ಸ್ಕೂಲ್‍ಆ್ಯಪ್‍ಗಾಗಿ ಸರಗಳ್ಳತನ ಮಾಡಿ ಸಿಕ್ಕಿಬಿದ್ದರು

ಈ ಸುದ್ದಿಯನ್ನು ಶೇರ್ ಮಾಡಿ

Police--0121

ಬೆಂಗಳೂರು, ಜು.22- ಸ್ಕೂಲ್ ಆ್ಯಪ್‍ಗಾಗಿ ಹಣ ಹೊಂದಿಸಲು ಸರಗಳ್ಳತನಕ್ಕಿಳಿದಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ 35 ಲಕ್ಷ ಬೆಲೆಬಾಳುವ 1.2 ಕೆಜಿ ತೂಕದ ಚಿನ್ನದ ಸರಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಡಿಯೋ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಎಚ್‍ಬಿಆರ್ ಲೇಔಟ್‍ನ ಜಬೀವುದ್ದೀನ್ (30) ಮತ್ತು ಮಹಾಲಕ್ಷ್ಮಿ ಲೇಔಟ್‍ನ ಅರುಣ್‍ಕುಮಾರ್ (36) ಬಂಧಿತ ಸರಗಳ್ಳರು.  ಅರುಣ್‍ಕುಮಾರ್ ಈ ಮೊದಲು ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗ ಅಲ್ಲಿ ಸರಗಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಜಬೀವುದ್ದೀನ್ ಎಂಬಾತನ ಪರಿಚಯವಾಗಿದ್ದು, ತದನಂತರ ಇವರಿಬ್ಬರು ಸ್ನೇಹಿತರಾಗುತ್ತಾರೆ.

ಅರುಣ್‍ಕುಮಾರ್ ಜೈಲಿನಿಂದ ಬಿಡುಗಡೆಯಾದ ನಂತರ ಸ್ಕೂಲ್ ಆ್ಯಪ್(ಬೆಂಗಳೂರು ನಗರದ ಎಲ್ಲ ಶಾಲಾ-ಕಾಲೇಜುಗಳ ವಿಸ್ತೃತ ಮಾಹಿತಿ ಕಲೆ)ಯೋಜನೆಯನ್ನು ಆರಂಭಿಸಲು ಆ್ಯಪ್ ಡೆವಲಪ್ ಒಬ್ಬರನ್ನು ಸಂಪರ್ಕಿಸಿದಾಗ ಅವರು ಅಂದಾಜು 2 ಲಕ್ಷ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
2 ಲಕ್ಷ ಹಣ ಹೊಂದಿಸಲು ಜೈಲಿನಲ್ಲಿ ಪರಿಚಿತನಾಗಿದ್ದ ಸರ ಅಪಹರಣಕಾರ ತಬ್ರೇಜ್‍ನನ್ನು ಸಂಪರ್ಕಿಸಿದಾಗ ಇವರಿಬ್ಬರು ಸರ ಅಪಹರಣ ಮಾಡಲು ಯೋಜನೆ ರೂಪಿಸಿ ಅದರಂತೆ ಬೆಳಗಿನ ಜಾವ ಒಂಟಿಯಾಗಿ ಹೋಗುವ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರ ಸರಗಳನ್ನು ಎಗರಿಸುತ್ತಿದ್ದರು.
ಇಷ್ಟಕ್ಕೇ ಸುಮ್ಮನಾಗದೆ ದುರಾಸೆಗೆ ಮಿತಿ ಇಲ್ಲದಂತೆ ನಗರದಾದ್ಯಂತ 17 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 21 ಮಹಿಳೆಯರ ಸರ ಅಪಹರಣ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಇತ್ತೀಚೆಗೆ ಮಲ್ಲೇಶ್ವರಂನ ಮಾಲ್‍ವೊಂದರ ಮುಂದೆ ಕೀ ಸಮೇತ ಹೋಂಡಾ ಡಿಯೋ ವಾಹನವನ್ನು ಮಹಿಳೆಯೊಬ್ಬರು ರಸ್ತೆ ಬದಿ ನಿಲ್ಲಿಸಿ ಒಳಗೆ ಹೋಗಿದ್ದಾಗ ಅರುಣ್‍ಕುಮಾರ್ ವಾಹನವನ್ನು ಕಳ್ಳತನ ಮಾಡಿ ಅದರ ನಂಬರ್ ಪ್ಲೇಟ್‍ಅನ್ನು ಒಎಲ್‍ಎಕ್ಸ್‍ನಲ್ಲಿ ಅದೇ ಬಣ್ಣದ ಡಿಯೋ ವಾಹನದ ಜಾಹೀರಾತುಗಳನ್ನು ನೋಡಿ ನಂಬರ್ ಬದಲಿಸಿ ಸರ ಅಪಹರಣ ಮಾಡಲು ಬಳಸಿದ್ದನು. ಸರ ಅಪಹರಣ ಪ್ರಕರಣದಲ್ಲಿ ದೊರೆತ ಸಿಸಿಟಿವಿ ಫುಟೇಜ್ ಹಾಗೂ ವಿಶೇಷ ಕ್ರೈಮ್ ತಂಡದ ಮಾಹಿತಿಯಿಂದ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರನ್ನು ಕೂಲಂಕಶವಾಗಿ ವಿಚಾರಣೆ ಮಾಡಿದಾಗ ಪ್ರಸಕ್ತ ಸಾಲಿನ ಮಾರ್ಚ್‍ನಿಂದ ಜೂನ್‍ವರೆಗೆ ವರದಿಯಾಗಿದ್ದ ದಕ್ಷಿಣ ವಿಭಾಗದ 12, ಪಶ್ಚಿಮ ವಿಭಾಗದ 9, ಉತ್ತರ ವಿಭಾಗದ 6, ಆಗ್ನೇಯ, ಈಶಾನ್ಯ ವಿಭಾಗದಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 29 ಸರ ಅಪಹರಣ ಪ್ರಕರಣಗಳು ಪತ್ತೆಯಾದಂತಾಗಿದೆ.

ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಉಮಾಮಹೇಶ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಸರಗಳ್ಳರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಂಡದ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin