ಇಂದಿರಾ ಕ್ಯಾಂಟಿನ್‍ ಆರಂಭದಲ್ಲೇ ಅವ್ಯವಹಾರ, ಸುಮಾರು 65 ಕೋಟಿ ಗುಳುಂ

ಈ ಸುದ್ದಿಯನ್ನು ಶೇರ್ ಮಾಡಿ

Indira-Canteen--01

ಬೆಂಗಳೂರು,ಜೂ.20-ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ಪ್ರಾರಂಭಕ್ಕೂ ಮುನ್ನವೇ ಅವ್ಯವಹಾರದ ಆರೋಪ ಕೇಳಿಬಂದಿದೆ.
ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಸರಿಸುಮಾರು 65 ಕೋಟಿ ರೂ.ಗಳ ಅಕ್ರಮ ಎಸಗಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಬೆಂಗಳೂರು ನಗರ ಬಿಜೆಪಿ ವಕ್ತಾರ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಅವರು ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ನಾಲ್ವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವರಾದ ಜಾರ್ಜ್ ಅಲ್ಲದೆ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಮತ್ತು ಪಾಲಿಕೆಯ ವಿಶೇಷ ಆಯುಕ್ತ ಮನೋಜ್ ರಾಜನ್ ವಿರುದ್ದ ಲೋಕಾಯುಕ್ತ ನ್ಯಾಯಾಲಯ ಹಾಗೂ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಇಂದಿರಾ ಕ್ಯಾಂಟೀನ್ ಗೋಲ್‍ಮಾಲ್ ಬಗ್ಗೆ ದೂರು ದಾಖಲಿಸಿದ್ದಾರೆ.  ತಮ್ಮ ಪಕ್ಷದ ಮಹಾನ್ ನಾಯಕಿಯಾದ ಇಂದಿರಾಗಾಂಧಿ ಅವರ ಹೆಸರಿನಲ್ಲೇ ಭಾರೀ ಪ್ರಮಾಣದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

198 ವಾರ್ಡ್‍ಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣದ ಹೆಸರಿನಲ್ಲಿ ಯೋಜನೆಯ ಪ್ರತಿಯೊಂದು ಅಡುಗೆ ಮನೆ ನಿರ್ಮಾಣದಲ್ಲಿ 39 ಲಕ್ಷ ರೂ.ಗಳ ವಂಚನೆ ಮಾಡಲಾಗಿದೆ.  ಪ್ರತಿಯೊಂದು ಚದರ ವಿಸ್ತೀರ್ಣ ಕಟ್ಟಡ ನಿರ್ಮಾಣದ ಹೆಸರಿನಲ್ಲಿ 2 ಲಕ್ಷ ರೂ.ಗಳನ್ನು ವಂಚಿಸಲಾಗಿದ್ದು , 27 ಅಡುಗೆ ಮನೆಗಳು ಮತ್ತು 198 ಕ್ಯಾಂಟೀನ್‍ಗಳ ನಿರ್ಮಾಣದ ಹೆಸರಿನಲ್ಲಿ 65 ಕೋಟಿ ರೂ.ಗಳ ಅಕ್ರಮ ವೆಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪಾರದರ್ಶಕ ಕಾಯ್ದೆಗಳನ್ನು ಗಾಳಿಗೆ ತೂರಿ ಕ್ಯಾಂಟೀನ್ ನಿರ್ಮಾಣದ ಗುತ್ತಿಗೆಯನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಇಎಫ್ ಇನ್‍ಫ್ರಾಸ್ಟ್ರಕ್ಚರ್ ಎಂಬ ಸಂಸ್ಥೆಗೆ ನೀಡಲಾಗಿದೆ.

100 ಕೋಟಿ ರೂ.ಗಳ ಈ ಯೋಜನೆಯ ಗುತ್ತಿಗೆಯನ್ನು ಏಕಪಕ್ಷೀಯವಾಗಿ ವಹಿಸಲಾಗಿದೆ ಎಂದು ಆರೋಪಿಸಿದ ಅವರು, ದೀರ್ಘಾವಧಿ ಸಮಯ ಮತ್ತು ಮೂರನೇ ಒಂದು ಭಾಗದಷ್ಟು ಹಣ ಉಳಿತಾಯ ಮಾಡುವ ಸಲುವಾಗಿ ಫ್ರೀ ಕಾಸ್ಟ್ ತಂತ್ರಜ್ಞಾನದ ಕಟ್ಟಡ ನಿರ್ಮಾಣ ಪದ್ಧತಿ ಅನುಸರಿಸಲಾಗುತ್ತದೆ.
ಚದರ ಒಂದಕ್ಕೆ 95 ಸಾವಿರ ರೂ.ಗಳಲ್ಲಿ ನಿರ್ಮಿಸಬಹುದಾದ ವೆಚ್ಚವನ್ನು 2.9 ಲಕ್ಷಕ್ಕೆ ನಿರ್ಮಿಸಲಾಗುತ್ತಿದೆ. ಪ್ರತಿ ಚದರ ಒಂದರಲ್ಲಿ ಎರಡು ಲಕ್ಷ ರೂ.ಗಳನ್ನು ಗುಳುಂ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಒಂದು ಲಕ್ಷಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಫ್ರೀಕಾಸ್ಟ್ ಪದ್ಧತಿಯ ಕಟ್ಟಡಗಳನ್ನು ಬೆಂಗಳೂರು ಸಂಸ್ಥೆಗಳು ನಿರ್ಮಿಸಿಕೊಡುತ್ತಿದ್ದವು. ಆದರೆ ಇವುಗಳನ್ನಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ತಮಿಳುನಾಡಿನ ಸಂಸ್ಥೆಗೆ ಗುತ್ತಿಗೆ ನೀಡಿ ಹಣ ಕಬಳಿಸುವ ಹುನ್ನಾರ ಮಾಡಿದ್ದಾರೆ. ಅಲ್ಲದೆ ಆ ಸಂಸ್ಥೆಗೆ ನೆರವಾಗಲು 4ಜಿ ಅನ್ವಯ ತೆರಿಗೆ ವಿನಾಯ್ತಿಯನ್ನು ಕೂಡ ರಾಜ್ಯ ಸರ್ಕಾರ ನೀಡಿದೆ. ಇದರಿಂದ 12 ಕೋಟಿ ರೂ. ತೆರಿಗೆ ವಂಚನೆಯಾಗುತ್ತಿದೆ ಎಂದು ದೂರಿದರು.
ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೊಳಿಸಲೇಬೇಕು ಎಂಬ ಉದ್ದೇಶದಿಂದ ಉದ್ಯಾನವನ, ಆಟದ ಮೈದಾನ, ಸಿಎ ನಿವೇಶನ, ದೇವಸ್ಥಾನದ ಜಾಗಗಳು, ಸ್ಮಶಾನ ಎಲ್ಲೆಂದರಲ್ಲಿ ಕ್ಯಾಂಟೀನ್‍ಗಳನ್ನು ನಿರ್ಮಾಣ ಮಾಡುತ್ತಿರುವ ಸರ್ಕಾರ ಎಲ್ಲ ಕಾನೂನು ನಿಯಮಗಳನ್ನು ಗಾಳಿಗೆ ತೂರುತ್ತಿದೆ.
ಈ ಯೋಜನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ವೆಚ್ಚಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ ಅವರು, ಇಂದಿರಾ ಕ್ಯಾಂಟೀನ್ 09 ಚದರ ವಿಸ್ತೀರ್ಣ ಬೆಂಗಳೂರು ಒನ್ ಕಟ್ಟಡವನ್ನು ಯಡಿಯೂರು ವಾರ್ಡ್‍ನಲ್ಲಿ ಕೇವಲ 10 ಲಕ್ಷ ರೂ.ಗಳ ವೆಚ್ಚದಲ್ಲೇ ನಿರ್ಮಿಸುತ್ತೇವೆ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಟೆಂಡರ್‍ಶ್ಯೂರ್ ರಸ್ತೆ, ಸ್ಕೈವಾಕ್‍ಗಳ ನಿರ್ಮಾಣ, ಮಳೆ ನೀರುಗಾಲುವೆಗಳ ನಿರ್ಮಾಣ, ವೈಟ್ ಟ್ಯಾಪಿಂಗ್ ಕಾಮಗಾರಿ, ಕಸದ ಡಬ್ಬಿಗಳನ್ನು ಪೂರೈಸುವ ನೆಪದಲ್ಲಿ ಹಾಗೂ 14ನೇ ಹಣಕಾಸು ಆಯೋಗದ ಕಾಮಗಾರಿಗಳನ್ನು ಕೆಆರ್‍ಐಡಿಎಲ್ ಸಂಸ್ಥೆಗೆ ನೀಡುವಲ್ಲಿ ಭಾರೀ ಅವ್ಯವಹಾರ ನಡೆಸಿರುವ ಸರ್ಕಾರ ಇಂದಿರಾ ಕ್ಯಾಂಟೀನ್‍ನಲ್ಲೂ ಕೂಡ ಅವ್ಯವಹಾರವನ್ನು ನಡೆಸಿ ತೊಘಲಕ್ ದರ್ಬಾರ್ ಮಾಡುತ್ತಿದೆ ಎಂದು ಆರೋಪಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin