ಪೌರಕಾರ್ಮಿಕರಿಗೆ ನೀಡುವ ಉಪಹಾರದಲ್ಲಿ ಹುಳುಗಳು, ಕಸಕಡ್ಡಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Food--01

ತುಮಕೂರು, ಜು.22-ನಗರವನ್ನು ಸ್ವಚ್ಛ ಗೊಳಿಸುವ ಪೌರಕಾರ್ಮಿಕರಿಗೆ ಇಂದು ಬೆಳಗ್ಗೆ ವಿತರಿಸಿದ ಉಪಹಾರದಲ್ಲಿ ಹುಳುಗಳು, ಕಸಕಡ್ಡಿ ಪತ್ತೆಯಾಗಿದ್ದು, ಪಾಲಿಕೆ ವಿರುದ್ಧ ಪೌರಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ  35 ವಾರ್ಡ್‍ಗಳಲ್ಲಿ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ವಿತರಿಸಲು ಬೆಂಗಳೂರಿನ ಗುತ್ತಿಗೆದಾರರೊಬ್ಬರು ಕಂಟ್ರಾಕ್ಟ್ ತೆಗೆದುಕೊಂಡಿದ್ದು, ಪ್ರತಿದಿನ 8 ಗಂಟೆಗೆ ಸರಿಯಾಗಿ ಉಪಹಾರದ ಪ್ಯಾಕೆಟ್‍ಗಳನ್ನು ಪೌರಕಾರ್ಮಿಕರಿಗೆ ವಿತರಿಸಲಾಗುತ್ತಿತ್ತು.

ಅದೇ ರೀತಿ ಇಂದೂ ಸಹ 350 ರಿಂದ 400 ಪೌರಕಾರ್ಮಿಕರಿಗೆ ಉಪಹಾರ ವಿತರಿಸಲಾಗಿತ್ತು. ಆಹಾರ ಪೊಟ್ಟಣ ತೆಗೆದು ನೋಡಿದಾಗ ಅದರಲ್ಲಿ ಹುಳುಗಳು, ಕಸ ಕಡ್ಡಿ ಪತ್ತೆಯಾಗಿದೆ.  ಕೂಡಲೇ ಪೌರಕಾರ್ಮಿಕರು ಈ ವಿಷಯವನ್ನು ಮೇಯರ್ ರವಿಕುಮಾರ್ ಅವರ ಗಮನಕ್ಕೆ ತಂದಿದ್ದು, ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಈ ಹಿಂದೆ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರಕ್ಕಾಗಿ ತಲಾ 40 ರೂ. ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ ಪಾಳಿಕೆ ವತಿಯಿಂದ ಇದನ್ನು ರದ್ದುಗೊಳಿಸಿ ಉಪಹಾರವನ್ನು ವಿತರಿಸುವ ಪದ್ಧತಿಯನ್ನು ಜಾರಿಗೆ ತರಲಾಯಿತು.

ಗುತ್ತಿಗೆದಾರ ನಗರದ ಸಪ್ತಗಿರಿ ಬಡಾವಣೆಯಲ್ಲಿ ತಿಂಡಿಯ ಪೊಟ್ಟಣಗಳನ್ನು ತಯಾರಿಸಿಕೊಂಡು ಬಂದು ಪೌರಕಾರ್ಮಿಕರಿಗೆ ವಿತರಣೆ ಮಾಡುತ್ತಿದ್ದರು.
ಇಂದು ವಿತರಿಸಿದ ಆಹಾರ ಪೊಟ್ಟಣದಲ್ಲಿ ಹುಳುಗಳು ಪತ್ತೆಯಾಗಿದ್ದು, ಯಮಾರಿ ನಾವು ಇದನ್ನು ಸೇವಿಸಿದ್ದರೆ ನಮ್ಮ ಆರೋಗ್ಯ ಗತಿಯೇನು ಎಂದು ಪೌರಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin