14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Kovind--01

ನವದೆಹಲಿ, ಜು.20-ನಿರೀಕ್ಷೆಯಂತೆ ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ರಾಮನಾಥ್ ಕೋವಿಂದ್ ದೇಶದ 14ನೆ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ರಾಮನಾಥ್ ಕೋವಿಂದ್ ಅವರಿಗೆ 7,02,044 ಮತಗಳು ಬಂದರೆ, ಯುಪಿಎ ಬೆಂಬಲಿತ ಅಭ್ಯರ್ಥಿ ಮೀರಾಕುಮಾರ್ ಅವರಿಗೆ 3,67,300 ಮತಗಳ ಚಲಾವಣೆಯಾಗಿದ್ದವು.   ಸುಮಾರು 3,34,730 ಮತಗಳ ಅಂತರದಿಂದ ಮೀರಾಕುಮಾರ್ ಅವರನ್ನು ಪರಾಭವಗೊಳಿಸಿದ ರಾಮನಾಥ್‍ಕೋವಿಂದ್ ದೇಶದ 14ನೆ ರಾಷ್ಟ್ರಪತಿಯಾಗಿ ಗೆಲುವಿನ ನಗೆ ಬೀರಿದ್ದಾರೆ. ಗುರುವಾರ 4.30ಕ್ಕೆ ಸುಮಾರು 8 ಸುತ್ತಿನ ಮತಗಳ ಮತ ಎಣಿಕೆ ಮುಗಿಯುತ್ತಿದ್ದಂತೆ ಚುನಾವಣಾಧಿಕಾರಿ ಹಾಗೂ ಲೋಕಸಭೆಯ ಕಾರ್ಯದರ್ಶಿ ಅನುಪಮ್ ಮಿಶ್ರಾ ಅವರು ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಿದರು.

ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನು ಹೊರತುಪಡಿಸಿದರೆ ದಲಿತ ಸಮುದಾಯಕ್ಕೆ ಸೇರಿದವರೊಬ್ಬರು ದೇಶದ ಎರಡನೆ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಹೆಗ್ಗಳಿಕೆಗೆ ರಾಮನಾಥ್‍ಕೋವಿಂದ್ ಪಾತ್ರರಾಗಿದ್ದಾರೆ.

ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರಾವಧಿ ಸೋಮವಾರ ಕೊನೆಗೊಳ್ಳಲಿದ್ದು, ನೂತನ ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್ ಅವರು ಇದೇ 25ರಂದು ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‍ನಲ್ಲಿ 14ನೆ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್‍ಸಿಂಗ್ ಅವರು ನೂತನ ರಾಷ್ಟ್ರಪತಿಯವರಿಗೆ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ಫಲಿಸಿದ ಮೋದಿ ತಂತ್ರ:

ಅಚ್ಚರಿಯ ಅಭ್ಯರ್ಥಿಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಎಲ್ಲರ ನಿರೀಕ್ಷೆಗಳನ್ನೂ ತಲೆಕೆಳಗೆ ಮಾಡಿದ್ದ ಪ್ರಧಾನಿ ನರೇಂದ್ರಮೋದಿಯವರ ಕಾರ್ಯತಂತ್ರ ಕೊನೆಗೂ ಫಲಿಸಿದೆ.  2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನಾಗಾಲೋಟವನ್ನು ಕಟ್ಟಿಹಾಕಲು ಮಹಾಘಟ್‍ಬಂಧನ್ ಗೆಲುವಿನ (ಮಹಾಮೈತ್ರಿ) ರಚಿಸಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೂ ಈ ಫಲಿತಾಂಶ ಭಾರೀ ಹಿನ್ನಡೆಯುಂಟುಮಾಡಿದೆ.

ಶತಾಯ-ಗತಾಯ ಮೋದಿ ತಂತ್ರವನ್ನು ಬುಡಮೇಲು ಮಾಡಲು ಎಲ್ಲ ರಾಜಕೀಯ ತಂತ್ರಗಳನ್ನು ಹೆಣೆದಿದ್ದ ಯುಪಿಎ ಅಭ್ಯರ್ಥಿ ಮೀರಾಕುಮಾರ್ ಪರಾಭವಗೊಳ್ಳುವ ಮೂಲಕ ಲೆಕ್ಕಾಚಾರ ಕೈತಪ್ಪಿದೆ. ಮೇಲ್ನೋಟಕ್ಕೆ ಈ ಫಲಿತಾಂಶ ಯಾವುದೇ ಪರಿಣಾಮ ಬೀರದಿದ್ದರೂ ನರೇಂದ್ರ ಮೋದಿ, ಅಮಿತ್ ಷಾ ಜೋಡಿಯ ಕಾರ್ಯತಂತ್ರ ಫಲ ಕೊಟ್ಟಿರುವುದು ಸ್ಪಷ್ಟವಾಗಿದೆ.

DFLE8XtVoAEx7KV

ಆರಂಭದಿಂದಲೇ ಮುನ್ನಡೆ:

ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮತಗಳ ಎಣಿಕೆ ಪ್ರಾರಂಭವಾಯಿತು. ಲೋಕಸಭೆ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಅನುಪಮ್ ಮಿಶ್ರ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ತೆರೆಯಲಾಯಿತು. ಮೊದಲಿಗೆ ಅಸಿಂಧು ಮತಗಳನ್ನು ಬೇರ್ಪಡಿಸಿ ನಂತರ ಮತಗಳ ಎಣಿಕೆ ಪ್ರಾರಂಭ ಮಾಡಲಾಯಿತು. ಸ್ಟ್ರಾಂಗ್‍ರೂಮ್‍ನಲ್ಲಿ ಒಟ್ಟು 8 ಹಂತಗಳ ಮತ ಎಣಿಕೆ ನಡೆಯಿತು. ಆರಂಭಿಕ ಸುತ್ತಿನಿಂದಲೇ ರಾಮನಾಥ್ ಕೋವಿಂದ್ ಮುನ್ನಡೆ ಸಾಧಿಸಿ ಅಂತಿಮವಾಗಿ 8ನೆ ಸುತ್ತಿನಲ್ಲಿ ಗೆಲುವಿನ ನಗೆ ಬೀರಿದರು. ಈ ಬಾರಿ ದಾಖಲೆಯ ಶೇ.99ರಷ್ಟು ಮತದಾನ ನಡೆದಿತ್ತು. 771 ಸಂಸದರಲ್ಲಿ 768 ಸಂಸದರು ಹಾಗೂ 4109 ಶಾಸಕರಲ್ಲಿ 4083 ಶಾಸಕರು ಮತ ಚಲಾಯಿಸಿದ್ದರು.

ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ರಾಮನಾಥ್ ಕೋವಿಂದ್‍ಗೆ ಶೇ.63ರಷ್ಟು ಮತಗಳು ಬಂದರೆ ಮೀರಾಕುಮಾರ್‍ಗೆ ಶೇ.37ರಷ್ಟು ಮತ ಚಲಾವಣೆಯಾಗಿದ್ದವು.  ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 10,98,881 ಮತದಾರರು ಇದ್ದರು. ಇದರಲ್ಲಿ ರಾಮನಾಥ್ ಕೋವಿಂದ್ ಪರ 5,37,614 ಮತಗಳು ಬಂದಿದ್ದವು.  ಎನ್‍ಡಿಎಗೆ ಮೈತ್ರಿ ಪಕ್ಷಗಳಾದ ಶಿವಸೇನೆ, ಟಿಡಿಪಿ, ಎಸ್‍ಎಡಿ ಜತೆಗೆ ಜೆಡಿಯು, ವೈಎಸ್‍ಆರ್, ಎಐಎಡಿಎಂಕೆ, ಟಿಆರ್‍ಎಸ್, ಬಿಜೆಡಿ ಬೆಂಬಲ ನೀಡಿದ್ದವು. ಹೀಗಾಗಿ ಅವರಿಗೆ ಗೆಲುವು ಸಹಜವಾಗಿ ದಕ್ಕಿತು.

DFLDFy2UwAA7bqC

ಇನ್ನು ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಮೀರಾಕುಮಾರ್‍ಗೆ ಕಾಂಗ್ರೆಸ್, ಡಿಎಂಕೆ, ಆರ್‍ಜೆಡಿ, ಟಿಎಂಸಿ, ಎನ್‍ಸಿಪಿ, ಎಸ್‍ಪಿ, ಬಿಎಸ್‍ಪಿ ಸೇರಿದಂತೆ ಒಟ್ಟು 17 ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿದ್ದವು. ರಾಷ್ಟ್ರಪತಿ ಚುನಾವಣೆಯಲ್ಲಿ ಶಾಸಕರ ಒಟ್ಟು ಮತ ಮೌಲ್ಯ 5,49,878 ಆದರೆ ಸಂಸದರ ಮತಮೌಲ್ಯ 5,49,408 ಆಗಿದೆ.   ಆಯಾ ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರದಲ್ಲಿರುವ ಜನಸಂಖ್ಯೆಗನುಗುಣವಾಗಿ ಮತಮೌಲ್ಯವನ್ನು ನಿಗದಿಪಡಿಸಲಾಗುತ್ತದೆ.

ಇದೇ 17ರಂದು ನಡೆದಿದ್ದ ಚುನಾವಣೆಯಲ್ಲಿ ಅರುಣಾಚಲ ಪ್ರದೇಶ, ಛತ್ತೀಸ್‍ಗಢ, ಗುಜರಾತ್, ಹರಿಯಾಣ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ನಾಗಾಲ್ಯಾಂಡ್, ಉತ್ತರಾಖಂಡ, ಅಸ್ಸೋಂ ಹಾಗೂ ಪುದುಚೇರಿಯಲ್ಲಿ ಶೇ.100ರಷ್ಟು ಮತದಾನವಾಗಿತ್ತು.  ಆಂಧ್ರ ಪ್ರದೇಶ, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಶೇ.99ರಷ್ಟು ಮತದಾನ ನಡೆದಿತ್ತು. ಮುಂದಿನ ತಿಂಗಳ ಆ.5ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್‍ಡಿಎನಿಂದ ಕೇಂದ್ರದ ಮಾಜಿ ಸಚಿವ ಎಂ.ವೆಂಕಯ್ಯನಾಯ್ಡು ಹಾಗೂ ಯುಪಿಎಯಿಂದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ ಕಣಕ್ಕಿಳಿದಿದ್ದಾರೆ. ಅಂದು ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin