ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆ ಇಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--KP

ಬೆಂಗಳೂರು, ಜು.21-ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ವಿಷಯದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿವೆ ಎಂದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದಿದೆ. ಚುನಾವಣೆ ನಿಗದಿಯಂತೆ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ನಡೆಯಲಿದೆ. ಅವಧಿಪೂರ್ವ ಚುನಾವಣೆ ಇಲ್ಲವೇ ಇಲ್ಲ. ಪ್ರತಿಪಕ್ಷಗಳ ಗೊಂದಲದ ಹೇಳಿಕೆಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ನೂತನ ಪದಾಧಿಕಾರಿಗಳಿಗೆ ಸ್ಪಷ್ಟಪಡಿಸಿದರು.
ಹೊಸದಾಗಿ ನೇಮಕಗೊಂಡಿರುವ ಪದಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ ಹೈಕಮಾಂಡ್‍ಗೆ ಅಭಿನಂದನೆ ಸಲ್ಲಿಸಿದರು.  ಇದು ಚುನಾವಣಾ ವರ್ಷ. ಹೀಗಾಗಿ ಪದಾಧಿಕಾರಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಮುಂದೆ ಇರುವ ಸವಾಲು ಎಂದರೆ ಪಕ್ಷವನ್ನು ಬಲ ಪಡಿಸುವುದು. ಹೆಚ್ಚು ಸ್ಥಾನವನ್ನು ಗಳಿಸುವುದರ ಮೂಲಕ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಂದು ಹೇಳಿದರು.

ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಪದಾಧಿಕಾರಿಗಳು ಪಕ್ಷ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇವರ ಈ ಕಾರ್ಯವೈಖರಿಯಿಂದ ಪ್ರತಿಪಕ್ಷಗಳಲ್ಲಿ ಆತಂಕ ಉಂಟಾಗಿ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸರ್ಕಾರ ಸಂಪೂರ್ಣ ಅವಧಿ ಪೂರೈಸುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಈ ವಿಚಾರವನ್ನು ಹೈಕಮಾಂಡ್‍ಗೂ ತಿಳಿಸಲಾಗಿದೆ ಎಂದು ಹೇಳಿದರು. ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ್ದೇವೆ. ಉಳಿದ ಅವಧಿಯಲ್ಲೂ ಉತ್ತಮ ಆಡಳಿತ ನಡೆಸುತ್ತೇವೆ. ನಮ್ಮ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಸವಾಲು ಹಾಕಿದ್ದೇನೆ ಎಂದರು.  ಪದಾಧಿಕಾರಿಗಳು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ಬಿಜೆಪಿಯವರು ಕೆಲಸ ಮಾಡದೆ ಮಾತನಾಡುತ್ತಾರೆ. ನಾವು ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಯವರದ್ದು ಬಾಯಿ, ಬಡಾಯಿ. ಸಾಧನೆ ಶೂನ್ಯ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ತಡೆಯಲು ನಮ್ಮವರು ಸಜ್ಜಾಗಬೇಕು. ಇದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.

ನಾವು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸೋಣ. ಹೇಳಿಕೊಳ್ಳಲು ಬಿಜೆಪಿಯವರು ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಎಂದು ಹೇಳಿದರು. ಅಧಿಕಾರದಲ್ಲಿದ್ದಾಗ ದಲಿತರಿಗೆ ಬಿಜೆಪಿಯವರು ಏನೂ ಮಾಡಲಿಲ್ಲ. ಈಗ ದಲಿತರ ಮನೆಗೆ ಭೇಟಿ ನೀಡುವ ನಾಟಕವಾಡುತ್ತಿದ್ದಾರೆ. ಅವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಾಮಾಜಿಕ ನ್ಯಾಯಕ್ಕೆ, ಜಾತ್ಯತೀತ ವಾದಕ್ಕೆ ಅವರು ಯಾವಾಗಲೂ ವಿರುದ್ಧ. ಬದ್ಧತೆಯಿರುವುದು ಕಾಂಗ್ರೆಸ್‍ಪಕ್ಷಕ್ಕೆ ಮಾತ್ರ ಎಂದರು.

ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಬಡವರಿಗಾಗಿ ಮಾಡಿರುವ ಯೋಜನೆ ವಿಚಾರದಲ್ಲೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು,ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸುಳ್ಳು ಆರೋಪಗಳನ್ನು ಹೆಚ್ಚಾಗಿ ಮಾಡುತ್ತಾರೆ. ಈ ಬಗ್ಗೆ ಎಚ್ಚರವಾಗಿರಬೇಕು ಮತ್ತು ದಿಟ್ಟವಾಗಿ ಎದುರಿಸಬೇಕು ಎಂದರು. ನಮ್ಮ ಕಾರ್ಯಕರ್ತರು ಎದೆ ಉಬ್ಬಿಸುವ ಕೆಲಸವನ್ನು ಸರ್ಕಾರ ಮಾಡಿದೆಯೇ ಹೊರತು, ಎದೆಗುಂದುವ ಕೆಲಸ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin