ಪರಸ್ಪರ ಕಾಲೆಳೆಯುವುದನ್ನು ಬಿಟ್ಟು ಚುನಾವಣೆಗೆ ಸಜ್ಜಾಗಿ : ವೇಣುಗೋಪಾಲ್

Siddaramaiah--KPCC

ಬೆಂಗಳೂರು, ಜು.21- ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನಮ್ಮ ಧ್ಯೇಯ ಮತ್ತು ಗುರಿ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಕಾರ್ಯೋನ್ಮುಖವಾಗಿರಬೇಕು. ಪರಸ್ಪರ ಕಾಲೆಳೆಯುವುದನ್ನು ಬಿಟ್ಟು ಚುನಾವಣೆಗೆ ಸಜ್ಜಾಗಬೇಕೆಂದು ಎಐಸಿಸಿ ಪ್ರಧಾನಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಂತರಿಕ ಭಿನ್ನಮತ, ಸಂಘರ್ಷವನ್ನು ಸರಿಪಡಿಸುವ ಕೆಲಸವನ್ನು ಪದಾಧಿಕಾರಿಗಳು ಮಾಡಬೇಕು. ಈ ಮೂಲಕ ಹೆಚ್ಚಿನ ಸ್ಥಾನಗಳು ಗೆಲ್ಲುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಪದಾಧಿಕಾರಿ ಹುದ್ದೆ ಅಧಿಕಾರ ಅಲ್ಲ. ಪಕ್ಷ ಕಟ್ಟಬೇಕು. ಪದಾಧಿಕಾರಿಗಳು ಕಾರ್ಯಕರ್ತರಂತೆ ಎಲ್ಲರೊಂದಿಗೆ ಬೆರೆತು ಕೆಲಸ ಮಾಡಬೇಕೆಂದು ಅವರು ಸೂಚಿಸಿದರು. ಮುಂಬರುವ ಚುನಾವಣೆಗೆ ಪ್ರತಿ ಜಿಲ್ಲೆಗೊಂದರಂತೆ ಪ್ರಧಾನಕಾರ್ಯದರ್ಶಿ, ಪ್ರತಿ ಎರಡು ಜಿಲ್ಲೆಗೆ ಒಬ್ಬರಂತೆ ಉಪಾಧ್ಯಕ್ಷರನ್ನು ನೇಮಕ ಮಾಡಿ ಜವಾಬ್ದಾರಿ ವಹಿಸಲಾಗುವುದು. ಕಾರ್ಯದರ್ಶಿಗಳಿಗೂ ಜವಾಬ್ದಾರಿ ನೀಡಲಾಗುವುದು. ಸರ್ಕಾರಿ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪಿವೆ. ಚುನಾವಣೆ ಲಾಭಗಳೇನು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಪದಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಬೂತ್‍ಮಟ್ಟದ ಕಮಿಟಿ, ಕೆಪಿಸಿಸಿ ಸದಸ್ಯತ್ವ ಸಂಬಂಧ ಪೂರ್ಣ ಪ್ರಮಾಣದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಆಂತರಿಕ ಸಂರ್ಷವಿಲ್ಲ:

ನಮ್ಮಲ್ಲಿ ಆಂತರಿಕ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಂತಿದೆ. ನಮ್ಮಲ್ಲಿದ್ದ ಭಿನ್ನಾಭಿಪ್ರಾಯವನ್ನು ನಾವು ಸರಿ ಪಡಿಸಿಕೊಂಡಿದ್ದೇವೆ. ಮುಖಂಡರು ಪರಸ್ಪರ ಕಾಲೆಳೆಯುವ ಪ್ರವೃತ್ತಿ ಕೈ ಬಿಟ್ಟು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ. ಯಾರಿಗೆ ಸಿಗುವುದಿಲ್ಲ ಎಂಬುದು ಮುಖ್ಯವಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯ. ಶಾಸಕರು ಚುನಾವಣೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಶಾಸಕರನ್ನು ಪದಾಧಿಕಾರಿಗಳನ್ನಾಗಿ ನೇಮಿಸಿಲ್ಲ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin