ಅಧಿಕಾರಗಳ ನಿರ್ಲಕ್ಷ್ಯದಿಂದ ಬಿಬಿಎಂಪಿ ಬೊಕ್ಕಸಕ್ಕೆ 200 ಕೋಟಿ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಜು.20-ಪಾಲಿಕೆ ಕೆಳಹಂತದ ಅಧಿಕಾರಿಗಳು ಆಯುಕ್ತರ ಹಿಡಿತದಲ್ಲಿಲ್ಲ. ಈ ಅಧಿಕಾರಿಗಳ ದುರುದ್ದೇಶ ಮತ್ತು ಬೇಜವಾಬ್ದಾರಿತನದಿಂದ ಆಸ್ತಿ ತೆರಿಗೆಯಲ್ಲಿ ಕಳೆದ ಮೂರು ವರ್ಷಗಳಿಂದ ಪಾಲಿಕೆ ಬೊಕ್ಕಸಕ್ಕೆ ಸುಮಾರು 200 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಇಂದಿಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಳಹಂತದ ಅಧಿಕಾರಿಗಳಿಂದ ಪಾಲಿಕೆಗೆ ಭಾರೀ ನಷ್ಟ ಉಂಟಾಗಿದೆ. ಇನ್ನೊಂದು ವಾರದಲ್ಲಿ ಮಾಹಿತಿ ನೀಡಬೇಕು, ಒಂದು ವೇಳೆ ಮಾಹಿತಿ ನೀಡದ ವಲಯ ಅಧಿಕಾರಿಗಳ ವಿರುದ್ಧ ಪಾಲಿಕೆ ಪುನಾರಚನಾ ಸಮಿತಿಯಿಂದ ತನಿಖೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹದೇವಪುರ, ಯಲಹಂಕ, ದಾಸರಹಳ್ಳಿ ಮತ್ತು ಪೂರ್ವವಲಯಗಳಲ್ಲಿ ಕಳೆದ ಮೂರು ವರ್ಷಗಳಿಂದ ಆಸ್ತಿ ತೆರಿಗೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ.
ಹೈ ರೈಸ್ ಬಿಲ್ಡಿಂಗ್‍ಗಳಿಗೆ ತೆರಿಗೆ ನಿಗದಿ ಮಾಡದಿರುವುದು ಇದಕ್ಕೆಲ್ಲ ಕಾರಣವಾಗಿದೆ. 2015 ರಿಂದ 16707 ಯುನಿಟ್‍ಗಳಿಗೆ ಓಸಿ ನೀಡಲಾಗಿದೆ. ಆದರೂ ಈ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತಂದಿಲ್ಲ. ಹಾಗಾಗಿ ಪಾಲಿಕೆ ಬೊಕ್ಕಸಕ್ಕೆ 200ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು. ಯಾವ್ಯಾವ ಕಟ್ಟಡಕ್ಕೆ ಎಷ್ಟೆಷ್ಟು ಓಸಿ ನೀಡಿದ್ದೀರಾ ಎಂದು ನಾನೇ 15 ಪತ್ರ ಬರೆದಿದ್ದೇನೆ. ಆದರೂ ಸಹ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಪಾಲಿಕೆ ಆಯುಕ್ತರೂ ಕೂಡ ಮಾಹಿತಿ ಕೇಳಿದ್ದಾರೆ. ಆದರೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಕೆಳಹಂತದ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದು ಇದರಿಂದಲೇ ತಿಳಿದುಬಂದಿದೆ ಎಂದರು.

ಓಸಿ ನೀಡಿರುವುದರ ಬಗ್ಗೆ ಎಂಟು ವಲಯದ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ ತೆರಿಗೆ ವಂಚಕರೊಂದಿಗೆ ಕೆಳಹಂತದ ಅಧಿಕಾರಿಗಳು ಶಾಮೀಲಾಗಿರುವುದರ ಗುಮಾನಿ ಇದೆ. ಹಾಗಾಗಿ ಒಂದು ವಾರ ಗಡುವು ನೀಡಲಾಗಿದೆ. ಮಾಹಿತಿ ನೀಡದ ವಲಯ ಅಧಿಕಾರಿಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ರಚನೆ ಮಾಡಿರುವ ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಸ್.ಪಾಟೀಲ್ ಅವರನ್ನೊಳಗೊಂಡ ಬಿಬಿಎಂಪಿ ಪುನಾರಚನಾ ಸಮಿತಿಗೆ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin