ವಿಪಕ್ಷಗಳ ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಜನರೇ ತೀರ್ಪು ನೀಡುತ್ತಾರೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Road--01

ಬೆಂಗಳೂರು, ಜು.22-ವಿಪಕ್ಷಗಳು ಮಾಡುವ ಆರೋಪ, ಆಕ್ಷೇಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರ ಮಾಡಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಜನರ ತೀರ್ಮಾನಕ್ಕೆ ಬಿಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅನುದಾನದಡಿ ಮಾಗಡಿರಸ್ತೆಯಲ್ಲಿ 25 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 315 ಮೀಟರ್ ಕೆಳಸೇತುವೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಏನೇ ಅಭಿವೃದ್ದಿ ಮಾಡಿದರೂ ವಿಪಕ್ಷಗಳು ಟೀಕೆ ಮಾಡುತ್ತವೆ, ಗಿಮಿಕ್ ಎನ್ನುತ್ತವೆ. ಈ ಬಗ್ಗೆ ಯಾವುದೇ ರೀತಿ ತಲೆ ಕೆಡಿಸಿಕೊಳ್ಳದೆ ಅಭಿವೃದ್ದಿ ಕೆಲಸಗಳ ಬಗ್ಗೆ ಜನರ ತೀರ್ಮಾನಕ್ಕೆ ಬಿಡುತ್ತೇವೆ ಎಂದು ಹೇಳಿದರು.

ಕಾಮಾಲೆ ಕಣ್ಣಿರುವವರಿಗೆ ಕಾಣುವುದೆಲ್ಲ ಹಳದಿ ಎಂಬಂತೆ ವಿರೋಧ ಪಕ್ಷಗಳು ವರ್ತಿಸುತ್ತಿವೆ. ಅಭಿವೃದ್ದಿಗೆ ಅಡ್ಡಗಾಲು ಹಾಕುವುದನ್ನು ಕಾಯಕ ಮಾಡಿಕೊಂಡಿವೆ. ಇದರಿಂದ ಅಭಿವೃದ್ದಿ ಕುಂಠಿತವಾಗುತ್ತದೆಯೇ ಹೊರತು ಯಾವುದೇ ರೀತಿಯ ಲಾಭವಾಗುವುದಿಲ್ಲ. ಸುಳ್ಳುಗಳನ್ನು ಹೇಳಲು ಒಂದು ಮಿತಿ ಇರಬೇಕು. ವಿಪಕ್ಷಗಳು ಮಿತಿಮೀರಿ ವರ್ತಿಸುತ್ತಿವೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.  ಕೊಳಚೆ ನಿವಾಸಿಗಳಿಗೆ ಪ್ರತಿ ತಿಂಗಳು 10 ಸಾವಿರ ಲೀಟರ್ ನೀರು ಒದಗಿಸುವುದಕ್ಕೆ ಪ್ರತಿಪಕ್ಷದವರು ಗಿಮಿಕ್ ಅಂದರು. ನಗರದ ಬಡಜನತೆಯ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದೆಲ್ಲವನ್ನೂ ಕೂಡ ಪ್ರತಿಪಕ್ಷಗಳು ಗಿಮಿಕ್ ಎನ್ನುತ್ತಿವೆ. ನಾವು ಮಾಡಿರುವ ಕೆಲಸಗಳ ಬಗ್ಗೆ ಜನರೇ ತೀರ್ಮಾನಿಸುತ್ತಾರೆ. ಜನರ ವಿವೇಚನೆಗೆ ಬಿಡುತ್ತೇವೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ ಸ್ಥಾಪನೆ ಕುರಿತು ಮಾಡಿರುವ ಆರೋಪ ಮಾನನಷ್ಟ ಮೊಕದ್ದಮೆಗೆ ಅರ್ಹವಾಗಿದೆ. ನಾನು ಕೂಡ ಒಬ್ಬ ವಕೀಲನಾಗಿ ಇದನ್ನು ಸಮರ್ಥಿಸುತ್ತೇನೆ. ಆದರೆ ಆರೋಪ ಮಾಡಿರುವವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುವುದಿಲ್ಲ ಎಂದು ಹೇಳಿದರು.  ಎಲ್ಲ 198 ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು ಆಗಸ್ಟ್ 15ರಂದು 125 ಕ್ಯಾಂಟೀನ್‍ಗಳು ಕಾರ್ಯಾರಂಭ ಮಾಡಲಿವೆ. ಉಳಿದ ಕ್ಯಾಂಟೀನ್‍ಗಳನ್ನು ಅಕ್ಟೋಬರ್ 2ರಂದು ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

 

ಬೆಂಗಳೂರು ವಿಶ್ವದಲ್ಲೇ ಕ್ರಿಯಾಶೀಲ ನಗರವಾಗಿ ಬೆಳೆಯುತ್ತಿದೆ. 240 ಚದುರ ಕಿ.ಮೀ ವಿಸ್ತೀರ್ಣವಿದ್ದ ಬೆಂಗಳೂರು 840 ಚದುರ ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿದೆ. ನಗರದಲ್ಲಿ ಒಂದು ಕೋಟಿ 10 ಲಕ್ಷ ಜನಸಂಖ್ಯೆ ಇದ್ದು 67 ಲಕ್ಷ ವಾಹನಗಳಿವೆ. 47 ಲಕ್ಷ ದ್ವಿಚಕ್ರ ವಾಹನಗಳಿವೆ. ಜನಸಂಖ್ಯೆಗೆ ಅನುಗುವಣವಾಗಿ ಪರಿಸರ ಮಾಲಿನ್ಯ ತಡೆಗಟ್ಟಬೇಕು, ವಾಹನಗಳನ್ನು ನಿಯಂತ್ರಿಸಬೇಕಾಗಿದೆ. ಅಗತ್ಯಕ್ಕೆ ತಕ್ಕಂತೆ ಅನುಕೂಲಗಳನ್ನು ಒದಗಿಸಬೇಕಾಗಿದೆ ಎಂದು ಅವರು ಹೇಳಿದರು.
ನಗರ ಬೆಳೆದಂತೆಲ್ಲ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮಾಡುವುದು ನಮ್ಮ ಆದ್ಯಕರ್ತವ್ಯವಾಗಿದೆ. ಅದಕ್ಕಾಗಿ ಪಿಂಕ್ ಹೊಯ್ಸಳ ವಾಹನಗಳನ್ನು ಪೊಲೀಸ್ ಇಲಾಖೆಗೆ ನೀಡಲಾಗುತ್ತಿದ್ದು, ಎಲ್ಲ ಠಾಣೆಗಳಿಗೂ ಒಂದು ವಾರದೊಳಗೆ ಪಿಂಕ್ ಹೊಯ್ಸಳ ವಾಹನ ನೀಡಲಾಗುವುದು ಎಂದರು. ನಮ್ಮ 100 ಯೋಜನೆ ಜಾರಿಗೊಳಿಸಿದ್ದು , ದೂರು ನೀಡಿದ 15 ನಿಮಿಷದಲ್ಲೇ ಪೊಲೀಸರು ದೂರಿಗೆ ಸ್ಪಂದಿಸಿ ಪರಿಹಾರ ನೀಡಲಿದ್ದಾರೆ. ಎಷ್ಟೇ ಅಭಿವೃದ್ದಿ ಮಾಡಿದರೂ ವಿಪಕ್ಷಗಳು ಟೀಕೆ ಮಾಡುವುದನ್ನು ಕಾಯಕ ಮಾಡಿಕೊಂಡಿವೆ ಎಂದು ಲೇವಡಿ ಮಾಡಿದ ಅವರು,ಯಾರು ಏನೇ ಹೇಳಿದರೂ ಜನಪರವಾದ ಕೆಲಸಗಳನ್ನು ನಾವು ಮಾಡುತ್ತಾ ಸಾಗುತ್ತೇವೆ ಎಂದು ತಿಳಿಸಿದರು.

ಕಳ್ಳತನ ಆಗ್ದಂಗ್ ನೋಡ್ಕೊಳಪ್ಪ: 

ನಮ್ಮ ಮನೆ ಇದೇ ಕ್ಷೇತ್ರದಲ್ಲಿದೆ ಎಂದು ಶಾಸಕ ಪ್ರಿಯಕೃಷ್ಣ ಅವರ ಕಡೆಗೆ ತಿರುಗಿ ನಮ್ಮ ಮನೆ ಇಲ್ಲೇ ಇದೆ. ನೋಡ್ತೀರ್ತಿರ ಎಂದಾಗ ಸಿಎಂನತ್ತ ತಿರುಗಿ ನಗು ಬೀರಿದ ಪ್ರಿಯಕೃಷ್ಣ ಅವರಿಗೆ ಕಳ್ಳತನ ಆಗ್ದಂಗೆ ನೋಡ್ಕೊಳಪ್ಪ ಎಂದು ಹಾಸ್ಯ ಚಟಾಕಿ ಬೀರಿದರು.  ಸಚಿವರಾದ ಎಂ.ಕೃಷ್ಣಪ್ಪ , ಕೆ.ಜೆ.ಜಾರ್ಜ್, ಶಾಸಕರಾದ, ಪ್ರಿಯಕೃಷ್ಣ , ಸುರೇಶ್‍ಕುಮಾರ್, ಎಚ್.ಎಂ.ರೇವಣ್ಣ , ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಆನಂದ್, ಸ್ಥಳೀಯ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ , ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin