ಮೈಸೂರಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ, ಮಹಿಳೆಯ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Fake-Marks-cards

ಮೈಸೂರು, ಜು.22- ನಕಲಿ ಅಂಕಪಟ್ಟಿ ಜಾಲದಲ್ಲಿ ತೊಡಗಿದ್ದ ಮಹಿಳಾ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಮುಕ್ತ ವಿಶ್ವವಿದ್ಯಾಲಯದ ಹೆಸರಿನಲ್ಲಿದ್ದ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಗೋಕುಲಂ ಬಡಾವಣೆ ನಿವಾಸಿ ಯಶಸ್ವಿನಿ (45) ಬಂಧಿತ ಮಹಿಳೆ. ನಜರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧದ ಬಳಿ ಕಾರಿನಲ್ಲಿ ಈಕೆ ಕುಳಿತಿದ್ದಳು. ಈ ಸಂದರ್ಭದಲ್ಲಿ ಪೊಲೀಸರ ಗಸ್ತು ವಾಹನ ಕಂಡು ವಿಚಲಿತಳಾಗಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಈಕೆಯನ್ನು ಗಮನಿಸಿ ಅನುಮಾನಗೊಂಡು ಸಿಸಿಬಿ ಇನ್ಸ್‍ಪೆಕ್ಟರ್ ಚಂದ್ರಕಲಾ ಮತ್ತು ಸಿಬ್ಬಂದಿ ಕಾರನ್ನು ಹಿಂಬಾಲಿಸಿ ತಡೆದು ಪರಿಶೀಲಿಸಿದ್ದಾರೆ.

ಈ ವೇಳೆ ಆಕೆ ಬಳಿ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿವಿಗಳ ಹೆಸರಿನಲ್ಲಿದ್ದ ಸಾವಿರಾರು ನಕಲಿ ಅಂಕಪಟ್ಟಿಗಳು ಇದ್ದುದು ಕಂಡುಬಂದಿದೆ.
ನಂತರ ಠಾಣೆಗೆ ಕರೆದೊಯ್ದು ಈಕೆಯನ್ನು ವಿಚಾರಣೆಗೊಳಪಡಿಸಿದಾಗ ಬೆಳಗಾವಿಯ ಬಸವರಾಜು ಮತ್ತು ಅರಸೀಕೆರೆಯ ಕಿಶನ್ ಎಂಬುವರ ಸಹಾಯದಿಂದ ನಕಲಿ ಅಂಕಪಟ್ಟಿ ತಂದು ನಿರುದ್ಯೋಗಿ ಹಾಗೂ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿದ್ದುದಾಗಿ ಬಾಯಿಬಿಟ್ಟಿದ್ದಾಳೆ.
ಅಲ್ಲದೆ, ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರನ್ನು ಗುರಿಯಾಗಿರಿಸಿಕೊಂಡು ಅವರಿಂದ ಸಾವಿರಾರು ರೂ. ಹಣ ಪಡೆದು ನಕಲಿ ಅಂಕಪಟ್ಟಿ ನೀಡಿ ವಂಚಿಸುತ್ತಿದ್ದುದು ವಿಚಾರಣೆಯಿಂದ ದೃಢಪಟ್ಟಿದೆ.

ಪದವಿ ಅಂಕಪಟ್ಟಿ ಅಷ್ಟೇ ಅಲ್ಲದೆ, ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾರ್ಥಿಗಳನ್ನು ಗುರಿಯಾಗಿರಿಸಿ ಅವರನ್ನು ಸಂಪರ್ಕಿಸಿ ಅಂಕಪಟ್ಟಿಗಳನ್ನು ಕೊಡುವುದಾಗಿ ಆಮಿಷವೊಡ್ಡಿ ಅವರಿಂದ ಹೆಚ್ಚಿನ ಹಣ ಪಡೆದುಕೊಂಡಿದ್ದಾಗಿ ಈಕೆ ಒಪ್ಪಿಕೊಂಡಿದ್ದಾಳೆ.  ಈಕೆಯ ಹಿಂದೆ ದೊಡ್ಡ ಜಾಲವೇ ಇದ್ದು, ರಾಜ್ಯಾದ್ಯಂತ ಈ ಜಾಲ ಹರಡಿರುವ ಅನುಮಾನ ವ್ಯಕ್ತವಾಗಿದೆ.  ನಕಲಿ ಅಂಕಪಟ್ಟಿಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿರುವ ಜಾಲವನ್ನು ಪತ್ತೆಹಚ್ಚಿ ಪ್ರಮುಖ ರೂವಾರಿ ಸೇರಿದಂತೆ ಮತ್ತಷ್ಟು ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಬೆಂಗಳೂರು, ಮತ್ತೊಂದು ತಂಡ ಕೆಆರ್ ನಗರ ಹಾಗೂ ಇನ್ನೊಂದು ತಂಡ ಇನ್ನಿತರ ಕಡೆ ತನಿಖೆಗಾಗಿ ತೆರಳಿದೆ.

ನಿನ್ನೆ ಸಂಜೆ ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಸಿಸಿಬಿ ಎಸಿಪಿ ಗೋಪಾಲ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಚಂದ್ರಕಲಾ, ಪ್ರಸನ್ನಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin