ನಾಳೆ ಕನ್ನಡ ಕಟ್ಟಾಳು ಪಾಪು ಪ್ರತಿಮೆ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

Patil-Puttappa-01

ಜೀವಂತ ಜ್ಞಾನಕೋಶ ಡಾ. ಪಾಟೀಲ ಪುಟ್ಟಪ್ಪ ಅವರು 1967ರಿಂದ ಇದುವರೆಗೆ 50 ವರ್ಷಗಳ ಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾ, ಬಂದಿರುವುದು ಜಾಗತಿಕ ದಾಖಲೆ. ರಾಜ್ಯೋತ್ಸವ ಪ್ರಶಸ್ತಿ, ಟಿಎಸ್‍ಆರ್ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿಲಿಟ್ ಗೌರವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡೆದಿರುವ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ತನ್ನ 128ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭ ಸಂಘದ ಆವರಣದಲ್ಲಿ ಅವರ ಪ್ರತಿಮೆ ಅನಾವರಣಗೊಳಿಸಲಿದೆ. ಜುಲೈ 19 ಹಾಗೂ 20ರಂದು ಎರಡು ದಿನಗಳ ಕಾಲ ನಡೆವ ನುಡಿ ಜಾತ್ರೆಯಲ್ಲಿ ಪಾಪು ಬದುಕು-ಬರಹ ವಿಚಾರ ಸಂಕಿರಣ ನಡೆಯುತ್ತದೆ ಸಿಎಂ ಸಿದ್ದರಾಮಯ್ಯ ಪಾಪು ಪ್ರತಿಮೆ ಅನಾವರಣಗೊಳಿಸಲಿದ್ದಾರೆ.

ಚಿಕ್ಕವಯಸ್ಸಿನಿಂದಲೂ ನಾಡಿಗಾಗಿ, ನುಡಿಗಾಗಿ ಹೋರಾಡುತ್ತಿರುವ ಡಾ. ಪಾಟೀಲ ಪುಟ್ಟಪ್ಪನವರು ಕನ್ನಡ ನೆಲದ ಹೆಮ್ಮೆಯ ಪುತ್ರ. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರ ಪೈಕಿ ಪ್ರಮುಖರು. ಕನ್ನಡದ ಉಳಿವಿಗಾಗಿ ಅದರ ಸರ್ವತೋಮುಖ ಬೆಳವಣಿಗೆಗಾಗಿ ಅವರು ಸಲ್ಲಿಸಿದ ಸೇವೆ ನಾಡಿನ ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿಯುತ್ತದೆ. ನಮ್ಮ ನುಡಿ ಸೇವೆ ಮಾಡಿದವರಲ್ಲಿ ಪಾಪೂಗೆ ಅಗ್ರಸ್ಥಾನ ಸಲ್ಲುತ್ತದೆ ಎಂದು ಎಸ್. ನಿಜಲಿಂಗಪ್ಪ ಮನತುಂಬಿ ಹೇಳಿದ್ದಾರೆ.

1962ರಿಂದ 1974ರವರೆಗೆ 12 ವರ್ಷ ರಾಜ್ಯ ಸಭೆಯ ಸದಸ್ಯರಾಗಿದ್ದಾಗ ಪಾರ್ಲಿಮೆಂಟಿನಲ್ಲಿ ಡಾ. ಪಾಟೀಲ ಪುಟ್ಟಪ್ಪ ಚರ್ಚೆ ಆರಂಭಿಸಿದರೆ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಕೂಡ ಏಕಾಗ್ರತೆಯಿಂದ ಆಲಿಸುತ್ತಿದ್ದರು. ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‍ನಲ್ಲಿ ಚರ್ಚೆ ಮಾಡುತ್ತಿರುವಾಗ ಡಾ. ಪಾಟೀಲ ಪುಟ್ಟಪ್ಪನವರ ಸುತ್ತ ಇನ್ನುಳಿದ ಪಾರ್ಲಿಮೆಂಟ್ ಸದಸ್ಯರು ಪಾಠ ಹೇಳಿಸಿಕೊಳ್ಳುವ ವಿದ್ಯಾರ್ಥಿಗಳಂತೆ ನೆರೆಯುತ್ತಿದ್ದರೆಂಬುದು ಡಾ. ಪಾಟೀಲ ಪುಟ್ಟಪ್ಪನವರ ಸಮಕಾಲೀನರ ಮಾತು. ಚಲಿಸುವ ಜ್ಞಾನಕೋಶವೆಂದೇ ಹೆಸರಾದ ಡಾ. ಪಾಟೀಲ ಪುಟ್ಟಪ್ಪನವರು ಹೊಸ ಪೀಳಿಗೆಯವರಿಗಂತೂ ವಿಸ್ಮಯ !
ಕನ್ನಡದ ಕೆಚ್ಚೆದೆಯ ಹೋರಾಟಗಾರ, ಪತ್ರಿಕೋದ್ಯಮಿ, ಕಥೆಗಾರ, ಸಾಹಿತಿ, ಚಿಂತಕ, ಪ್ರಬುದ್ಧ ರಾಜಕಾರಣಿ, ಆಡಳಿತಗಾರ ಎಂಬ ಹಲವಾರು ವಿಶೇಷಣಗಳನ್ನು ಅಭಿಮಾನದಿಂದ ಸೇರಿಸಬಹುದಾದ ಧೀಮಂತಿಕೆಯ ವ್ಯಕ್ತಿ ಪುಟ್ಟಪ್ಪ ಸಿದ್ಧಲಿಂಗಪ್ಪಗೌಡ ಪಾಟೀಲರು.

1921 ಜನೇವರಿ 14ರಂದು ಸಂಕ್ರಮಣದ ದಿನ ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡು. ಹಾವೇರಿ ತಾಲೂಕಿನ ಕುರುಬಗೊಂಡದ, ಸಾಮಾಜಿಕ ಅಂತಃಕರಣವೇ ಪ್ರಮುಖವಾಗಿದ್ದ ಕುಟುಂಬದಲ್ಲಿ ಹುಟ್ಟಿದ ಡಾ. ಪಾಟೀಲ ಪುಟ್ಟಪ್ಪ ಅವರನ್ನು ಹಿರಿಯ ಮುತ್ಸದ್ಧಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಪಾಪು ಎಂದೇ ಕರೆದರು.  ತೊಂಬಂತ್ತೆಂಟರ ಹರೆಯದಲ್ಲಿಯೂ ಅವಿಶ್ರಾಂತವಾಗಿ ಚಟುವಟಿಕೆಯಲ್ಲಿರುವ ಡಾ. ಪಾಟೀಲ ಪುಟ್ಟಪ್ಪ ಕರ್ನಾಟಕದ ಸಾಕ್ಷಿಪ್ರಜ್ಞಯಾಗಿ ಉಳಿದವರು. ಸಾಹಿತ್ಯ, ಹೋರಾಟ, ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದವರು. ಐದು ದಶಕಗಳ ಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರಕಾರದ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಸಮರ್ಥ ರೀತಿಯಿಂದ ಕಾರ್ಯ ನಿರ್ವಹಿಸಿದ ಡಾ. ಪಾಟೀಲ ಪುಟ್ಟಪ್ಪ ಜಗತ್ತಿನ ಬೇರೆ-ಬೇರೆ ದೇಶಗಳಲ್ಲಿ ಪ್ರವಾಸ ಮಾಡಿ ಲೋಕಾನುಭವ ಪಡೆದವರು. ಪತ್ರಿಕೋದ್ಯಮದ ಸೇವೆಗೆ ಸಂದ ಪ್ರತಿಷ್ಠಿತ ಟಿಎಸ್‍ಆರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೇ ಕನ್ನಡ ವಿಶ್ವವಿದ್ಯಾಲಯ ನಾಡೋಜ ನಾಡೋಜ ಪದವಿ, ನೃಪತುಂಗ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿಲಿಟ್ ಪದವಿ ನೀಡಿ ತನ್ನನ್ನೇ ತಾನು ಗೌರವಿಸಿಕೊಂಡಿವೆ.

ಅವರ ಬರವಣಿಗೆ ಮತ್ತು ವ್ಯಕ್ತಿತ್ವ ಚಲಿಸುವ ಜ್ಞಾನಕೋಶವನ್ನೇ ನೆನಪಿಸುತ್ತವೆ. ಆಗಾಧ ಜ್ಞಾಪಕಶಕ್ತಿ, ತಮ್ಮ ಏರುಸ್ವರದಿಂದ ಸಂತೆಯಲ್ಲೂ ಏಕಾಗ್ರತೆ ಮೂಡಿಸಿ ತಮ್ಮೆಡೆ ಸೆಳೆದುಕೊಳ್ಳಬಲ್ಲ ಅವರ ಭಾಷಣದ ಪರಿ ಎಂತವರನ್ನೂ ಬಡಿದೆಬ್ಬಿಸಬಲ್ಲದು. ಅವರ ತಾರುಣ್ಯದ ದಿನಗಳಿಂದ ಹಿಡಿದು ಇಂದಿನವರೆಗೂ ಡಾ. ಪಾಟೀಲ ಪುಟ್ಟಪ್ಪ ವಿಮುಖರಾಗಿಲ್ಲ. ಆಯಾ ಕಾಲಕ್ಕೆ, ಸನ್ನಿವೇಶಕ್ಕೆ, ಘಟಿತಕ್ಕೆ, ನಾಡು ನುಡಿಯ ಅಪಮಾನಕ್ಕೆ ಕೂಡಲೇ ಕೆರಳಿ ನಿಲ್ಲುವ ಡಾ. ಪಾಟೀಲ ಪುಟ್ಟಪ್ಪನವರ ಚರ್ಚೆಯ ನಿಲಿಕೆಗೆ ನಿಲುಕದೇ ಹೋದ ವಿಷಯಗಳಿಲ್ಲ.

ಕನ್ನಡ ನಾಡಿನಲ್ಲಿ ಅವರ ಉಪನ್ಯಾಸಗಳನ್ನು ಕೇಳದ ನಗರಗಳಿಲ್ಲವೆಂದೇ ಹೇಳಬಹುದು. ಕನ್ನಡದ ಬಗ್ಗೆ ಮಾತನಾಡುವಾಗ ಅವರ ನಾಲಿಗೆ ಸಿಡಿಲ ಕಡಲಾಗುತ್ತದೆ. ಶಿವನ ಡಿಂಡಿಮವಾಗುತ್ತದೆ. ವಿರೋದಿ ಭೂತಗಳಿಗೆ ಚಂಡೆಯೂ ಆಗುತ್ತದೆ. ಈ ನಾಲ್ಕು ಮಾರ್ಗಗಳ ಮೂಲಕ ಅವರು ಕನ್ನಡದ ಕೋಟೆಯನ್ನು ಭದ್ರಗೊಳಿಸಲು ಪ್ರಯತ್ನಿಸಿದ್ದಾರೆ. ಇಂತಹ ಶಕ್ತಿ ಅವರ ಪಾಲಿಗೆ ಅಕ್ಷಯವಾಗಲೆಂದು ಕರ್ನಾಟಕ ಹೃದಯ ಶಿವನನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿದ ಡಾ. ದೇ. ಜವರೇಗೌಡರ ಮಾತು ಉತ್ಪ್ರೇಕ್ಷೆಯಲ್ಲ.

1949ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ದಾಖಲಾದ ಡಾ. ಪಾಟೀಲ ಪುಟ್ಟಪ್ಪನವರ ಪರಿಣತಿ ಕಂಡು ಅಲ್ಲಿಯ ಡೀನ್‍ರಾಗಿದ್ದ ಡಾ. ಜೋಸೆಫ್ ಬ್ರಾಂಟ್‍ರವರು ವಿಶಾಲ ಕರ್ನಾಟಕ ಪತ್ರಿಕೆಯ ಸಂಪಾದಕತ್ವದ ಹಿನ್ನೆಲೆಯಲ್ಲಿಯೇ ಪಿಎಚ್‍ಡಿ ಪ್ರಬಂಧ ಬರೆದು ಮಂಡಿಸಲು ಹೇಳಿದರು. ಆರ್ಥಿಕ ಅನಾನುಕೂಲತೆಯಿಂದ ಹೆಚ್ಚು ಕಾಲ ಅಮೆರಿಕಾದಲ್ಲಿ ನಿಲ್ಲಲಾಗದ ಡಾ. ಪಾಟೀಲ ಪುಟ್ಟಪ್ಪ ಭಾರತಕ್ಕೆ ಮರಳಿದರು. ನಂತರ ನವಯುಗ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಡಾ. ಪಾಟೀಲ ಪುಟ್ಟಪ್ಪ 1954ರಲ್ಲಿ ಸಂಯುಕ್ತ ಕರ್ನಾಟಕ ಮೊಹರೆ ಹನುಮಂತರಾಯರ ಪ್ರೊತ್ಸಾಹದೊಂದಿಗೆ ಪ್ರಪಂಚ ಪತ್ರಿಕೆ ಹುಟ್ಟು ಹಾಕಿದರು.

ಪತ್ರಿಕೆ ಹಾಗೂ ಸರಕಾರ ಎರಡೂ ಜನರನ್ನು ಕೇಂದ್ರವನ್ನಾಗಿ ಮಾಡಿಕೊಂಡಿವೆ. ಜನರಿಗೆ ಪತ್ರಿಕೆ ಹಾಗೂ ಸರಕಾರ ಎರಡೂ ಬೇಕು. ಅನಿಷ್ಟವೇ ಆಗಿದ್ದರೂ ಅವೆರಡೂ ಅನಿವಾರಣೀಯ. ಅವುಗಳಿಗಿಂತಲೂ ಉತ್ತಮವಾದ ಸಂಸ್ಥೆಗಳನ್ನು ಮಾನವ ಇನ್ನೂ ಸೃಷ್ಟಿಸಿಲ್ಲ. ಪತ್ರಿಕೆ ಮುಖ್ಯವೋ, ಸರಕಾರ ಮುಖ್ಯವೋ ಎಂದು ಯಾರಾದರೂ ಕೇಳಿದರೆ ಪತ್ರಿಕೆಯಿಲ್ಲದ ಸರಕಾರವನ್ನು ಆರಿಸಿಕೊಳ್ಳುವುದಕ್ಕಿಂತಲೂ ತಾನು ಸರಕಾರವಿಲ್ಲದ ಪತ್ರಿಕೆಯನ್ನು ಆರಿಸಿಕೊಳ್ಳುವುದಾಗಿ ಜೆಫರ್‍ಸನ್ ಹೇಳಿದ್ದನು. ಅವನು ಹೇಳುವಂತೆ ಪತ್ರಿಕೆ ಮುಖ್ಯವಾಗಿರಬಹುದು. ಆದರೆ ಸರಕಾರವೂ ಅಮುಖ್ಯವಾದುದೇನಲ್ಲ.  ತನ್ನ ಧ್ವನಿ, ಜನರ ಧ್ವನಿ, ತನಗಿರುವ ಸ್ವಾತಂತ್ರ್ಯ, ಜನರಿಗಿರುವ ಸ್ವಾತಂತ್ರ್ಯ ಎಂದು ಪತ್ರಿಕೆ ಮೊದಲಿನಿಂದಲೂ ಆ ನಿಲುವು ತಾಳಿ ಪ್ರತಿಪಾದಿಸಿಕೊಂಡು ಬಂದಿದೆ.

ಆದರೆ ಪತ್ರಿಕಾ ಸ್ವಾತಂತ್ರ್ಯವು ಈಗ ಪ್ರಶ್ನಿಸುವಂತಹ ಸ್ವಾತಂತ್ರ್ಯವಾಗಿ ಪರಿಣಮಿಸಿದೆ. ಸರಕಾರವು ಜನಸಾಮಾನ್ಯರಿಗೆ ತಿಳಿಯದಷ್ಟು ದೊಡ್ಡದಾಗಿ ಸಂಕೀರ್ಣವಾಗಿ ಬೆಳೆದು ಅದರ ಮೇಲೆ ನಿಯಂತ್ರಣ ಹೇರುವುದು ಹೇಗೆ ಸಾಧ್ಯವಿಲ್ಲವೋ ಹಾಗೆ ಪತ್ರಿಕೆ ಕೂಡ ಉದ್ದಿಮೆ ಎನಿಸಿ ದೊಡ್ಡದಾಗಿ ಬೃಹತ್ತಾಗಿ ಬೆಳೆದಿರುವುದರಿಂದ ಅದರ ಬಳಿಗೆ ಹೋಗುವುದೂ ಜನಸಾಮಾನ್ಯರಿಗೆ ಸಾಧ್ಯವಿಲ್ಲದಾಗಿದೆ ಎಂದು ಪತ್ರಿಕೋದ್ಯಮದ ಬಗ್ಗೆ 1976 ರಲ್ಲಿಯೇ ಹೇಳಿದ ಡಾ. ಪಾಟೀಲ ಪುಟ್ಟಪ್ಪನವರ ಮಾತು ವರ್ತಮಾನದ ಪತ್ರಿಕೋದ್ಯಮಕ್ಕೆ ಹಿಡಿದ ಕೈಗನ್ನಡಿ !

ಶತಮಾನಗಳ ಚೆಲುವೆ, ಚಿರಯುವತಿ ಎಂದು ದೆಹಲಿಗೆ ನಾಮಕರಣ ಮಾಡುವ ಡಾ. ಪಾಟೀಲ ಪುಟ್ಟಪ್ಪ ಸಂಸ್ಕೃತಿಯಿಂದ ಸಂಸ್ಕೃತಿಗೆ ಪಲ್ಲಟಗೊಳ್ಳುತ್ತಲೇ ಅನಾಧಿಕಾಲದಿಂದಲೂ ಉಳಿದುಕೊಂಡು ಬಂದ ದೆಹಲಿ, ಇಟಲಿಯ ರೋಮ್ ರಾಜಧಾನಿಗಿಂತಲೂ ಪ್ರಾಚೀನವಾದುದೆಂದು ಸಾದಿಸುವಲ್ಲಿ ಯಾವುದೂ ಉತ್ಪ್ರೇಕ್ಷೆಯೇನಿಸುವುದಿಲ್ಲ. ದೆಹಲಿಯ ರೂಪ, ವಿರೂಪ ಹೇಳಿದಂತೆಯೇ ಗೋವೆಯ ಪುರಾಣಕಾಲದ ಪರಶುರಾಮ, ಅಶೋಕ, ಕದಂಬರು, ಅರಬ್ಬರು, ಪೋರ್ಚುಗೀಸರ ಕಾಲದಿಂದ ಇಂದಿನವರಗೆ ಐತಿಹ್ಯಗಳ ಪಾತ್ರಗಳನ್ನು ಮನದಟ್ಟು ಮಾಡುತ್ತಲೇ ಸ್ಥಳದರ್ಶನ ಮಾಡಿಸುತ್ತಾರೆ. ಪಾಂಡಿಚೇರಿ, ಅಂಡಮಾನ್, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‍ನಿಂದ ಹಿಡಿದು ದೇಶದ ಬಹುತೇಕ ಭಾಗಗಳು ಪುಟದಿಂದ ಎದ್ದು ನಿಲ್ಲುತ್ತವೆ.

ತಮ್ಮ ಚಿಕ್ಕ-ಚಿಕ್ಕ ವಾಕ್ಯ ಸರಣಿಯಿಂದಾಗಿಯೇ ಸಮರ್ಥ ಚಿತ್ರಕಶಕ್ತಿ ಪಡೆದಿರುವ ಡಾ. ಪಾಟೀಲ ಪುಟ್ಟಪ್ಪನವರಿಗೆ ಅದೇ ಕಥೆ ಕಟ್ಟುವ ಪ್ರಮುಖ ಪೂರಕ ಸಂಗತಿಯಾಗಿದೆ. ಶಿಲಾ ಬಾಲಿಕೆ ನುಡಿದಳು ಕಥೆಯೇ ಈ ಪರಿಣಿತಿಗೆ ಸಾಕ್ಷಿ. ಈ ಕಥೆಯ ಕುರಿತು ಡಾ. ದೇ. ಜವರೇಗೌಡರು ಹೇಳಿದ ಮಾತು ಉಲ್ಲೇಖನೀಯ.
ಎಂಟುನೂರು ವರ್ಷಗಳ ಹಿಂದಿನ ಘಟನೆಯೊಂದು ದೇವಪ್ಪನ ಕಣ್ಣೆದುರಿಗೆ ಹಾಯ್ದು ಹೋದಂತೆ ಈ ಕಥೆಯಲ್ಲಿ ಅನುಸರಿಸುವ ತಂತ್ರ ಅಪೂರ್ವವಾದುದು. ಹೂವಯ್ಯ-ಮಧುಮತಿಯರ ಆದರ್ಶ ಪ್ರೇಮ ಹೂವಯ್ಯನ ಕಲಾನಿಷ್ಠೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಲೇಖಕರು ಈ ಕಥೆಯಲ್ಲಿ ತಂದಿದ್ದಾರೆ. ದೇವಯ್ಯ ಕಲಾರಾಧಕ, ಶಿಲೆ ಶಿಲೆಯಲ್ಲೂ ಜೀವ ಭಾವಗಳನ್ನು ಕಾಣುವ ಅವನು ಇಂಥ ಸುಂದರ ಕಥೆಯನ್ನು ತಾನು ಕಂಡೆನೆಂಬಂತೆ ಚಿತ್ರಿಸುವ ರೀತಿ ಮೋಹಕವಾದುದು.
ಬೇಲೂರಿನ ಶಿಲಾಬಾಲಿಕೆಯರನ್ನು ಕಂಡು ಬೆರಗಾಗುವ ನಮ್ಮೆದುರು ಆ ಕಾಲದಲ್ಲಿ ಅಂತಹ ಶಿಲ್ಪಗಳು ರಚನೆಯಾಗುವಲ್ಲಿ ಶಿಲ್ಪಿಯ ಪರಿಶ್ರಮ, ಆ ಕಾರ್ಯಕ್ಕೆ ಮಾಡೆಲ್ ಆಗಿರಬಹುದಾದವಳ ಅನುರಾಗ, ಅಲ್ಲಿ ಏರ್ಪಡುವ ಪ್ರೇಮದ ಕಥೆ ಹಾಗೂ ಆ ಕಾಲದ ಜನಜೀವನ, ವೃತ್ತಿ ನಿಷ್ಠೆಯ ಅಂಶಗಳನ್ನುಪಯೋಗಿಸಿ ಸುಂದರ ಕಥೆಯಾಗಿಸುವ ಡಾ ಪಾಟೀಲ ಪುಟ್ಟಪ್ಪನವರು ಬಳಸಿದ ತಂತ್ರಗಾರಿಕೆ, ಕುಸುರಿ ಕೆಲಸ ಗಮನಿಸಿದರೆ, ಡಾ. ದೇ.ಜ.ಗೌ. ಮಾತು ಬರೀ ಬಣ್ಣನೆಯಲ್ಲ ಎಂಬುದು ಗೊತ್ತಾಗುತ್ತದೆ.

ಅನುಭವ ಇರುವಲ್ಲಿ ಅಮೃತತ್ವ ಇದೆ, ಬದುಕುವುದಕ್ಕೆ ಬೇಕು ಬದುಕುವ ಈ ಮಾತು ಎರಡೂ ಅವರ ಸಂಪಾದಕತ್ವದ ಪ್ರಪಂಚ ಪತ್ರಿಕೆಯ ಶಾಶ್ವತ ಅಂಕಣಗಳು. ತಮ್ಮ ಯೌವ್ವನದ ಕಾಲದಿಂದ ಪ್ರಪಂಚ ಓದುತ್ತ ಬಂದವರು ಇಂದಿಗೂ ಈ ಅಂಕಣಗಳಿಗೆಂದೇ ಆ ಪತ್ರಿಕೆ ಖರೀದಿಸುತ್ತಿದ್ದರು. ಬದುಕಿನ ಅನನ್ಯತೆಗಳು, ಬದುಕು ಬೆಳಗಿಸಿಕೊಳ್ಳಲು, ಭಾವಗಳು ತಿಳಿಗೊಳ್ಳಲು ಈ ಎರಡೂ ಅಂಕಣದ ಬರಹಗಳು ಎಷ್ಟೋ ಜನರ ಬದುಕಿನ ಗತಿಯನ್ನೇ ಬದಲಿಸಿದ ದೃಷ್ಟಾಂತಗಳಿವೆ. ಎಲ್ಲ ಕಾಲಕ್ಕೂ ಪ್ರಪಂಚ ಪತ್ರಿಕೆಯ ಬಹಳಷ್ಟು ಪುಟಗಳು ಸಂಗ್ರಾಹ್ಯವಾಗಿಯೇ ಉಳಿದಿವೆ. ಅವೇ ಪುಸ್ತಕ ರೂಪ ಪಡೆದು ಮನುಷ್ಯರ ಬದುಕಿನ ನಡೆಯಲ್ಲಿ ಪಥ ನಿರ್ದೇಶಿಸುವ ಫಲಕಗಳಂತೆ, ಮಾರ್ಗಸೂಚಿಗಳಂತೆ ಪಾತ್ರ ನಿರ್ವಹಿಸುತ್ತವೆ.

ಪುಟ್ಟಪ್ಪನವರ ಬರಹಗಳಲ್ಲಿ ಈ ಶತಮಾನದ ರಾಜಕಾರಣ, ಮಹತ್ವದ ವ್ಯಕ್ತಿಗಳ ಅಂತರಂಗದ ಶ್ರೇಷ್ಠತೆ, ದೊಡ್ಡವರ ಸಣ್ಣತನಗಳು, ಸಾರ್ವಜನಿಕ ಬದುಕು ಬಯಸುವ ಜವಾಬ್ದಾರಿ, ಭ್ರಷ್ಟತೆಯಿಂದಾಗುವ ಅನಾಹುತಗಳು ಸೇರಿದಂತೆ ದಾಖಲಾಗದೆ ಉಳಿದ ವಿಷಯಗಳೇ ಇಲ್ಲ ಎಂದು ಹೇಳಬಹುದು. ಡಾ. ಪಾಟೀಲ ಪುಟ್ಟಪ್ಪನವರ ಆಲೋಚನೆಯ ಹರವು ದೇಶ, ಕೋಶ ಗಡಿಗಳ ಮಿತಿಯನ್ನು ದಾಟಿ ಪ್ರಪಂಚದಲ್ಲೆಡೆ ವಿಹರಿಸುತ್ತದೆ. ಅವರ ಈ ದಾಖಲೆಗಳ ಒಳನೋಟವಿದೆಯಲ್ಲ ಅದೊಂದು ಪ್ರತ್ಯೇಕ ಪಾಪು ಲೋಕ !

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin