ಲೋಕಸಭೆಯ ಉಪಚುನಾವಣೆಗೆ ಸ್ಪರ್ಧೆಗೆ ಮುಂದಾದ ಮಾಯಾವತಿ

Mayavathi--01

ನವದೆಹಲಿ,ಜು.21-ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಿಎಸ್‍ಪಿ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಲೋಕಸಭೆಯ ಉಪಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ಪರ್ಧಿಸಿದ್ದ ಪುಲ್‍ಪುರ್ ಲೋಕಸಭಾ ಕ್ಷೇತ್ರದಿಂದ ಮಾಯಾವತಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.   ಉಪಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಮೌರ್ಯ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಷ್ಟ್ರಪತಿ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮೌರ್ಯ ರಾಜೀನಾಮೆ ನೀಡಲಿದ್ದಾರೆ.

ತೆರವಾಗಲಿರುವ ಪುಲ್‍ಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಯಾವತಿ ಸ್ಪರ್ಧಿಸುವ ಉದ್ದೇಶದಿಂದಲೇ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.  ಯೋಗಿ ಆದಿತ್ಯನಾಥ್ ಪ್ರತಿನಿಧಿಸುವ ಗೋರಕ್‍ಪುರ್ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ ಪುಲ್‍ಪುರ್‍ನಿಂದ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆಯಲು ಬೆಹನ್ ಜೀ ಈ ತಂತ್ರ ರೂಪಿಸಿದ್ದಾರೆ.
ಮಾಯಾವತಿ ಅವರ ಸ್ಪರ್ಧೆಗೆ ಸಮಾಜವಾದಿ ಪಕ್ಷ ಬೆಂಬಲ ನೀಡುವ ಸಾಧ್ಯತೆ ಇದೆ. ಯಶಸ್ವಿ ಅಲೆಯಲ್ಲಿ ತೇಲುತ್ತಿರುವ ಯೋಗಿ ಆದಿತ್ಯನಾಥ್‍ಗೆ ಉಪಚುನಾವಣೆಯಲ್ಲಿ ಸೋಲುಣಿಸುವ ಮೂಲಕ ಆಡಳಿತಾರೂಢ ಪಕ್ಷಕ್ಕೆ ಬಿಸಿ ಮುಟ್ಟಿಸಲು ಒಂದು ಕಾಲದ ಶತ್ರು ಪಕ್ಷಗಳು ಇಂದು ಬಿಜೆಪಿ ವಿರುದ್ದ ಕೈ ಜೋಡಿಸಲು ಮುಂದಾಗಿದೆ.

ಪುಲ್‍ಪುರದಿಂದ ಸ್ಪರ್ಧಿಸಲು ಮಾಯಾವತಿಗೆ ಈಗಾಗಲೇ ಎಸ್‍ಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒಪ್ಪಿಗೆ ಸೂಚಿಸಿದ್ದಾರೆ. ಒಂದುವೇಳೆ ಮಾಯ ಸ್ಪರ್ಧಿಸಿದರೆ ಕಾಂಗ್ರೆಸ್ ಕೂಡ ಬೆಂಬಲ ನೀಡುವ ಸಾಧ್ಯತೆ ಇದೆ. ಉಪಚುನಾವಣೆ ಗೆಲುವ ಮೂಲಕ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಗೂ 2019ರ ಲೋಕಸಭೆ ಚುನಾವಣೆಗೆ ಮಹಾಘಟ್ಬಂಧನ್ ಪ್ರಕ್ರಿಯೆಗೆ ಈ ಚುನಾವಣೆ ಮೂಲಕ ಚಾಲನೆ ನೀಡುವುದು ಪ್ರತಿಪಕ್ಷಗಳ ತಂತ್ರವಾಗಿದೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆಯ ಬಗ್ಗೆ ಚರ್ಚಿಸಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಮಾಯಾವತಿ ಪ್ರತಿಭಟಿಸಿ ಮೂರು ದಿನಗಳ ಹಿಂದಷ್ಟೇ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಿನ್ನೆಯಷ್ಟೇ ರಾಜ್ಯಸಭಾ ಸಭಾಪತಿ ಹಮೀದ್ ಅನ್ಸಾರಿ ಮಾಯಾವತಿ ರಾಜೀನಾಮೆಯನ್ನು ಅಂಗೀಕರಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin