ಬಯಲಾಯ್ತು ಪಾಪಿ ಪಾಕ್ ನ ಮತ್ತೊಂದು ಕುತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Abdul-Basit

ನವದೆಹಲಿ,ಜು.21-ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ನಿರಂತರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಮತ್ತೊಂದು ಆಘಾತಕಾರಿ ಕುತಂತ್ರ ಬಯಲಾಗಿದೆ.   ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಮ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಭುಗಿಲೆದ್ದಿರುವಾಗಲೇ ಪಾಕಿಸ್ತಾನ ಮೂಗು ತೂರಿಸಿ ಮತ್ತೊಂದು ಬಿಕ್ಕಟ್ಟಿಗೆ ಕಾರಣವಾಗಿದೆ.

ಡೊಕ್ಲಾಮ್‍ನಲ್ಲಿ ಭಾರತ-ಚೀನಾ-ಭೂತಾನ್ ನಡುವೆ ಟ್ರೈ-ಜಂಕ್ಷನ್ ವಿಷಯದಲ್ಲಿ ಉಲ್ಬಣಗೊಂಡಿರುವ ವಿವಾದವನ್ನು ಇನ್ನಷ್ಟು ಕೆರಳಿಸುವ ಉದ್ದೇಶದಿಂದ ಪಾಕಿಸ್ತಾನದ ಹೈಕಮೀಷನರ್ ಅಬ್ದುಲ್ ಬಾಸಿತ್ ಹಸ್ತಕ್ಷೇಪ ಮಾಡಿದ್ದಾರೆ. ಭಾರತದಲ್ಲಿರುವ ಚೀನಾದ ರಾಯಭಾರಿ ಲುವು ಝಾವೊಹುಯಿ ಅವರನ್ನು ಭೇಟಿ ಮಾಡಿರುವುದು ಭಾರತವನ್ನು ಮತ್ತಷ್ಟು ಕೆರಳಿಸಿದೆ. ಲುವು ಅವರನ್ನು ಭೇಟಿ ಮಾಡಿದ ಬಾಸಿತ್,ಡೋಕ್ಲಾಮ್ ಬಿಕ್ಕಟ್ಟಿನ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿ ಚೀನಾ ಪರ ಪಾಕಿಸ್ತಾನದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೂ ಅಲ್ಲದೆ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಬಾಸಿತ್, ಭೂತಾನ್ ರಾಯಭಾರಿಯನ್ನು ಸಹ ಸದ್ಯದಲ್ಲೇ ಭೇಟಿ ಮಾಡಿ ಭಾರತದ ವಿರುದ್ದ ಕತ್ತಿ ಮಸೆಯಲು ಪ್ರಲೋಭನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.  ನಿನ್ನೆ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ ಬಾಸಿತ್, ಭೂತಾನ್ ರಾಜತಾಂತ್ರಿಕರ ಜೊತೆ ಗಡಿ ಬಿಕ್ಕಟ್ಟು ವಿಷಯದಲ್ಲಿ ಚೀನಾ ಕೂಡ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ. ಚೀನಾ ಮತ್ತು ಭೂತಾನ್‍ನನ್ನು ಭಾರತದ ವಿರುದ್ದ ಎತ್ತಿಕಟ್ಟುವ ಸಮಯ ಸಾಧಕತನದ ದುಷ್ಟ ಕುತಂತ್ರವನ್ನು ಪಾಕಿಸ್ತಾನ ಅನುಸರಿಸುತ್ತಿದೆ ಎಂದು ಭಾರತದ ಉನ್ನತ ರಾಜ ತಾಂತ್ರಿಕ ಮೂಲಗಳು ತಿಳಿಸಿವೆ.

ಭಾರತದಲ್ಲಿ ಇದ್ದುಕೊಂಡೇ ಪಾಕಿಸ್ತಾನದ ರಾಯಭಾರಿ ಚೀನಾ ಮತ್ತು ಭೂತಾನ್ ರಾಯಭಾರಿಗಳ ಜೊತೆ ಸಂಪರ್ಕ ಸಾಧಿಸಿ ಡೊಕ್ಲಾಮ್ ಬಿಕ್ಕಟ್ಟನ್ನು ಮತ್ತಷ್ಟು ಕೆದಕಲು ಉರಿಯುವ ಬೆಂಕಿಗೆ ತುಪ್ಪ ಹಾಕುವ ಕೆಲಸಕ್ಕೆ ಕೈ ಹಾಕಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

Facebook Comments

Sri Raghav

Admin