ಮುಂಗಾರು ಮಳೆ ಬಂತು ಜನರ ಮೊಗದಲ್ಲಿ ಖುಷಿ ತಂತು

ಈ ಸುದ್ದಿಯನ್ನು ಶೇರ್ ಮಾಡಿ

Rain-Karnataka

ಬೆಂಗಳೂರು,ಜೂ.20-ಅಂತು, ಇಂತೂ ರಾಜ್ಯದಲ್ಲಿ ಮಳೆ ಸುರಿದಿದೆ. ಬರದ ಛಾಯೆಯಲ್ಲಿದ್ದ ರೈತರ ಮುಖದಲ್ಲಿ ಹರ್ಷ ಮೂಡಿದೆ. ಕಳೆದೆರಡು ದಿನಗಳಿಂದ ಉತ್ತರಕರ್ನಾಟಕ, ಕೊಡಗು, ಮಲೆನಾಡು ಭಾಗಗಳಲ್ಲಿ ಧಾರಕಾರ ಮಳೆ ಸುರಿದು, ನದಿ, ಹಳ್ಳ, ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗ ತೊಡಗಿವೆ.   ತುಂಗಾ, ಭದ್ರ, ಕಾವೇರಿ, ಕೃಷ್ಣ ನದಿಗಳು ತುಂಬಿ ಹರಿಯುತ್ತಿವೆ. ಕೊಡುಗಿನ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಮಳೆಯ ಆರ್ಭಟಕ್ಕೆ ಕೇರಳ, ಕೊಡಗು ನಡುವಿನ ಹೆದ್ದಾರಿಯ ಪೆರಂಬಾಡುವಿನಲ್ಲಿ ಭೂ ಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ದಕ್ಷಿಣಕನ್ನಡ-ಸುಬ್ರಹಣ್ಯ ದೇವಸ್ಥಾನದ ಹೆದ್ದಾರಿ ಬಂದ್ ಆಗಿದೆ.

ವರುಣನ ಆರ್ಭಟಕ್ಕೆ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಹಾಗೂ ಕೋಲಾರದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.   ಕಳೆದ ಒಂದೂವರೆ ತಿಂಗಳಿನಿಂದ ಕ್ಷೀಣಿಸಿದ್ದ ನೈರುತ್ಯ ಮುಂಗಾರು ಪ್ರಬಲವಾಗಿದ್ದು , ಮಳೆ ನಿರಂತರ ಸುರಿಯುತ್ತಿರುವುದರಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ, ಮುಂಗಾರು ಕೈ ಕೊಡ್ತು ಅನ್ನೋ ಹೊತ್ತಿನಲ್ಲಿ ರಾಜ್ಯದಲ್ಲಿ ವರ್ಷಧಾರಿ ಹರಿದಿದೆ. ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ನಿಂತಿಲ್ಲ. ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಕಳಸಾ ಸಮೀಪದ ಹೆಬ್ಬಾರ ಸೇತುವೆ ಮುಳುಗಡೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 24 ಗಂಟೆ ಅವಧಿಯಲ್ಲಿ ಭಾರೀ ಮಳೆ ಸುರಿದಿದೆ. ತೀರ್ಥಹಳ್ಳಿ, ಸಾಗರದಲ್ಲಿ 83 ಮಿ.ಮೀ ಮಳೆಯಾಗಿದೆ. ಹೊಸನಗರದಲ್ಲಿ 110 ಮಿ.ಮೀ ಮಳೆಯಾಗಿದೆ. ಹಾಸನದ ಶಿರಾಡಿಘಾಟ್‍ನ ಕೆಂಪುಹೊಳೆ ಬಳಿ ರಾತ್ರಿ ಗುಡ್ಡ ಕುಸಿದು ಕೆಲವರು ಗಾಯಗೊಂಡಿದ್ದಾರೆ. ಧರ್ಮಸ್ಥಳ-ಮಂಗಳೂರು ರಸ್ತೆ ಎರಡು ಗಂಟೆಗಳ ಕಾಲ ಬಂದ್ ಆಗಿತ್ತು.  ಕಳಸಾ-ಹೊರನಾಡು ರಸ್ತೆ ಸಂಪರ್ಕ ಬಂದ್ ಆಗಿದೆ. ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲ್ಲೂಕುಗಳಲ್ಲಿ ಮಳಯ ಆರ್ಭಟಕ್ಕೆ ಭಾರೀ ಗಾತ್ರದ ಮರಗಳು ಧರೆಗುರುಳಿದ್ದು ,ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ದೊಡ್ಡ ಹೊಲಗಮಾದಿ ಗ್ರಾಮದಲ್ಲಿ ನಿನ್ನೆ ಭಾರೀ ಗಾಳಿಗೆ ಸಿಲುಕಿ ಪದ್ಮನಾಭ ಎಂಬ ರೈತ ಮೃತಪಟ್ಟರೆ, ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ ಮನೆ ಕುಸಿದು ಮಹಾಂತೇಶ್ ಎಂಬ ಯುವಕ ಸಾವನ್ನಪ್ಪಿದ್ದಾರೆ.  ಚಿಕ್ಕೋಡಿ ತಾಲ್ಲೂಕಿನ ಎರಡು ಸೇತುವೆಗಳು ಕೃಷ್ಣಾನದಿ ನೀರಿನಲ್ಲಿ ಮುಳುಗಡೆಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಜೊಯ್ಡಾದಲ್ಲಿ ಕಳೆದ 48 ಗಂಟೆಯಲ್ಲಿ ಭಾರೀ ಮಳೆ ಸುರಿದಿದ್ದು , ಛಾಂದೆವಾಡೆ ಸೇತುವೆ ಮುಳುಗಿದ್ದು , ಶಾಲೆ ಮುಗಿಸಿ ಬರುತ್ತಿದ್ದ 50ಕ್ಕೂ ಹೆಚ್ಚು ಮಕ್ಕಳು ನದಿ ದಡದಲ್ಲಿ ಸಿಲುಕಿದ್ದರು. ರಬ್ಬರ್ ಬೋಟ್ ಬಳಸಿ ಮಕ್ಕಳನ್ನು ರಕ್ಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಕಣಕುಂಬಿ-ಕಳಸಾ ರಸ್ತೆ ಬಂದ್ ಆಗಿದೆ. ಅಥಣಿ, ರಾಯಭಾಗ, ಚಿಕ್ಕೋಡಿ ತಾಲ್ಲೂಕಿನ ಕೆಳಹಂತದ ಸೇತುವೆಗಳು ಮುಳುಗಡೆಯ ಭೀತಿಯಲ್ಲಿವೆ. ಚಿಕ್ಕೋಡಿ ತಾಲ್ಲೂಕಿನ ಎಡೂರು-ಕಲ್ಲೋಳ ಸೇತುವೆಗಳೂ ಸಹ ಜಲಾವೃತಗೊಂಡಿವೆ.  ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಭಾಗಮಂಡಲ, ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದ್ದು , ಮಡಿಕೇರಿ-ತಲಕಾವೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಲಕಾವೇರಿಗೆ ಪ್ರವೇಶ ನಿಷೇಧಿಸಲಾಗಿದೆ.  ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಒಳಹರಿವು ಹೆಚ್ಚಳ:

ಕಾವೇರಿ ಜಲಾಶಯಗಳಾದ ಕೆಆರ್‍ಎಸ್, ಹಾರಂಗಿ,ಕಬಿನಿ, ಹೇಮಾವತಿ ಡ್ಯಾಮ್‍ಗಳ ಒಳಹರಿವು ಪ್ರಮಾಣ ಹೆಚ್ಚಾಗಿದೆ. ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಭದ್ರ ಡ್ಯಾಮ್‍ಗೂ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ.   ದಾವಣಗೆರೆ, ಉಡುಪಿ, ಚಿತ್ರದುರ್ಗ, ಮೈಸೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇಂದು ಕೂಡ ಮೋಡ ಕವಿದ ವಾತಾವರಣವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin