9.7 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ಕಂಠೀರವ ಕ್ರೀಡಾಂಗಣ ಉದ್ಘಾಟನೆ

Jeorge--01

ಬೆಂಗಳೂರು, ಜು.20- ಇಪ್ಪತ್ತೆರಡು ವರ್ಷ ಗಳ ಹಿಂದೆ ನಿರ್ಮಾಣಗೊಂಡಿದ್ದ ಕಂಠೀರವ ಕ್ರೀಡಾಂಗಣವನ್ನು 9.7 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ ನವೀಕೃತಗೊಳಿಸಿದ್ದು, ಇಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವೀಕೃತ ಕ್ರೀಡಾಂಗಣವನ್ನು ಉದ್ಘಾಟಿಸಿದರು.
1995ರಲ್ಲಿ ನಿರ್ಮಾಣಗೊಂಡಿದ್ದ ಕ್ರೀಡಾಂಗಣದಲ್ಲಿ ಉಂಟಾಗಿದ್ದ ಅವ್ಯವಸ್ಥೆಯನ್ನುಸರಿಪಡಿಸಲು ಸಮಗ್ರವಾಗಿ ಬದಲಾವಣೆ ಮಾಡಿ ನವೀಕೃತಗೊಳಿಸಲಾಗಿದೆ. ಶೌಚಾಲಯ ದುರಸ್ತಿ, ಮರದ ನೆಲಹಾಸು ಇನ್ನಿತರ ವ್ಯವಸ್ಥೆಯನ್ನು ಅಳವಡಿಸಲಾಗಿದೆ.   ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನವೀಕೃತಗೊಳಿಸಲಾಗಿರುವ ಈ ಕ್ರೀಡಾಂಗಣವನ್ನು ಮುಖ್ಯಮಂತ್ರಿಗಳು ಬ್ಯಾಸ್ಕೆಟ್‍ಬಾಲ್ ಕೋರ್ಟ್‍ನಲ್ಲಿ ಮೂರು ಬಾರಿ ಚೆಂಡನ್ನು ಎಸೆಯುವ ಮೂಲಕ ಚಾಲನೆ ನೀಡಿದರು.

ಕ್ರೀಡಾಂಗಣದ ಹೊರಾಂಗಣದಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡ ಮುಖ್ಯಮಂತ್ರಿಗಳು ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ತಮ್ಮ ಇಲಾಖೆಯಿಂದ 5 ಕೋಟಿ ರೂ., ಬಿಬಿಎಂಪಿಯಿಂದ 3.5 ಕೋಟಿ ರೂ., ಬಿಡಿಎಯಿಂದ 1.2 ಕೋಟಿ ರೂ. ಸೇರಿದಂತೆ 9.7 ಕೋಟಿ ರೂ. ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣವನ್ನು ನವೀಕೃತಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಲಾಗಿದ್ದು, ಕ್ರೀಡಾಪಟುಗಳು, ಕೋಚ್‍ಗಳು, ಮಹಿಳಾ ಕ್ರೀಡಾಪಟುಗಳು, ಮಾಧ್ಯಮದವರು ಹಾಗೂ ಗಣ್ಯರಿಗೆ ವ್ಯವಸ್ಥಿತ ರೀತಿಯಲ್ಲಿ ಆಸನ ಹಾಗೂ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ಮರದ ನೆಲಹಾಸು ಅಳವಡಿಸಲಾಗಿದೆ ಎಂದು ವಿವರಿಸಿದರು.

ಇದೇ ತಿಂಗಳ 23ರಿಂದ ಆ.16ರ ವರೆಗೆ ಅಂತಾರಾಷ್ಟ್ರೀಯ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಈಗಾಗಲೇ ಒಳಾಂಗಣ ಕ್ರೀಡಾಂ ಗಣ ಅಭಿವೃದ್ಧಿಗೊಳಿಸಲಾಗಿದ್ದು, ಹೊರಾಂಗಣ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ನಡೆಯಲಿದೆ. ಸಿಂಥೆಟಿಕ್ ಟ್ರ್ಯಾಕ್ ಹಳೆಯದಾಗಿದೆ. ಆದರೆ, ಅದನ್ನು ಬದಲಾಯಿಸಲು 6 ಕೋಟಿ ವೆಚ್ಚವಾಗುತ್ತದೆ. ಇದಕ್ಕೆ ಅಗತ್ಯವಾದ ಹಣ ಕ್ರೀಡಾಂಗಣ ಸಮಿತಿಯಲ್ಲೇ ಲಭ್ಯವಿದೆ ಎಂದರು.

ನಾನು ಸಚಿವನಾಗುವ ಮೊದಲು ಕ್ರೀಡಾಂಗಣದ ಆದಾಯ 1 ಕೋಟಿ ಇದ್ದರೆ, ಖರ್ಚು 2 ಕೋಟಿಯಾಗುತ್ತಿತ್ತು. ನಾನು ಜವಾಬ್ದಾರಿ ವಹಿಸಿಕೊಂಡ ಮೇಲೆ ಖರ್ಚು ಕಡಿಮೆಯಾಗಿ ಆದಾಯದ ಪ್ರಮಾಣ ಹೆಚ್ಚಳವಾಗಿದೆ. ಕೇವಲ ಆದಾಯ ಗಳಿಸಬೇಕೆಂಬ ಉದ್ದೇಶವಿಲ್ಲ. ಆದರೆ, ಕ್ರೀಡಾಂಗಣದ ಮೂಲ ಸೌಕರ್ಯಕ್ಕಾಗಿ ಖರ್ಚು ಮಾಡಲು ಆರ್ಥಿಕ ಸ್ವಾವಲಂಬನೆ ಅಗತ್ಯವಿದೆ ಎಂದು ಹೇಳಿದರು. ಹಣಕಾಸಿನ ಸದೃಢತೆ ಇದ್ದರೆ ಭದ್ರತೆ ಹೆಚ್ಚಿಸಬಹುದು. ಅದರೊಂದಿಗೆ ಇನ್ನಷ್ಟು ಸೌಲಭ್ಯಗಳನ್ನು ಹೆಚ್ಚಿಸಬಹುದು ಎಂದ ಅವರು, ಈ ಮೊದಲು ಅಳವಡಿಸಲಾಗಿದ್ದ 20 ಸಿಸಿಟಿವಿಗಳಲ್ಲಿ 10ನ್ನು ಕಳ್ಳರು ಕದ್ದೊಯ್ದಿದ್ದಾರೆ. ಕ್ರೀಡಾಂಗಣಕ್ಕೆ ಭದ್ರತೆ ನೀಡುವ ಗುತ್ತಿಗೆ ಪಡೆದಿರುವವರು ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕ್ರೀಡಾಂಗಣದ ಅಲಭ್ಯತೆ- ಪ್ರೋ-ಕಬಡ್ಡಿ ಸ್ಥಳಾಂತರ:

ಮುಂದಿನ ತಿಂಗಳಿನಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಬ್ಯಾಸ್ಕೆಟ್ ಥ್ರೋಬಾಲ್ ಪಂದ್ಯಾವಳಿಗಳು ನಡೆಯಲಿವೆ. ಹಾಗಾಗಿ ಪ್ರೋ-ಕಬಡ್ಡಿ ಪಂದ್ಯಾವಳಿಗೆ ಕ್ರೀಡಾಂಗಣ ಬಿಟ್ಟುಕೊಡಲು ಸಾಧ್ಯವಾಗಿಲ್ಲ. ಕೋರಮಂಗಲದ ಹೊರಾಂಗಣ ಕ್ರೀಡಾಂಗಣ ಮತ್ತು ತ್ರಿಪುರವಾಸಿನಿಯ ಹೊರಾಂಗಣ ಕ್ರೀಡಾಂಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಪ್ರೋ-ಕಬಡ್ಡಿ ಆಡಳಿತ ಮಂಡಳಿ ಕಂಠೀರವ ಕ್ರೀಡಾಂಗಣದ ಒಳಾಂಗಣವೇ ಬೇಕೆಂದು ಪಟ್ಟು ಹಿಡಿದಿತ್ತು. ಆದರೆ, ದಿನಾಂಕ ಹೊಂದಾಣಿಕೆಯಾಗದ ಕಾರಣ ಸ್ಥಳಾವಕಾಶ ಲಭ್ಯವಾಗಲಿಲ್ಲ. ಹೀಗಾಗಿ ಪ್ರೋ-ಕಬಡ್ಡಿ ನಾಗಪುರಕ್ಕೆ ಸ್ಥಳಾಂತರಗೊಂಡಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕ್ರೀಡಾಂಗಣ ಒದಗಿಸುವ ಭರವಸೆ ನೀಡಿದ್ದೇವೆ.

ಮೇಲಾಗಿ 1.2 ಕೋಟಿ ಖರ್ಚು ಮಾಡಿ ಒಳಾಂಗಣ ಕ್ರೀಡಾಂಗಣದ ನೆಲ ಹಾಸನ್ನು ಮರದಿಂದ ಮಾಡಿಸಲಾಗಿದೆ. ಪ್ರೋ-ಕಬಡ್ಡಿ ಪಂದ್ಯಾವಳಿ ವೇಳೆ ಕ್ವಿಂಟಾಲ್‍ಗಟ್ಟಲೆ ತೂಕದ ಕ್ಯಾಮೆರಾ ಹಾಗೂ ಕ್ರೇನ್ ಬಳಸುವುದರಿಂದ ನೆಲಹಾಸಿಗೆ ತೊಂದರೆಯಾಗುತ್ತದೆ. ನಮ್ಮ ಮೊದಲ ಆದ್ಯತೆ ನೆಲಹಾಸು ರಕ್ಷಣೆಯೂ ಆಗಿದೆ ಎಂದು ಮಾಹಿತಿ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin