ತೆರೆ ಮೇಲೆ ‘ಧೈರ್ಯಂ’ ಜೊತೆ ‘ದಾದಾ ಈಸ್ ಬ್ಯಾಕ್’

ಈ ಸುದ್ದಿಯನ್ನು ಶೇರ್ ಮಾಡಿ

Dada-is-Back

ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಚಿತ್ರಗಳ ಸುರಿಮಳೆಯಾಗಲಿದೆ. ಬಹಳಷ್ಟು ನಿರೀಕ್ಷೆಯೊಂದಿಗೆ ರಾಜ್ಯಾದ್ಯಂತ ಅದ್ಧೂರಿಯಾಗಿ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ ಧೈರ್ಯಂ ಚಿತ್ರ. ಮನುಷ್ಯನಿಗೆ ಧೈರ್ಯವೊಂದಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ನಿದರ್ಶನ ಎನ್ನುವಂತೆ ನಿರ್ಮಾಣವಾಗಿರುವ ಧೈರ್ಯಂ ಚಿತ್ರವನ್ನು ಶಿವತೇಜಸ್ ನಿರ್ದೇಶನ ಮಾಡಿದ್ದಾರೆ. ಆರ್. ಚಂದ್ರು ಅವರ ಬಳಿ ಸಹ ನಿರ್ದೇಶಕರಾಗಿದ್ದುಕೊಂಡು  ಅವರ ಬ್ಯಾನರ್‍ನಲ್ಲೇ ಮಳೆ ಎಂಬ ವಿನೂತನ ಪ್ರೇಮಕಥೆ ಹೊಂದಿರುವ ಚಲನಚಿತ್ರವನ್ನು ನಿರ್ದೇಶಿಸಿದ್ದ ಆರ್.ಶಿವತೇಜಸ್ ಅವರು ತಮ್ಮ ಎರಡನೆ ಪ್ರಯತ್ನದಲ್ಲಿ ಆ್ಯಕ್ಷನ್ ಬೇಸ್ ಕಥೆಯೊಂದನ್ನು ತೆರೆ ಮೇಲೆ ತರುತ್ತಿದ್ದಾರೆ.

ಮೂಲತಃ ಮೈಸೂರಿನವರೇ ಆದ ಶಿವತೇಜಸ್ ಚಿತ್ರರಂಗದಲ್ಲಿ ಹಲವಾರು ವರ್ಷಗಳ ಕಾಲ ಉತ್ತಮ ಅವಕಾಶಕ್ಕಾಗಿ ಅಲೆದಾಡಿದ್ದಾರೆ.  ಕೊನೆಗೆ ಅವರ ಸ್ನೇಹಿತರೇ ಆದ ರಾಜು ತಮ್ಮ ಸ್ನೇಹಿತನ ಪ್ರತಿಭೆಯನ್ನು ಪ್ರಪಂಚಕ್ಕೆ ಪ್ರಚುರಪಡಿಸಲೆಂದೇ ಈ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆಂದು ಹೇಳಬಹುದು. ನಿರ್ಮಾಪಕರ ಸಹಕಾರವಿಲ್ಲದಿದ್ದರೆ ತಾನು ಖಂಡಿತ ಇಂಥ ಚಿತ್ರವನ್ನು ಮಾಡಲು ಸಾಧ್ಯವಿಲ್ಲ.  ಅವರು ನೀಡಿದ ಬೆಂಬಲವನ್ನು ನನ್ನ ಜೀವಮಾನವಿಡೀ ಮರೆಯಲಾರೆ ಎಂದು ನಿರ್ದೇಶಕ ಶಿವತೇಜಸ್ ಅವರು ಸ್ಮರಿಸುತ್ತಾರೆ.

ಕೃಷ್ಣ-ರುಕ್ಕು ಖ್ಯಾತಿಯ ನಟ ಕೃಷ್ಣ ಅಜಯ್‍ರಾವ್ ಹಾಗೂ ಆದಿತಿ ಪ್ರಭುದೇವ್ ನಾಯಕ- ನಾಯಕಿಯಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ವೃತ್ತಿಯಲ್ಲಿ ಒಬ್ಬ ವೈದ್ಯರಾಗಿರುವ ರಾಜು ಅವರು ತಮ್ಮ ಸ್ನೇಹಿತನಿಗೋಸ್ಕರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳಿಗೆ ಎಲ್ಲಾ ಕಡೆಯಿಂದ ಉತ್ತಮವಾದ ರೆಸ್ಪಾನ್ಸ್ ಕೂಡ ಸಿಕ್ಕಿದ್ದು, ಉದಯ ಮೆಹ್ತಾ ಈ ಚಿತ್ರದ ವಿತರಣೆಯ ಜವಾಬ್ದಾರಿ

ಹೊತ್ತಿದ್ದಾರೆ. ಆರ್ಮುಗಂ ಎಂದೇ ಹೆಸರಾದ ನಟ ರವಿಶಂಕರ್ ಈ ಚಿತ್ರದಲ್ಲಿ ನಾಯಕನಷ್ಟೇ ಪ್ರಮುಖವಾಗಿ ಮೂಡಿ ಬಂದಿರುವ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದುವ ಕನಸು ಕಾಣುತ್ತಿರುವ ಇಂದಿನ ಯುವಜನಾಂಗಕ್ಕೆ ಈ ಚಿತ್ರದಲ್ಲಿ ಉತ್ತಮವಾದ ಮೆಸೇಜ್ ಇದ್ದು, ನಾಯಕ ಅಜಯ್‍ರಾವ್ ಈ ಚಿತ್ರದಲ್ಲಿ ಬಹಳ ವಿಭಿನ್ನವಾಗಿ ಅಭಿನಯಿಸಿದ್ದಾರಂತೆ. ಅದೇ ರೀತಿ ನಾಯಕಿಗೆ ಪ್ರಥಮ ಚಿತ್ರವಾದರೂ ಭರವಸೆಯ ಬೆಡಗಿಯಾಗಿ ಸ್ಯಾಂಡಲ್‍ವುಡ್‍ನಲ್ಲಿ ಗಮನ ಸೆಳೆಯಲಿದ್ದಾರೆ ಎಂಬ ಅಭಿಪ್ರಾಯವನ್ನು ಚಿತ್ರತಂಡ ಹೊಂದಿದೆ.ಶೇಖರ್‍ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಮಿಲ್‍ರವರ ಸುಮಧುರ ಸಂಗೀತವಿದೆ.  ಈ ಚಿತ್ರವು ಬೆಂಗಳೂರಿನಲ್ಲಿ ನಡೆದ ಎರಡು ನೈಜ ಘಟನೆಯ ಪ್ರೇರಿತವಾಗಿ ಮೂಡಿಬಂದಿರುವ ಧೈರ್ಯಂ ಚಿತ್ರ ಈಗಾಗಲೇ ಬಹಳಷ್ಟು ಸದ್ದನ್ನು ಮಾಡಿದೆ. ಸಾಧುಕೋಕಿಲ ಜೈಜಗದೀಶ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಇರುವ ಈ ಚಿತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಲು ಸನ್ನದ್ಧವಾಗಿದೆ.

‘ದಾದಾ ಈಸ್ ಬ್ಯಾಕ್’

ಈಗಾಗಲೇ ಬಹಳಷ್ಟು ರೌಡಿಸಂ ಕಥಾಹಂದರ ಒಳಗೊಂಡಿರುವ ಚಿತ್ರಗಳು ಬಂದು ಹೋಗಿವೆ. ಕೆಲವು ನೈಜ ಘಟನೆ ಆಧಾರಿತವಾದರೆ ಮತ್ತೆ ಕೆಲವು ಕಾಲ್ಪನಿಕ ಕಥೆಯನ್ನು ಒಳಗೊಂಡಿರುವುದನ್ನು ನಾವೆಲ್ಲರೂ ನೋಡಿಯೇ ಇದ್ದೇವೆ. ಆದರೆ, ಇಲ್ಲೊಂದು ತಂಡ ಒಂದು ಸೂಕ್ಷ್ಮ ವಿಚಾರವನ್ನು ಇಟ್ಟುಕೊಂಡು ಇದರೊಂದಿಗೆ ಒಂದು ಪ್ರೇಮಕಾವ್ಯವನ್ನು ಹೇಳಹೊರಟಿದೆ. ಈ ಹಿಂದೆ ಗೊಂಬೆಗಳ ಲವ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದಂತಹ ಸಂತೋಷ್ ಈಗ ದಾದಾ ಈಸ್ ಬ್ಯಾಕ್ ಎಂಬ ಚಿತ್ರವನ್ನು ಸಿದ್ಧಪಡಿಸಿ ತೆರೆ ಮೇಲೆ ತರುತ್ತಿದ್ದಾರೆ. ಈ ಚಿತ್ರವನ್ನು ಆ್ಯಪಲ್ ಫಿಲಂಸ್ ಮತ್ತು ದಯಾನಂದ್ ಸೌಂಡ್ಸ್ ಲಾಂಛನದಲ್ಲಿ ಅಜಯ್ ರಾಜ್ ಅರಸ್ ಮತ್ತು ಡಾ.ಆರ್.ಶಂಕರ್ ನಿರ್ಮಿಸಿದ್ದಾರೆ.

ಹುಕುಂ ಎನ್ನುವ ಪದ ಈ ಚಿತ್ರದ ಕತೆಗೆ ಪ್ರಮುಖ ಲೀಡ್ ಆಗಿದೆಯಂತೆ. ಪಕ್ಕಾ ಮಾಸ್ ಎಂಟರ್‍ಟೈನ್‍ಮೆಂಟ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರೌಡಿಸಂ ಬಗ್ಗೆ ಈವರೆಗೆ ಬರದ ಅನೇಕ ಸಂಗತಿಗಳು ಅನಾವರಣವಾಗಿವೆಯಂತೆ. ಈ ಹಿಂದೆ ಗೊಂಬೆಗಳ ಲವ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅರುಣ್ ದಾದಾ ಈಸ್ ಬ್ಯಾಕ್ ಚಿತ್ರದಲ್ಲೂ ಹೀರೋ ಆಗಿ ನಟಿಸಿದ್ದಾರೆ.  ಶ್ರಾವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶರತ್ ಲೋಹಿತಾಶ್ವ, ದತ್ತಣ್ಣ, ಸುಧಾರಾಣಿ, ಅಜಯ್‍ರಾಜ್ ಅರಸ್ ಸೇರಿದಂತೆ ಅನೇಕ ನಟರ ತಾರಾಗಣವಿದೆ.

ವಿಶೇಷವೆಂದರೆ, ತಮಿಳಿನ ಖ್ಯಾತ ನಟ ಪಾರ್ಥಿಬನ್ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ.  ಈ ಚಿತ್ರಕ್ಕೆ ಸುಮಧುರವಾದಂತಹ ಸಂಗೀತವನ್ನು ಅನೂಪ್ ಸೀಳಿನ್ ನೀಡಿದ್ದು, ಈಗಾಗಲೇ ಹಾಡುಗಳು ಎಲ್ಲರ ಗಮನ ಸೆಳೆದಿವೆ. ಈ ಚಿತ್ರದಲ್ಲಿ ಪ್ರೀತಿ, ಪ್ರೇಮ, ಸಂಬಂಧ ಹಾಗೂ ರೌಡಿಸಂ ಅಂಶಗಳನ್ನು ಒಳಗೊಂಡಿದೆಯಂತೆ.

ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನ ಕೇಂದ್ರ ಪ್ರದೇಶವಾದ ಮಾರ್ಕೆಟ್‍ನಲ್ಲಿ ಚಿತ್ರೀಕರಿಸಿರುವುದು ಬಹಳ ವಿಶೇಷವಾಗಿದೆ. ಈ ದಾದಾ ಈಸ್ ಬ್ಯಾಕ್ ತಂಡ ಹಲವು ವಿಶೇಷತೆಗಳೊಂದಿಗೆ ತೆರೆ ಮೇಲೆ ಬರುತ್ತಿದ್ದು, ಈ ಚಿತ್ರವನ್ನು ಜಾಕ್‍ಮಂಜು ಹಾಗೂ ಕನಕಪುರ ಶ್ರೀನಿವಾಸ್ ಅವರು ಜಂಟಿಯಾಗಿ
ವಿತರಣೆ ಹಕ್ಕು ಪಡೆದಿದ್ದಾರೆ. ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದೇ ವಾರ ಅದ್ಧೂರಿಯಾಗಿ ಬಿಡುಗಡೆಗೊಳಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin