ಜೈಲು ಕರ್ಮಕಾಂಡದಲ್ಲಿ ಮತ್ತಷ್ಟು ಅಧಿಕಾರಿಗಳಿಗೆ ಕಾದಿದೆ ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

Parappana-Agrahara-Jail

ಬೆಂಗಳೂರು,, ಜು.20- ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದ ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಎಡಿಜಿಪಿ ಸೇರಿದಂತೆ ಹಲವು ಹಂತದ ಅಧಿಕಾರಿಗಳ ಬದಲಾವಣೆ ಆಗಿದೆ. ಇದರ ಜತೆ ಒಂದಿಷ್ಟು ಕಠಿಣ ನಿರ್ಧಾರಗಳನ್ನು ಕೂಡ ನಿರೀಕ್ಷೆಯಂತೆ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಅಧಿಕಾರಿಗಳು ಬದಲಾದಾಗ, ಅವ್ಯವಹಾರದ ಆರೋಪ ಕೇಳಿ ಬಂದಾಗಲೆಲ್ಲ ಜೈಲಿನಲ್ಲಿ ಒಂದಿಷ್ಟು ಬದಲಾವಣೆ, ಸುಧಾರಣೆ ಆಗುವುದು ಸಹಜ.  ಪ್ರಮುಖವಾಗಿ ಹೊರಗಿನಿಂದ ಬರುವ ಆಹಾರ, ಸಂದರ್ಶನದ ಕಾಲಾವಧಿ, ಕೈದಿಗಳ ನಿಕಟ ಸಂಪರ್ಕ ಹೊಂದಿರುವ ಜೈಲು ಸಿಬ್ಬಂದಿ ಮೇಲೆ ನಿಗಾ ಮತ್ತಿತರವುಗಳಲ್ಲಿ ವ್ಯಾಪಕ ಬದಲಾವಣೆಗಳು ಕಂಡು ಬರುತ್ತವೆ.

ಆದರೆ, ಒಂದೆರಡು ತಿಂಗಳಲ್ಲಿ ಪರಿಸ್ಥಿತಿ ಮೊದಲಿನಂತೆ ಆಗಿ ಬಿಡುತ್ತದೆ. ಮತ್ತೊಂದು ದೊಡ್ಡ ಹಗರಣ ಇಲ್ಲವೇ ಅಧಿಕಾರಿಗಳ ಬದಲಾವಣೆ ಆದಾಗ ಮಾತ್ರ ಹೊಸ ಬದಲಾವಣೆಗಳು ಗೋಚರಿಸುತ್ತವೆ. ಈ ಸಾರಿ ಅಧಿಕಾರಿಗಳ ಬದಲಾವಣೆ, ಅವ್ಯವಹಾರ ಆರೋಪ ಎರಡೂ ಒಟ್ಟಿಗೇ ಬಂದಿದ್ದು, ಕೊಂಚ ಗಂಭೀರವಾದ ನಿಲುವನ್ನೇ ಕೈಗೊಳ್ಳಲಾಗಿದೆ.

ಏನು ಬದಲಾವಣೆ:

ಕೈದಿಗಳು ಕುಟುಂಬ ಸದಸ್ಯರ ಜತೆ ಭೇಟಿಯಾಗುವ ಕಾಲಾವಕಾಶ ಕಡಿತಗೊಳಿಸಲಾಗಿದೆ. ಹಿಂದೆ ಹೆಚ್ಚು ಸಮಯ ಮಾತನಾಡುವ ಅವಕಾಶ ಸಿಗುತ್ತಿತ್ತು. ಆದರೆ, ಇದೀಗ ಸಮಯ ನಿರ್ಬಂಧ ಹೇರಲಾಗಿದ್ದು, 10 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಕುಟುಂಬ ಸದಸ್ಯರ ಜತೆ ಮಾತನಾಡುವ ನೆಪದಲ್ಲಿ ಸಾಕಷ್ಟು ಮಂದಿ ಕೈದಿಗಳು ಜೈಲಿನ ಒಳಗಿನಿಂದಲೇ ಹೊರಗಿರುವ ತಮ್ಮ ಬೆಂಬಲಿಗರಿಗೆ ಮಾಹಿತಿ ರವಾನಿಸುತ್ತಿದ್ದರು. ಜೈಲಿನಲ್ಲಿದ್ದುಕೊಂಡೇ ಸಾಕಷ್ಟು ಅವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಹಲವು ದಿನಗಳಿಂದ ಆರೋಪ ಕೇಳಿ ಬರುತ್ತಿತ್ತು. ಇದಕ್ಕೀಗ ಕಡಿವಾಣ ಹಾಕಲಾಗಿದೆ.

ಹೊರಗಿನ ಊಟಕ್ಕೆ ಬ್ರೇಕ್:

ಕೈದಿಗಳಿಗೆ ಕುಟುಂಬ ಸದಸ್ಯರ ಮೂಲಕ ಇಲ್ಲವೇ ಹೊರಗಿನಿಂದ ಆಹಾರ ಪೂರೈಸಲಾಗುತ್ತಿತ್ತು. ಇದನ್ನು ಈಗ ನಿಲ್ಲಿಸಲು ನೂತನ ಎಡಿಜಿಪಿ ಎನ್.ಎಸ್.ಮೇಘರಿಕ್ ಆದೇಶ ಹೊರಡಿಸಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಅವರು ಹೊರಡಿಸಿದ ಆದೇಶ ಇದಾಗಿದೆ.
ಊಟ ಕೊಂಡೊಯ್ಯುವ ನೆಪದಲ್ಲಿ ಇದರ ಜತೆ ಮೊಬೈಲ್, ಮದ್ಯ, ಡ್ರಗ್ಸ್ ಪೂರೈಸಲಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ತಡೆಯಲು ಕಾರಾಗೃಹ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೂಡ ಮಾಡಲಾಗಿತ್ತು. ಇದೀಗ ಹೊರಗಿನ ಊಟ, ಆಹಾರಕ್ಕೆ ಕತ್ತರಿ ಹಾಕಲಾಗಿದೆ. ಇದರ ಜತೆ ಜೈಲಿನಲ್ಲಿರುವ ಪ್ರತಿ ಬ್ಯಾರಕ್‍ಗಳನ್ನೂ ನಿತ್ಯವೂ ಕೂಲಂಕಶವಾಗಿ ಪರಿಶೀಲಿಸುವ ಆದೇಶ ಕೂಡ ಹೊರಡಿಸಲಾಗಿದೆ.

ಮೊಬೈಲ್‍ಗೆ ಕಡಿವಾಣ:

ಈ ಹಿಂದೆ ಮೊಬೈಲ್‍ಗಳನ್ನು ಜೈಲಿನ ಆಚೆಯಿಂದ ಎಸೆಯಲಾಗುತ್ತದೆ ಎಂಬ ಆರೋಪ ಇತ್ತು. ಇದಕ್ಕಾಗಿ ಎತ್ತರವಾದ ಗೋಡೆ ಕಟ್ಟಿಸಲಾಗಿದೆ. ಬಲೆಗಳನ್ನು ಹಾಕುವ ಉದ್ದೇಶ ಕೂಡ ಹೊಂದಲಾಗಿತ್ತು. ಜತೆಗೆ ವಿವಿಧೆಡೆ ಜಾಮರ್ ಕೂಡ ಅಳವಡಿಸುವ ಕಾರ್ಯ ಆಗಿತ್ತು. ಆದರೆ, ಯಾವುದೂ ಫಲ ಕೊಟ್ಟಿಲ್ಲ. ಇದರಿಂದ ಇದೀಗ ಮೊಬೈಲ್ ಹಾವಳಿ ತಡೆಯಲು ಪರಪ್ಪನ ಅಗ್ರಹಾರದ ಜೈಲು ಆವರಣದಲ್ಲಿ ಬಳಕೆಯಾಗುವ ಮೊಬೈಲ್‍ಗಳ ಎಲ್ಲಾ ಒಳ-ಹೊರ ಹೋಗುವ ಕರೆಗಳ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ. ಇದು ಸಿಕ್ಕ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ಇದೀಗ ಪರಪ್ಪನ ಅಗ್ರಹಾರದಲ್ಲಿ ನಿಯಮಗಳು ಕಠಿಣವಾಗಿದ್ದು, ಬದಲಾವಣೆ ಗಾಳಿ ಬೀಸಿದೆ. ಆದರೆ, ಎಷ್ಟು ದಿನ ಉಳಿಯಲಿದೆ ಎನ್ನುವುದೇ ದೊಡ್ಡ ಪ್ರಶ್ನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin