ರೈತರ ಆತ್ಮಹತ್ಯೆ : ಸಂಸತ್’ನಲ್ಲಿ ಇಂದೂ ಮುಂದುವರೆದ ವಿಪಕ್ಷಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Parliamne-t-01

ನವದೆಹಲಿ, ಜು.20-ದೇಶದ ವಿವಿಧ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸಂಸತ್‍ನ ಉಭಯ ಸದನಗಳಲ್ಲೂ ಪ್ರತಿಪಕ್ಷಗಳು ಭಾರೀ ಪ್ರತಿಭಟನೆ ನಡೆಸಿ ಗದ್ದಲ-ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಯಿತು.   ಲೋಕಸಭೆಯಲ್ಲಿ ಮೂರನೆ ದಿನದ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಎಂದಿನಂತೆ ರೈತರ ಸಮಸ್ಯೆಗಳ ಕುರಿತು ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಿನ್ನೆಯಿಂದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದೂ ಸಹ ಸರ್ಕಾರದ ಧೋರಣೆಯನ್ನು ಟೀಕಿಸಿದರು.  ಈ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಸಮಾಧಾನಪಡಿಸಲು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಯತ್ನಿಸಿದರು.  ಸುಗಮ ಕಲಾಪಕ್ಕಾಗಿ ಪ್ರತಿಪಕ್ಷಗಳ ಮನವೊಲಿಸಲು ಲೋಕಸಭೆ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಪದೇ ಪದೇ ಮಾಡಿದ ಮನವಿಗೆ ಧರಣಿ ನಿರತ ಸದಸ್ಯರು ಸ್ಪಂದಿಸದ ಕಾರಣ ಸದನವನ್ನು ಎರಡು ಬಾರಿ ಮುಂದೂಡಿದರು. ಮತ್ತೆ 12 ಗಂಟೆ ನಂತರ ಸದನ ಸಮಾವೇಶಗೊಂಡಾಗ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರೆದು, ಗದ್ದಲ, ಕೋಲಾಹಲ ವಾತಾವರಣ ಸೃಷ್ಟಿಯಾಗಿ ಸ್ಪೀಕರ್ ಸದನವನ್ನು ನಾಳೆಗೆ ಮುಂದೂಡಿದರು.

ರಾಜ್ಯಸಭೆಯಲ್ಲೂ ಮುಂದುವರೆದ ಪ್ರತಿಭಟನೆ:

ದೇಶಾದ್ಯಂತ ರೈತರು ಎದುರಿಸುತ್ತಿರುವ ಬವಣೆ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿತು. ಕಾಂಗ್ರೆಸ್, ಸಮಾಜವಾದಿ ಪಕ್ಷ , ಸಿಪಿಎಂ, ಜೆಡಿಯು ಸದಸ್ಯರು ಮೊದಲಾದವರು ಈ ವಿಷಯ ಪ್ರಸ್ತಾಪಿಸಿ ಕೇಂದ್ರ ಸರ್ಕಾರ ಅನ್ನದಾತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin