ಸಂಸತ್‍ನಲ್ಲಿ ಪ್ರತಿಧ್ವನಿಸಿದ ರೈತರ ಆತ್ಮಹತ್ಯೆ ವಿಚಾರ, ಸರ್ಕಾರಕ್ಕೆ ವಿಪಕ್ಷಗಳ ತರಾಟೆ

Session-Parliament

ನವದೆಹಲಿ,ಜು.19-ದೇಶದ ವಿವಿಧ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸಂಸತ್‍ನ ಉಭಯ ಸದನಗಳಲ್ಲೂ ಪ್ರತಿಪಕ್ಷಗಳು ಭಾರೀ ಪ್ರತಿಭಟನೆ ನಡೆಸಿ ಗದ್ದಲ-ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಯಿತು.   ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ರೈತರ ಸಮಸ್ಯೆಗಳ ಕುರಿತು ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಈ ವಿಷಯದ ಬಗ್ಗೆ ಇಂದು ವಿವರವಾದ ಚರ್ಚೆ ನಡೆದಿದೆ. ವಿರೋಧ ಪಕ್ಷಗಳ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಲು ಸರ್ಕಾರ ಸಿದ್ದವಿದೆ. ಸದನದ ಕಲಾಪಕ್ಕೆ ಅಡ್ಡಿಪಡಿಸದೆ ಚರ್ಚೆಯಲ್ಲಿ ಪಾಲ್ಗೊಣ್ಣ ಎಂದು ಉತ್ತರ ನೀಡಿದರು.

ಆದರೆ ಕಾಂಗ್ರೆಸ್, ಎಡಪಕ್ಷ ಮತ್ತು ಆರ್‍ಜೆಡಿ ಸದಸ್ಯರು ಸಚಿವರ ಉತ್ತರದಿಂದ ತೃಪ್ತರಾಗದೆ ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮ ನಿಲ್ಲಿಸಿ, ರೈತರ ಸಾಲ ಮನ್ನಾ ಮಾಡಿ ಹಾಗೂ ಅವರ ಆತ್ಮಹತ್ಯೆಯನ್ನು ತಡೆಗಟ್ಟಿ ಎಂದು ಘೋಷಣೆಗಳನ್ನು ಕೂಗಿದರು. ಸುಗಮ ಕಲಾಪಕ್ಕಾಗಿ ಪ್ರತಿಪಕ್ಷಗಳ ಮನವೊಲಿಸಲು ಲೋಕಸಭೆ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಪದೇ ಪದೇ ಮಾಡಿದ ಮನವಿಗೆ ಧರಣಿ ನಿರತ ಸದಸ್ಯರು ಸ್ಪಂದಿಸದ ಕಾರಣ ಸದನವನ್ನು ಮುಂದೂಡಿದರು.

ರಾಜ್ಯ ಸಭೆಯಲ್ಲೂ ಪ್ರತಿಭಟನೆ:

ದೇಶಾದ್ಯಂತ ರೈತರು ಎದುರಿಸುತ್ತಿರುವ ಬವಣೆ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿತು. ಕಾಂಗ್ರೆಸ್, ಸಮಾಜವಾದಿ ಪಕ್ಷ , ಸಿಪಿಎಂ, ಜೆಡಿಯು ಸದಸ್ಯರು ಮೊದಲಾದವರು ಈ ವಿಷಯ ಪ್ರಸ್ತಾಪಿಸಿ ಕೇಂದ್ರ  ಸರ್ಕಾರ ಅನ್ನದಾತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡವು.
ಈ ಮಧ್ಯೆ ಸಮಾಜವಾದಿ ಪಕ್ಷದ ಸದಸ್ಯರು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಗೋ ರಕ್ಷಕರ ಹಿಂಸಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿ ಧರಣಿ ನಡೆಸಿದಾಗ ಗದ್ದಲದ ವಾತಾವರಣ ಉಂಟಾಯಿತು.  ಉಪಸಭಾಪತಿ ಪಿ.ಜೆ.ಕುರಿಯನ್ ಕೆಲಕಾಲ ಸದನವನ್ನು ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin