ಔಷಧೀಯ ಗುಣದ ಅಗರ ‘ಆಡುಸೋಗೆ ಸೊಪ್ಪು’

Adusoge-Soppu

`ಹಿತ್ತಲಗಿಡ ಮದ್ದಲ್ಲ’ ಎಂಬ ಗಾದೆಯನ್ನು ಸುಳ್ಳಾಗಿಸಿರುವ ಆಡುಸೋಗೆ, ಒಂದು ಅಮೂಲ್ಯವಾದ ಔಷಧೀಯ ಸಸ್ಯ. ಭಾರತದ ಎಲ್ಲ ಕಡೆಗಳಲ್ಲಿ ಬೆಳೆಯುವ ಈ ವನಸ್ಪತಿ, ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಮಳೆ ಬೀಳುವ ಮಲೆನಾಡಿನ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ, ಮನೆಗಳ ಹಿತ್ತಲಿನಲ್ಲಿ, ತೋಟದ ಬೇಲಿಗಳಲ್ಲಿ ಹಾಗೂ ಬೆಟ್ಟದ ಇಳಿಜಾರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಆಡುಸೋಗೆ ಉತ್ತಮವಾದ ಔಷಧೀಯ ಗುಣಗಳನ್ನು ಹೊಂದಿದೆ. ಪೊದೆ ಜಾತಿಗೆ ಸೇರಿದ ಇದು ಸಾಮಾನ್ಯವಾಗಿ 6 ರಿಂದ 10 ಅಡಿ ಎತ್ತರ ಬೆಳೆಯುತ್ತದೆ. ಎಲೆ ಹರಿತ ವರ್ಣದ್ದಾಗಿದ್ದು ತುದಿ ಮೊನಚಾಗಿಯೂ ಮಧ್ಯಭಾಗ ಅಗಲವಾಗಿಯೂ ಇರುತ್ತದೆ. ಎಲೆಯ ಮೇಲ್ಭಾಗದಲ್ಲಿ ಅತಿ ಸೂಕ್ಷ್ಮವಾದ ಬೆಳ್ಳನೆಯ ರೋಮಗಳಿರುತ್ತವೆ.

ನೋಡಲು ಸಿಂಹಾಕಾರವಾಗಿರುವುದರಿಂದ ಇದನ್ನು ಸಿಂಹಮುಖೀ ಎಂತಲೂ ಕರೆಯುತ್ತಾರೆ. ಹೂವು ಬೆಳ್ಳಗೆ ಕೊಳವೆ ಆಕಾರದಲ್ಲಿರುತ್ತದೆ. ಸಂಸ್ಕøತದಲ್ಲಿ ಇದಕ್ಕೆ ವಾಸಾ, ವಸಾಕಾ, ಸಿಂಹಪರ್ಣಿ, ಸಿಂಹಮುಖೀ, ಅಟರೂಷಕ ಎಂಬ ಹೆಸರುಗಳುಂಟು. ಕನ್ನಡದಲ್ಲಿ ಅಡುಸೋಗೆ, ಆಡಸಾಲ ಇತ್ಯಾದಿ ಹೆಸರುಗಳಿದ್ದು, ಆಡುಸೋಗೆಯ ಎಲೆ, ಬೇರು, ತೊಗಟೆ ಹಾಗೂ ಹೂವು ಔಷಧಿಯಲ್ಲಿ ಉಪಯೋಗಕ್ಕೆ ಬರುತ್ತದೆ.

ಆಯುರ್ವೇದ ಶಾಸ್ತ್ರದಲ್ಲಿ ವಾಸಾ ಅಥವಾ ಅಡುಸೋಗೆ ಒಂದು ಶ್ರೇಷ್ಠ ಔಷಧೀಯ ಸಸ್ಯವೆಂದು ಪರಿಗಣಿಸಲ್ಪಟ್ಟಿದೆ. ಕಹಿ-ಒಗರು ರುಚಿಯುಳ್ಳ ಅಡುಸೋಗೆ ಸುಲಭವಾಗಿ ಜೀರ್ಣವಾಗುವ ಗುಣ ಉಳ್ಳದ್ದಾಗಿದೆ. ಕೆಮ್ಮು, ಕ್ಷಯರೋಗ, ರಕ್ತಪಿತ್ತ, ಜ್ವರ, ಚರ್ಮರೋಗ ಹಾಗೂ ಪಿತ್ತ ವಿಕಾರದಿಂದ ಉಂಟಾಗುವ ಅನೇಕ ರೋಗಗಳಿಗೆ ಒಂದು ಉತ್ತಮ ಔಷಧಿಯಾಗಿದೆ. ವೈದ್ಯರು ಇದರಿಂದ ತಯಾರಾದ ಲೇಹ, ಕಷಾಯ, ಸ್ವರಸ ಆಸವ ಹಾಗೂ ಸಿರಪ್‍ಗಳನ್ನು ಔಷಧಿರೂಪದಲ್ಲಿ ಬಳಕೆ ಮಾಡುತ್ತಾರೆ.

ಶ್ವಾಸಾಂಗ ರೋಗಗಳಿಗೆ ಸಂಜೀವಿನಿ :

ಮೂಗು, ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶಗಳಿಗೆ ಉಂಟಾಗುವ ಸಾಧಾರಣ ನೆಗಡಿ ಶೀತದಿಂದ ಹಿಡಿದು ಭಯಂಕರ ರೋಗಗಳಾದ ಕ್ಷಯರೋಗ, ಕ್ಯಾನ್ಸರ್ ನವರೆಗಿನ ಎಲ್ಲಾ ರೋಗಗಳಿಗೆ ವಾಸಾ ಒಂದು ಶ್ರೇಷ್ಠ ಔಷಧವಾಗಿದೆ. ಅಡುಸೋಗೆ ಒಂದು ಉತ್ತಮ ಕಫ ನಿವಾರಕ, ಅಂದರೆ ಗಟ್ಟಿಯಾದ ಕಫವನ್ನು ಕರಗಿಸಿ ಹೊರಗೆ ಹಾಕುವಲ್ಲಿ ಉಪಯೋಗಕಾರಿ. ಶ್ವಾಸಕಾಂಗ ರೋಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಮುಖ್ಯ ಲಕ್ಷಣ ಅತಿ ಕಫ ಉತ್ಪತ್ತಿ. ಹೀಗೆ ಉತ್ಪತ್ತಿಯಾದ ಕಫವು ಗಟ್ಟಿಯಾಗಿ ಉಸಿರಾಟಕ್ಕೆ ತೊಂದರೆ ಹಾಗೂ ಕೆಮ್ಮನ್ನು ಉಂಟುಮಾಡುತ್ತದೆ. ಇಂಥ ಸಮಯದಲ್ಲಿ ಕಫ ನಿಸ್ಸಾರಕವಾದ ಅಡುಸೋಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.

ನೆಗಡಿ ಮತ್ತುಶೀತಹಾರಿ :

ಮಳೆಗಾಲದಲ್ಲಿ ಮತ್ತು ಶೀತಕಾಲದಲ್ಲಿ ನೆಗಡಿ, ಕೆಮ್ಮು, ಶೀತ ಮುಂತಾದ ಶ್ವಾಸಾಂಗ ರೋಗಗಳು ಸಹಜವಾಗಿ ಉಂಟಾಗಿವ. ಅಡುಸೋಗೆ ಪರಿಣಾಮಕಾರಿಯಾಗಿ ಈ ಬಗೆಯ ರೋಗವನ್ನು ನಿವಾರಿಸುತ್ತದೆ. ನೆರಳಿನಲ್ಲಿ ಒಣಗಿಸಿದ ಆಡುಸೋಗೆ ಎಲೆ, ಅಮೃತಬಳ್ಳಿ, ಶುಂಠಿ, ಜ್ಯೇಷ್ಠಮಧು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇವುಗಳ ನಾಲ್ಕರಷ್ಟು ನೀರನ್ನು ಹಾಕಿ, ಚೆನ್ನಾಗಿ ಕುದಿಸಿ ಒಂದು ಭಾಗ ಕಷಾಯವನ್ನು ಇಳಿಸಿಕೊಳ್ಳಬೇಕು. 100 ಮಿ.ಲೀ. ಕಷಾಯಕ್ಕೆ 2 ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಶೀತದಿಂದ ಉಂಟಾದ ನೆಗಡಿ, ಕೆಮ್ಮುಗಳೇ ಅಲ್ಲದೆ ದೂಳು, ಹೊಗೆ ಮುಂತಾದವುಗಳಿಂದ ಉಂಟಾದ ಆಸಾತ್ಮಜನ್ಮ ಕೆಮ್ಮು, ಶೀತಗಳು ನಿವಾರಣೆಯಾಗುತ್ತವೆ.

ಆಡುಸೋಗೆ ಮಕ್ಕಳ ಮತ್ತು ವೈದ್ಯರ ಶ್ವಾಸರೋಗಗಳಲ್ಲಿ ಸುರಕ್ಷಿತ ಹಾಗೂ ಪರಿಣಾಮಕಾರೀ ಶ್ರೇಷ್ಠ ಔಷಧವೆನಿಸಿದೆ. ಆಡುಸೋಗೆ ಸೊಪ್ಪಿನ ರಸ 2 ಚಮಚ, ತುಳಸಿ ಒಂದು ಚಮಚ, ಜೇನುತುಪ್ಪ ಒಂದು ಚಮಚ ಸೇರಿಸಿ ದಿನಕ್ಕೆ 2 ಅಥವಾ 3 ಸಾರಿ ಸೇವಿಸಿದರೆ ಉತ್ತಮ ಗುಣ ದೊರಕುತ್ತದೆ. ಮಕ್ಕಳಿಗೆ ಅರ್ಧ ಪ್ರಮಾಣದಲ್ಲಿ ಈ ಔಷಧವನ್ನು ಕೊಡಲೇಬೇಕು.

ಕ್ಷಯರೋಗ ನಿವಾರಣೆ :

ಶ್ವಾಸಕೋಶಗಳ ರೋಗಗಳಲ್ಲಿ ಕ್ಷಯರೋಗ ಒಂದು ಭಯಂಕರ ರೋಗ. ಕೆಮ್ಮು, ಜ್ವರ, ಕಫ ಹಾಗೂ ಕಫದಲ್ಲಿ ರಕ್ತ ಬೀಳುವುದು ಇವು ಕ್ಷಯರೋಗದ ಮುಖ್ಯ ಲಕ್ಷಣಳು. ಈ ರೋಗದಲ್ಲಿ ಪುಪ್ಪಸ (ಶ್ವಾಸಕೋಶ) ದೊಳಗೆ ಹುಣ್ಣಾಗಿರುತ್ತದೆ. ರೋಗಿಯು ಕೆಮ್ಮಿದಾಗ ಕೆಮ್ಮಿನ ಒತ್ತಡಕ್ಕೆ ಹುಣ್ಣಿನ ಭಾಗದಲ್ಲಿರುವ ರಕ್ತನಾಳಗಳು ಒಡೆದು ರಕ್ತಸ್ರಾವವಾಗಿ ಕಫದೊಂದಿಗೆ ರಕ್ತ ಬೀಳುತ್ತದೆ. ಕೆಲವೊಮ್ಮೆ ರಕ್ತಸ್ರಾವ ಹೆಚ್ಚಾಗಿ ರೋಗಿಗೆ ಪ್ರಾಣಾಪಾಯವಾಗುವ ಸಂಭವವೂ ಉಂಟು. ಅಂಥ ಸಮಯದಲ್ಲಿ ರಕ್ತ ಸ್ತಂಭಕ ಮತ್ತು ಕಫ ನಿಸ್ಸಾರಕವಾಗಿ ಆಡುಸೋಗೆ ವರದಾನವಾಗಿದೆ. ಮೂರು ಚಮಚ ಆಡುಸೋಗೆ ಸೊಪ್ಪಿನ ರಸ, ಒಂದು ಚಮಚ ಜೇನುತುಪ್ಪ, 250 ಮಿ.ಗ್ರಾಂ. ಪ್ರವಾಳ (ಹವಳ) ಭಸ್ಮ ಪ್ರತಿ ಆರುಗಂಟೆಗಳಿಗೆ ಒಂದು ಸಾರಿ ಕೊಟ್ಟು, ಮೇಲೆ ಹಸುವಿನ ನೊರೆಹಾಲನ್ನು ಸಕ್ಕರೆ ಬೆರೆಸಿ ಕೊಡುತ್ತಿದ್ದರೆ, ರಕ್ತಸ್ರಾವ ನಿಂತು ರೋಗಿಗೆ ಹಾಯೆನಿಸುತ್ತದೆ.

ಆಡುಸೋಗೆಯ ಸೊಪ್ಪು ಸಿಗದಿದ್ದರೆ ಇದರದೇ ಸೊಪ್ಪಿನಿಂದ ತಯಾರಾದ ವಾಸಾವಲೇಹವನ್ನೂ ಕೊಡಬಹುದು.  ಹೃದ್ರೋಗಜನ್ಮ ಶ್ವಾಸರೋಗಿಗಳು ಅಥವಾ ದಮ್ಮಿನ ರೋಗಿಗಳಿಗೆ ವಾಸಾವಲೇಹ ಮತ್ತು ಶೃಂಗಭಸ್ಮ ರಾಮಬಾಣದಂತೆ ಕೆಲಸ ಮಾಡುತ್ತದೆ.  ಒಣಗಿದ ಆಡುಸೋಗೆ ಎಲೆ, ಮತ್ತಿಚಕ್ಕೆ, ಜ್ಯೇಷ್ಠಮಧು ಇವುಗಳ ಕಷಾಯವನ್ನು ತಯಾರಿಸಿ ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಆರೋಗ್ಯ ಸುಧಾರಿಸುತ್ತದೆ.

ರಕ್ತ ಪಿತ್ತದಲ್ಲಿ :

ಮೂಗಿನಿಂದ, ಗುದದ್ವಾರದಿಂದ, ಮೂತ್ರದ್ವಾರದಿಂದ ಅಥವಾ ಯೋನಿ ದ್ವಾರದಿಂದ ಅಪ್ರಾಕೃತವಾಗಿ ರಕ್ತಸ್ತಾವವಾಗುದಕ್ಕೆ ರಕ್ತ ಪಿತ್ತವೆಂದು ಕರೆಯುತ್ತಾರೆ. ಈ ರಕ್ತ ಪಿತ್ತದ ವಿಕಾರಕ್ಕೆ 2 ಚಮಚ ಆಡುಸೋಗೆ ರಸ, ಒಂದು ಚಮಚ ಗರಿಕೆ ಹುಲ್ಲಿನ ರಸ, ಒಂದು ಚಮಚ ಜೇನುತುಪ್ಪ ಹಾಗೂ 200 ಮಿ.ಗ್ರಾಂ. ಪ್ರವಾಳ (ಹವಳದ) ಭಸ್ಮ ಸೇರಿಸಿ ದಿನಕ್ಕೆ 2-3 ಸಾರಿ ಕೊಟ್ಟರೆ ರಕ್ತಸ್ರಾವ ನಿಲ್ಲುತ್ತದೆ. ಮಕ್ಕಳಿಗೆ ಮೂತ್ರ ಕಟ್ಟಿದಾಗ ಆಡುಸೋಗೆಯ ಹಸಿರು ಎಲೆಗಳನ್ನು ತಂದು ದೀಪದಲ್ಲಿ ಬಿಸಿ ಮಾಡಿ ನಾಭಿಯ ಕೆಳಭಾಗಗದಲ್ಲಿ ಶಾಖ ಕೊಟ್ಟರೆ, ಸುಲಭವಾಗಿ ಮೂತ್ರಸ್ರಾವವಾಗುತ್ತದೆ. ಹಳ್ಳಿಗಳಲ್ಲಿ ನಮ್ಮ ಪೂರ್ವಕರು ಹೆರಿಗೆಯ ನೋವು ಶುರುವಾದಾಗ ಆಡುಸೋಗೆ ಬೇರನ್ನು ತಂದು ನಾಭಿಯ ಕೆಳಭಾಗದಲ್ಲಿ ಸೊಂಟಕ್ಕೆ ಕಟ್ಟಿದರೆ ಸುಲಭವಾಗಿ ಹೆರಿಗೆಯಾಗುತ್ತದೆ ಎಂದು ನಂಬಿ ಕಾರ್ಯೋನ್ಮುಖವಾಗುತ್ತಿದ್ದುದು ಸರ್ವವೇದ್ಯ.

ಚರ್ಮರೋಗ ನಿವಾರಣೆ :

ಕಜ್ಜಿ, ತುರಿ, ಇಸುಬು ಮುಂತಾದ ಚರ್ಮ ರೋಗಗಳಿಗೆ ಹಾಗೂ ಪದಾರ್ಥಗಳ ಒಗ್ಗದಿರುವಿಕೆಯಿಂದಾದ (ಅಲಜ್ರ್ಟಿಕ್) ಚಮರೋಗಗಳಿಗೆ ಒಣಗಿದ ಆಡುಸೋಗೆ ಎಲೆ, ಅಮೃತಬಳ್ಳಿ, ಸೋಗದೆಬೇರು ಇವುಗಳನ್ನು ಸಮಭಾಗ ಬೆರೆಸಿ ಕಷಾಯ ಕೊಟ್ಟರೆ ಅತ್ಯುತ್ತಮ ಫಲಿತಾಂಶ ದೊರೆಯುತ್ತದೆ. ಆಡುಸೋಗೆಯ ಸೊಪ್ಪು ಮತ್ತು ಅರಿಶಿನದ ಪುಡಿಗಳನ್ನು ಸೇರಿಸಿ ಚೆನ್ನಾಗಿ ಅರೆದು ಈ ಚರ್ಮರೋಗದ ಹುಣ್ಣುಗಳ ಮೇಲೆ ಲೇಪಿಸಿದರೆ, ಶೀಘ್ರವಾಗಿ ಗುಣಕಂಡುಬರುತ್ತದೆ. ದೀರ್ಘಕಾಲ ವಾಸಿಯಾಗದೆ ಇರುವ ಇಂಥ ಚರ್ಮರೋಗಗಳೂ ವಾಸಿಯಾಗುತ್ತವೆ.

 ಆಯುರ್ವೇದ ತಜ್ಞ : ಡಾ. ಅಬ್ದುಲ್ ಖಾದರ್ ( Mob :  9845199790 )

< ಆರೋಗ್ಯ ಮತ್ತು ಆಯುರ್ವೇದ ಕುರಿತಾದ ನಿರಂತರ  Eesanje News 24/7 ನ್ಯೂಸ್ ಆ್ಯಪ್ ಸುದ್ದಿಗಳಿಗೆ  ಡೌನ್ಲೋಡ್ ಮಾಡಿಕೊಳ್ಳಿ  >

 Click Here to Download   Android / iOS

Facebook Comments

Sri Raghav

Admin