ಕಾಟದಿಂದ ಕೇವಲ 700 ಪ್ರಯಾಣಿಕರು ಮಾತ್ರ ಸಂಚರಿಸುವಂತಹ ಪರಿಸ್ಥಿತಿ ಎದುರಾಗಿದೆ. ಹಿಂಬದಿ ಮತ್ತು ಮುಂಬದಿ ಬೋಗಿಗಳು ಖಾಲಿ ಖಾಲಿ ಇದ್ದರೂ ಮಧ್ಯಭಾಗದಲ್ಲಿ ಡೋರ್ ಇರುವ ಕಂಪಾರ್ಟ್‍ಮೆಂಟ್‍ನಲ್ಲಿ ಮಾತ್ರ ಪ್ರಯಾಣಿಕರು ಒಟ್ಟೊಟ್ಟಿಗೆ ನಿಂತಿರುತ್ತಾರೆ.

ಹೀಗಾಗಿ ಪ್ರಯಾಣಿಕರು ಇನ್ನು ಮುಂದಾದರೂ ಮೆಟ್ರೊ ರೈಲು ಸಂಚಾರದ ಬಗ್ಗೆ ತಿಳಿವಳಿಕೆ ಹೊಂದುವುದು ಸೂಕ್ತ. ಒಂದು ನಿಲ್ದಾಣದಲ್ಲಿ ಮೆಟ್ರೊ ಹತ್ತುವ ಪ್ರಯಾಣಿಕ ಹಿಂಬದಿ ಬೋಗಿಗೆ ತೆರಳಬೇಕು. ತಾವು ಇಳಿಯುವ ನಿಲ್ದಾಣ ಸಮೀಪಿಸುವ ಸಂದರ್ಭದಲ್ಲಿ ಡೋರ್ ಬಳಿಗೆ ಬರುವುದು ಒಳಿತು ಎಂದು ಸಲಹೆ ನೀಡುತ್ತಾರೆ ವಸಂತರಾವ್.

ಸಣ್ಣ ಕುಣಿಕೆಗಳ ಸೇವೆ:

ಮಂತ್ರಿಮಾಲ್ ಸಮೀಪಿಸುತ್ತಿ ದ್ದಂತೆ ಪ್ರಯಾಣಿಕರು ಬಾಗಿಲಿಗೆ ಅಡ್ಡಲಾಗಿ ನಿಲ್ಲುವುದರಿಂದ ಮಾಲ್‍ನಿಂದ ಮೆಜೆಸ್ಟಿಕ್‍ಗೆ ಬರಲು ಇಚ್ಛಿಸುವ ಪ್ರಯಾಣಿಕರು ರೈಲು ಹತ್ತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.   ನಿಗದಿತ ಸಮಯಕ್ಕೆ ಕಚೇರಿಗೆ ತೆರಳಲು ಮಂತ್ರಿಮಾಲ್ ನಿಲ್ದಾಣಕ್ಕೆ ದೌಡಾಯಿಸುವ ಪ್ರಯಾಣಿಕರು ಕೆಲ ಸಂದರ್ಭಗಳಲ್ಲಿ ರೈಲು ಹತ್ತಲು ಸಾಧ್ಯವಾಗದೆ ಹಿಡಿಶಾಪ ಹಾಕುವಂತಹ ಪರಿಸ್ಥಿತಿಯೂ ಇದೆ. ಹೀಗಾಗಿ ಮಂತ್ರಿಮಾಲ್-ಮೆಜೆಸ್ಟಿಕ್ ನಡುವೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಣ್ಣ ಕುಣಿಕೆಗಳ ಸೇವೆ( ಸ್ಮಾಲ್ ಲೂಪ್ ಸರ್ವೀಸ್) ಆರಂಭಿಸಲು ಬಿಎಂಆರ್‍ಸಿಎಲ್ ನಿರ್ಧರಿಸಿದೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin