ತಂಪಿನ ನೆಲದಲ್ಲೀಗ ಬೆಂಕಿಯ ಮಳೆ, ಗೋರ್ಖಾಲ್ಯಾಂಡ್ ಗಾಗಿ ಘೋರ ಹೋರಾಟ

gorkhaland

– ಚಿಕ್ಕರಸು

ಸಾಮ್ರಾಜ್ಯಶಾಹಿಯ ಸಾಮ್ರಾಜ್ಯ ವಿಸ್ತರಣೆಯ ದಾಹ, ಎಲ್ಲರ ಮೇಲೆ ತಮ್ಮದೇ ಆಧಿಪತ್ಯ ಹೇರುವ ಆಕ್ರಮಣಕಾರಿ ಮನೋಭಾವಗಳೇ ವಿಶ್ವದಲ್ಲಿನ ಬಹುತೇಕ ಹಿಂಸೆ, ದೌರ್ಜನ್ಯಗಳಿಗೆ ಪ್ರಧಾನ ಕಾರಣವಾಗಿರುವುದನ್ನು ಇತಿಹಾಸ ತಿಳಿಸುತ್ತದೆ.  ಗತ ಇತಿಹಾಸದಿಂದ ವರ್ತಮಾನದ ವಿದ್ಯಮಾನಗಳಲ್ಲೂ, ಇದು ಹೆಜ್ಜೆ ಹೆಜ್ಜೆಗೂ ರುಜುವಾತಾಗುತ್ತಲೇ ಇದೆ. ಬಹುಶಃ ಭವಿಷ್ಯದಲ್ಲಿಯೂ ಈ ಅನಾಗರಿಕ ಕ್ರೌರ್ಯ ಮುಂದುವರಿಯುವುದಿಲ್ಲ ಎಂಬ ಭರವಸೆಯ ಯಾವ ಬೆಳಕೂ ಕಾಣಿಸುತ್ತಿಲ್ಲ.

ಮಧ್ಯ ಪ್ರಾಚ್ಯ ರಾಷ್ಟ್ರಗಳು, ಪಾಶ್ಚಿಮಾತ್ಯ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲಿನ ಮಾತು ಬಿಡಿ. ನಮ್ಮ ದೇಶದಲ್ಲೇ ಇದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಿವೆ. ಇದಕ್ಕೆ ನಮ್ಮ ದೇಶಕ್ಕೆ ಮುಕುಟಪ್ರಾಯವಾಗಿರುವ ಸುಂದರ ಕಣಿವೆ ನಾಡು ಜಮ್ಮು-ಕಾಶ್ಮೀರ. ನೆರೆಯ ಪಾಕಿಸ್ತಾನ ತನ್ನ ನೆಲದ ವಿಸ್ತೀರ್ಣದ ದಾಹದಿಂದ ಅಲ್ಲಿ ಸದಾ ಹಿಂಸೆಯನ್ನು ಪ್ರಚೋದಿಸುತ್ತ ನೆಮ್ಮದಿಯಿಂದ ಬದುಕಬೇಕಾದ ಕಣಿವೆಯ ಜನರ ಬದುಕನ್ನು ನಿತ್ಯ ನರಕವಾಗಿಸಿರುವುದು ಇಡೀ ಪ್ರಪಂಚದ ಕಣ್ಣಿಗೆ ರಾಚುತ್ತಿದೆ.

ಅದಿರಲಿ, ಪ್ರಚಲಿತ ಭಾರತದ ಇನ್ನೊಂದು ಗಿರಿಧಾಮ ಭೂಲೋಕದ ಸ್ವರ್ಗ ಡಾರ್ಜಿಲಿಂಗ್‍ನಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಆಡಳಿತ ಈಗ ಅಲ್ಲಿನ ಜನರ ಜೀವನದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಡಾರ್ಜಿಲಿಂಗ್ ಪ್ರತ್ಯೇಕ ರಾಜ್ಯದ ಕೂಗು ಇಂದು-ನಿನ್ನೆಯದಲ್ಲ. ಕಳೆದ 17ನೆ ಶತಮಾನದಿಂದಲೂ ಇಂತಹ ಒಂದು ಹೋರಾಟ ಅಲ್ಲಿ ಒಳಗೊಳಗೇ ನಡೆಯುತ್ತಲೇ ಇದೆ. ಆದರೆ, ಇತ್ತೀಚೆಗೆ ಅದು ತಣ್ಣಗಾಗಿತ್ತು. ಅಲ್ಲಿನ ಜನ ಪ್ರತ್ಯೇಕ ರಾಜ್ಯದ ಬೇಡಿಕೆಯಿಂದ ಸ್ವಲ್ಪ ವಿರಮಿಸಿದ್ದು, ಎಲ್ಲವೂ ಸಹಜ ಸ್ಥಿತಿಯಲ್ಲೇ ಇತ್ತು.

ಆದರೆ, ಈ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ಮೇಡಮ್ ಅಲ್ಲಿ ಇದ್ದಕ್ಕಿದ್ದಂತೆ ಬೆಂಗಾಲಿ ಭಾಷೆಯನ್ನು ಅಧಿಕೃತವಾಗಿ ಹೇರಲು ಮುಂದಾದದ್ದೇ… ಡಾರ್ಜಿಲಿಂಗ್ ನಿವಾಸಿಗಳನ್ನು ಕೆರಳಿಸಿಬಿಟ್ಟಿತು. ಬೆಂಗಾಲಿ ಭಾಷೆ ಹೇರಿಕೆಗೆ ತೀವ್ರ ವಿರೋಧ ಒಡ್ಡಿದ ಮೂಲ ನಿವಾಸಿಗಳು ಸಿಡಿದೆದ್ದರು, ಪ್ರತಿಭಟನೆಗಿಳಿದರು. ನಮಗೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಪ್ರತಿಪಾದಿಸತೊಡಗಿದರು. ಇನ್ನೇನು ಯಥಾಪ್ರಕಾರ ಪಶ್ಚಿಮ ಬಂಗಾಳ ಸರ್ಕಾರ ತನ್ನ ಪರಮಾಧಿಕಾರ ಚಲಾಯಿಸಿತು, ಹೋರಾಟವನ್ನು ದಮನಿಸಲು ಮುಂದಾಯಿತು, ಪೆÇಲೀಸರ ಬಂದೂಕುಗಳು ಕಿಡಿಕಾರಿದವು, ಲಾಠಿಗಳು ನರ್ತಿಸಿದವು, ಸಾವು-ನೋವುಗಳು ಸಂಭವಿಸಿದವು, ಅಮಾಯಕರು ಮಣ್ಣಾದರು, ರಕ್ತದ ಕೋಡಿ ಹರಿಯಿತು, ಮುಖ್ಯಮಂತ್ರಿ ದೀದಿ ಹೋರಾಟ ದಮನಿಸಿದ ತಮ್ಮ ಸಾಹಸಕ್ಕೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಇದು ನಿನ್ನೆ ಮೊನ್ನೆ ಘಟಿಸಿದ ಘಟನೆ. ಇಷ್ಟೆಲ್ಲ ಆದ ಮೇಲೆ ಡಾರ್ಜಿಲಿಂಗ್ ಬಗ್ಗೆ, ಅಲ್ಲಿನ  ನೆಲದ ಬಗ್ಗೆ,, ಆ ಮಣ್ಣಿನ ಮಕ್ಕಳ ಬಗ್ಗೆ, ಅವರ ಬದುಕಿನ ಬಗ್ಗೆ ಹೇಳಲೇಬೇಕು. ಡಾರ್ಜಿಲಿಂಗ್ ಎಂಬ ಈ ಹೆಸರು ದೋರ್ಜೆ ಮತ್ತು ಲಿಂಗ್ ಎಂಬ ಎರಡು ಶಬ್ದಗಳ ಸಂಗಮ. ದೋರ್ಜೆ ಎಂದರೆ ತಂಪಾದ, ಲಿಂಗ್ ಎಂದರೆ ಪ್ರದೇಶ. ಅಂತ. ಈ ತಂಪಾದ ಪ್ರದೇಶವೇ ಡಾರ್ಜಿಲಿಂಗ್.
ಈ ಡಾರ್ಜಿಲಿಂಗ್‍ಗೆ ಶತಮಾನಗಳ ಇತಿಹಾಸವಿದೆ ಎಂದು ಮೇಲೆ ಹೇಳಿದೆನಲ್ಲವೇ..?

ಮೊದಲು ಪಶ್ಚಿಮ ಬಂಗಾಲದ ಬಗ್ಗೆ ನೋಡೋಣ. ರಾಮಕೃಷ್ಣ ಪರಮಹಂಸರಂಥ ಮಹಾನ್‍ಸಂತ, ಸ್ವಾಮಿ ವಿವೇಕಾನಂದರಂಥ ಪುರುಷ ಸಿಂಹ, ಆಚಾರ್ಯ ಗುರುದೇವ ರವೀಂದ್ರರಂಥ ಏಕಮೇವಾದ್ವಿತೀಯ ಕವಿ. ಸುಭಾಷ್‍ಚಂದ್ರ ಬೋಸ್‍ರಂಥ ವೀರ ಸೇನಾನಿ, ಶರಚ್ಚಂದ್ರ, ಬಂಕಿಮಚಂದ್ರರಂಥ ಸಾಹಿತಿಗಳು, ರಾಜಾರಾಮ ಮೋಹನರಾಯ್‍ರಂಥ ಮಹಾನ್ ಮಾನವತಾವಾದಿ ಸುಧಾರಕರು… ಇಂಥವರನ್ನೆಲ್ಲ ಈ ಭರತ ಭೂಮಿಗೆ ಕೊಟ್ಟ ನಾಡು ಪಶ್ಚಿಮ ಬಂಗಾಲ ಭಾರತ-ಬಾಂಗ್ಲಾ ಸೋದರ ರಾಷ್ಟ್ರಗಳ ನಡುವೆ ಮೈ ಚಾಚಿ ಮಲಗಿದೆ.

gorkhaland (1)

ಶಿರ ಬಂಗಾಳಕೊಲ್ಲಿಯನ್ನು ಸ್ಪರ್ಶಿಸಿದರೆ ಪಾದಗಳು ನೇಪಾಳ-ಭೂತಾನ್‍ಗಳ ನಡುವಿನಿಂದ ಹಿಮಾಲಯದತ್ತ ಚಾಚಿವೆ. ಈ ಪಾದಗಳ ಎಡೆಯಲ್ಲಿರುವುದೇ ಡಾರ್ಜಿಲಿಂಗ್ ಎಂಬ ಭೂಲೋಕದ ಸ್ವರ್ಗ. ಸದಾ ತಂಪು ಹವೆಯ ನಯನ ಮನೋಹರ ಸುಂದರ ಗಿರಿಧಾಮ. ಪೂರ್ವ-ಪಶ್ಚಿಮಕ್ಕೆ ಬಾಂಗ್ಲಾ ಭಾರತ. ದಕ್ಷಿಣಕ್ಕೆ ಬಂಗಾಳಕೊಲ್ಲಿ, ಉತ್ತರಕ್ಕೆ ಡಾರ್ಜಿಲಿಂಗ್-ಟಿಬೆಟ್ ನಡುವೆ ಸಿಕ್ಕಿಂ ಇದೆ. ಒಟ್ಟಾರೆ ಹೇಳುವುದಾದರೆ ಭಾರತ, ಬಾಂಗ್ಲಾ ಉಪಖಂಡಗಳು, ನೇಪಾಳ, ಭೂತಾನ್ ಮತ್ತು ಟಿಬೆಟ್ ಎಂಬ ಹಿಮಾಲಯ ತಪ್ಪಲಿನ ದೇಶಗಳು, ಹಿಮ ಶಿಖರದಾಚೆಗಿನ ಚೀನಾ- ಹೀಗೆ ಇಷ್ಟು ರಾಷ್ಟ್ರಗಳೂ ಡಾರ್ಜಿಲಿಂಗ್ ಎಂಬ ಮೋಹಿನಿಯ ಸೌಂದರ್ಯಕ್ಕೆ ಮನಸೋತು ಮುತ್ತಿಡುತ್ತಿರುವಂತೆ ಭಾಸವಾಗುತ್ತದೆ.

ಈ ಪ್ರದೇಶದ ಸೌಂದರ್ಯವನ್ನು ಮೊದಲು ಗುರುತಿಸಿದ್ದು ಸಿಕ್ಕಿಂನ ಮಹಾರಾಜ. ಸಿಕ್ಕಿಂ ರಾಜ 1780ರಲ್ಲಿ ಡಾರ್ಜಿಲಿಂಗ್ ಪ್ರದೇಶ ಸ್ವಾಧೀನಪಡಿಸಿಕೊಳ್ಳಲು ಹವಣಿಸಿದನಾದರೂ ಅಲ್ಲಿನ ಗೋರ್ಖಾ ಸಮುದಾಯವನ್ನು ಜಯಿಸುವಲ್ಲಿ ವಿಫಲನಾದ. ಡಾರ್ಜಿಲಿಂಗ್‍ನಲ್ಲಿ ಮೂಲ ನಿವಾಸಿಗಳೆಂದು ಯಾರೂ ಇರಲಿಲ್ಲ. ಅಲ್ಲಿದ್ದವರೆಲ್ಲ ಹಿಮಾಲಯ ರಾಷ್ಟ್ರಗಳಾದ ಟಿಬೆಟ್, ಭೂತಾನ್, ನೇಪಾಳಗಳಿಂದ ವಲಸೆ ಬಂದವರೇ. ಅವರಲ್ಲಿ ಟಿಬೆಟ್ ಮೂಲದ ಗೋರ್ಖಾಗಳು ಪ್ರಾಬಲ್ಯ ಸ್ಥಾಪಿಸಿದರು. ಆನಂತರ ಬ್ರಿಟಿಷರು ಭಾರತವನ್ನಾಳುವಾಗ ಡಾರ್ಜಿಲಿಂಗ್ ಪ್ರದೇಶವನ್ನೂ ಕೂಡ ತಮ್ಮ ಹಿಡಿತಕ್ಕೆ ಪಡೆದದ್ದು, ಅಲ್ಲಿ ವಲಸಿಗರಿಗಾಗಿ ಆಸ್ಪತ್ರೆ, ಆಶ್ರಯ ತಾಣಗಳನ್ನು ಸ್ಥಾಪಿಸಿದ್ದು, ಅದನ್ನೊಂದು ಪ್ರವಾಸಿ ತಾಣದಂತೆ ಅಭಿವೃದ್ಧಿ ಪಡಿಸಿದ್ದು. ಅಲ್ಲಿ ಟೀ (ಚಹಾ) ಎಸ್ಟೇಟ್‍ಗಳನ್ನು ಆರಂಭಿಸಿ ಜನರಿಗೆ ಉದ್ಯೋಗ ಸೃಷ್ಟಿಸಿದ್ದು ಈಗ ಇತಿಹಾಸ.

ಹೀಗೆ ಹಲವಾರು ಕಾರಣಗಳಿಂದ ಪ್ರತ್ಯೇಕವಾಗಿಯೇ ಗುರುತಿಸಿಕೊಂಡಿದ್ದ ಡಾರ್ಜಿಲಿಂಗ್ ಪ್ರದೇಶವನ್ನು ಸ್ವಾತಂತ್ರ್ಯಾನಂತರ ಪಶ್ಚಿಮ ಬಂಗಾಲ ರಾಜ್ಯಕ್ಕೆ ಸೇರಿಸಲಾಯಿತು. ಡಾರ್ಜಿಲಿಂಗ್, ಕುರ್ಸೆಂಗ್, ಕಲಿಂಪೊಂಗ್ ಮತ್ತು ಟೆರಾಯ್ ಪಟ್ಟಣಗಳು ಡಾರ್ಜಿಲಿಂಗ್‍ಗೆ ಸೇರಿದ್ದವು. ಈ ಮಧ್ಯೆ 1950ರಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಟಿಬೆಟನ್ನು ಸ್ವಾಧೀನಪಡಿಸಿಕೊಂಡಾಗ ಸಾವಿರಾರು ಜನ ಟಿಬೆಟ್ ನಿರಾಶ್ರಿತರು ಡಾರ್ಜಿಲಿಂಗ್‍ನಲ್ಲಿ ಬಂದು ನೆಲೆಸುತ್ತಾರೆ. ಒಂದು ಲೆಕ್ಕದ ಪ್ರಕಾರ ಅವರ ಜನಸಂಖ್ಯೆ 10 ಸಾವಿರಕ್ಕೂ ಹೆಚ್ಚು. ಅಲ್ಲಿಂದ ಆರಂಭವಾದ ಜನಾಂಗೀಯ ಘರ್ಷಣೆ ಕೊನೆಗೆ ಪ್ರತ್ಯೇಕ ರಾಜ್ಯದ ಬೇಡಿಕೆವರೆಗೆ ಬರುತ್ತದೆ. ಅದೂ ಗೋರ್ಖಾಲ್ಯಾಂಡ್ ಮತ್ತು ಕಮ್ತಪುರ್ ಎಂಬ ಎರಡು ರಾಜ್ಯಗಳ ಬೇಡಿಕೆ.

ಇದು 1980ರ ದಶಕದಲ್ಲಿ ತೀವ್ರ ಸ್ವರೂಪ ಪಡೆಯಿತು. 40 ದಿನಗಳ ಕಾಲ ಭಾರೀ ಪ್ರತಿಭಟನೆ ನಡೆಯಿತು. ಸಾವು-ನೋವುಗಳಾದವು. ಗೋರ್ಖಾ ನ್ಯಾಷನಲ್ ಲಿಟರೇಷನ್ ಫ್ರಂಟ್ (ಜಿಎನ್‍ಎಲ್‍ಎಫ್) ನಡೆಸಿದ ಈ ಹೋರಾಟದ ನೇತೃತ್ವವನ್ನು ಸುಭಾಷ್ ಘೀಸಿಂಗ್ ವಹಿಸಿದ್ದರು. ಈ ಉದ್ವಿಗ್ನತೆ ಶಮನಗೊಳಿಸಲು ಡಾರ್ಜಿಲಿಂಗ್ ಗೋರ್ಖಾಹಿಲ್ ಕೌನ್ಸಿಲ್ (ಡಿಜಿಎಚ್) ರಚಿಸಲಾಯಿತು. ಘೀಸಿಂಗ್ ಅಧ್ಯಕ್ಷರಾದರು.ಆದರೆ, ಗೋರ್ಖಾ ಜನ್‍ಮುಕ್ತಿ ಮೋರ್ಚಾ ಗೋರ್ಖಾಲ್ಯಾಂಡ್ ಹೋರಾಟ ಮುಂದುವರಿಸಿತು. ಮತ್ತೆ ಕೇಂದ್ರ ಹಾಗೂ ಪಶ್ಚಿಮ ಬಂಗಾಲ ರಾಜ್ಯ ಸರ್ಕಾರಗಳು ಗೋರ್ಖಾ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ) ರಚಿಸಿ ಡಾರ್ಜಿಲಿಂಗ್‍ಗೆ ಸ್ವಾಯತ್ತತೆ ನೀಡಲು ಒಪ್ಪಿದವು. ಅಲ್ಲಿಗೆ ಡಾರ್ಜಿಲಿಂಗ್‍ಗೆ ವಿಶೇಷ ಸೌಲಭ್ಯಗಳು ಒದಗಿದವು (ಕಾಗದದ ಮೇಲೆ ಮಾತ್ರ ಸ್ವಾಯತ್ತೆ ಎನ್ನುತ್ತಾರೆ ಅಲ್ಲಿಯ ಜನ) ಎಂದು ಹೇಳಲಾಯಿತು.

ಇಷ್ಟಾದರೂ ಪ್ರತ್ಯೇಕ ಗೋರ್ಖಾಲ್ಯಾಂಡ್ ಹೋರಾಟ ಮಾತ್ರ ಬೂದಿ ಮುಚ್ಚಿದ ಕೆಂಡವಾಗಿಯೇ ಉಳಿದುಬಿಟ್ಟಿತು. ಅಸಮಾಧಾನದ ಹೊಗೆಯಾಡುತ್ತಲೇ ಇತ್ತು.
ಇದೇ ಸಮಯಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ 1 ರಿಂದ 10ನೇ ತರಗತಿವರೆಗೆ ಎಲ್ಲಾ ಶಾಲೆಗಳಲ್ಲಿ ಬೆಂಗಾಲಿ ಭಾಷೆ ಕಡ್ಡಾಯ ಎಂದು ಘೋಷಿಸಿಬಿಟ್ಟಿತು. ಇದೊಂದೇ ಕಿಡಿ ಗೋರ್ಖಾ ಸಮುದಾಯದವರನ್ನು ಬಡಿದೆಬ್ಬಿಸಿತು. ಜೂ.6ರಂದು ಬಿಮಲ್ ಗುರುಂಗ್ ನಾಯಕತ್ವದ ಗೋರ್ಖಾಜನ್‍ಮುಕ್ತಿ ಮೋರ್ಚಾ (ಜಿಜೆಎಂ) ಮತ್ತೆ ಪ್ರತ್ಯೇಕ ರಾಜ್ಯ ಬೇಡಿಕೆಯೊಂದಿಗೆ ಭುಗಿಲೆದ್ದಿತು. ದೀದಿ ವಿರುದ್ಧ ಗೋರ್ಖಾಗಳು ಕಿಡಿಕಾರಿದರು. ನಂತರದ ಸರ್ಕಾರದ ಆದೇಶ ಪೊಲೀಸರ ದೌರ್ಜನ್ಯ, ಹಿಂಸೆ, ಸಾವು-ನೋವು ಇತಿಹಾಸದ ಪುಟಕ್ಕೆ ಸೇರ್ಪಡೆಯಾದವು.

ಯಾಕೆ ಬೇಕು ಪ್ರತ್ಯೇಕ ರಾಜ್ಯ?

ಪ್ರತ್ಯೇಕ ರಾಜ್ಯ ಎಂದೊಡನೆ ಅವರನ್ನು ದೇಶದ್ರೋಹದ ಪಟ್ಟಿಗೆ ಸೇರಿಸುವುದು ನಮ್ಮ ಆಧುನಿಕ ಪ್ರಜಾಪ್ರಭುತ್ವದ ಒಂದು ಲಕ್ಷಣ. ಆದರೆ, ಅದರ ಹಿಂದೆ ಅಡಗಿರುವ ವಾಸ್ತವಾಂಶಗಳೇನು? ಯಾಕಾಗಿ ಜನ ಪ್ರತ್ಯೇಕ ರಾಜ್ಯದ ಕೂಗೆಬ್ಬಿಸುತ್ತಾರೆ ಎಂಬುದನ್ನು ತಾಳ್ಮೆಯಿಂದ ಪರೀಕ್ಷಿಸಿ ತಿಳಿದುಕೊಳ್ಳುವ ಪ್ರಯತ್ನಗಳನ್ನು ಯಾರೂ ಮಾಡುವುದಿಲ್ಲ. ಎಲ್ಲ ವಿಷಯಗಳಲ್ಲೂ ಪಟ್ಟಭದ್ರರ ಪರ-ವಿರೋಧಗಳು ಕೆಲಸ ಮಾಡುತ್ತವೆ. ಸತ್ಯಾಂಶ ಯಾರಿಗೂ ಬೇಕಿಲ್ಲ. ಪ್ರಚಲಿತ ಗೋರ್ಖಾಲ್ಯಾಂಡ್ ಹೋರಾಟದಲ್ಲೂ ಅದೇ ಆಗಿದೆ ಎನ್ನಿಸುತ್ತದೆ.

ಸಾವಿರಾರು ಸಂಖ್ಯೆಯಲ್ಲಿರುವ ಗೋರ್ಖಾ ಜನರ ಬದುಕು ನಿಜಕ್ಕೂ ಇಲ್ಲಿ ಅಸಹನೀಯ. ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಯಾವುದೇ ಸಮರ್ಪಕ ಯೋಜನೆಗಳೂ ಇಲ್ಲಿ ಜಾರಿಯಾಗಿಲ್ಲ. ಕೈಗಾರಿಕೆಗಳಿಲ್ಲ. ಕೃಷಿಯಂತೂ ಇಲ್ಲವೇ ಇಲ್ಲ. ಹಿಂದೆ ಬ್ರಿಟಿಷರು ಆರಂಭಿಸಿದ್ದ ಟೀ(ಚಹಾ) ಎಸ್ಟೇಟ್‍ಗಳನ್ನು ಹೊರತುಪಡಿಸಿದರೆ ಇಲ್ಲಿನ ಜನತೆಯ ಉಪಜೀವನಕ್ಕೆ ಯಾವ ಸವಲತ್ತೂ ಇಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನಜಿ ಅವರು ಗೋರ್ಖಾ ಜನಮುಕ್ತಿ ಮೋರ್ಚಾ ಶಾಂತಿ ಕದಡುತ್ತಿದೆ. ಪ್ರತ್ಯೇಕತೆ ಕೂಗೆಬ್ಬಿಸಿ ರಾಜಕೀಯವಾಗಿ, ಸಾಮಾಜಿಕವಾಗಿ ಜನರ ಮಧ್ಯೆ ಒಡಕುಂಟು ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸುತ್ತಾರೆ.

ಆದರೆ ಜನ ಮೋರ್ಚಾ ಹೇಳುವುದೇ ಬೇರೆ. ನಮ್ಮ ಬದುಕಿನ ಬಗ್ಗೆ ಸರ್ಕಾರ ಯಾವುದೇ ಕಾಳಜಿ ವಹಿಸಿಲ್ಲ. ನ್ಯಾಯ ಕೇಳುವ ನಮ್ಮ ಹೋರಾಟವನ್ನು ದಮನಿಸಿ ಹೋರಾಟದ ಹಕ್ಕು ಕಸಿಯಲಾಗುತ್ತಿದೆ. ಸ್ವಾಯತ್ತೆ ಎಂಬುದು ಬರೀ ಕಾಗದದ ಮೇಲಿದೆಯೇ ಹೊರತು ಅದನ್ನು ಅನುಷ್ಠಾನಕ್ಕೆ ತರುವ ಯಾವ ಕೆಲಸವೂ ಇಲ್ಲಿ ಆಗಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದೆ.

ಸರ್ಕಾರಗಳೇ(ಕೇಂದ್ರ ರಾಜ್ಯ) ರಚಿಸಿರುವ ಗೋರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್(ಜಿಟಿಎ) ಯಾವ ಕೆಲಸ ಮಾಡುವುದಕ್ಕೂ ಮಮತಾ ಸರ್ಕಾರ ಅವಕಾಶ ಕೊಡುತ್ತಿಲ್ಲ. ಯಾವುದೇ ಅನುದಾನಗಳೂ ಬಿಡುಗಡೆಯಾಗಿಲ್ಲ. ಗೋರ್ಖಾ ಜನರನ್ನು ದಮನಿಸಲು, ಅವರ ಹೋರಾಟ ಹತ್ತಿಕ್ಕಲು ರಾಜ್ಯ ಸರ್ಕಾರ ಕ್ರೂರವಾಗಿ ವರ್ತಿಸುತ್ತಿದೆ. ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿದೆ. ಸ್ವಾಯತ್ತತೆ ಇನ್ನೂ ಕೂಡ ಕಾಗದದ ಮೇಲಿದೆಯೇ ಹೊರತು ಅನುಷ್ಠಾನಗೊಳಿಸಲು ದೀದಿ ಬಿಡುತ್ತಿಲ್ಲ. ಸರ್ಕಾರ ಹೇಳುವುದೇ ಬೇರೆ. ಇಲ್ಲಿನ ವಸ್ತುಸ್ಥಿತಿಯೇ ಬೇರೆ. ಎನ್ನುತ್ತಾರೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್. ಬಿಜೆಪಿ ಇಲ್ಲಿ ಜಿಜೆಎಂಗೆ ಬೆಂಬಲ ನೀಡುತ್ತಿದೆ.

ಇದುವರೆಗೆ ನಾವು ಸರ್ಕಾರವನ್ನು ನಂಬಿ ಕೂತು ಕೆಟ್ಟು ಹೋಗಿದ್ದೇವೆ. ನಮ್ಮ ಬದುಕು ದುರ್ಭರವಾಗಿದೆ. ಇನ್ನು ಸಹಿಸಲು ಸಾಧ್ಯವಿಲ್ಲ. ಈಗ ನಮಗಿರುವ ಏಕೈಕ ಪರಿಹಾರವೆಂದರೆ ಪ್ರತ್ಯೇಕ ರಾಜ್ಯ(ಗೋರ್ಖಾಲ್ಯಾಂಡ್) ನಿರ್ಮಾಣ ಒಂದೇ ಎಂಬುದು ಗೋರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೋಷನ್‍ಗಿರಿ ಅವರ ದೃಢವಾದ ಮಾತು.  ಜಿಟಿಎ ತನ್ನ ಕಾರ್ಯ ನಿರ್ವಹಿಸಲು ಮುಖ್ಯಮಂತ್ರಿ ಮಮತಾ ಅವರು ಬಿಡುತ್ತಿಲ್ಲ. ಎಲ್ಲದರಲ್ಲೂ ಮೂಗು ತೂರಿಸುತ್ತ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಾರೆ. ಜಿಟಿಎ ಅಸ್ತಿತ್ವಕ್ಕೆ ಬಂದಂದಿನಿಂದಲೂ ಸರ್ಕಾರಗಳು ಇದೇ ಕೆಲಸ ಮಾಡುತ್ತಾ ಬಂದಿವೆ.

ಹಾಗಾಗಿ ಇಲ್ಲಿನ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಾವು ಹೋರಾಟ ಮುಂದುವರಿಸುತ್ತೇವೆ ಎನ್ನುತ್ತಾರೆ ರೋಷನ್‍ಗಿರಿ. 1977ರಂದ 1981ರ ಅವಧಿಯಲ್ಲಿ ರಾಜ್ಯ ಸರ್ಕಾರ ಡಾರ್ಜಿಲಿಂಗ್‍ಗೆ ಸ್ವಾಯತ್ತತೆ ಕೊಡುವ ನಿರ್ಣಯವನ್ನು ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿತು. 1980ರಲ್ಲಿಯೂ ಪ್ರತ್ಯೇಕ ಗೋರ್ಖಾಲ್ಯಾಂಡ್‍ಗಾಗಿ ಸುಭಾಷ್ ಘೇ ಸಿಂಗ್ ಅವರ ನಾಯಕತ್ವದಲ್ಲಿ ಹೋರಾಟ ತೀವ್ರವಾಗೇ ನಡೆದಿತ್ತು. ನಂತರ ಬಿಮಲ್ ಗುರುಂಗ್ ಹೋರಾಟ ಮುಂದುವರಿಸಿದರು. ಮಮತಾ ಬ್ಯಾನರ್ಜಿ ಅವರ ಏಕಪಕ್ಷಿಯ ಧೋರಣೆಯಿಂದಾಗಿ ಈಗ ಹೋರಾಟ ಮತ್ತೆ ಮರುಕಳಿಸಿದೆ. ಪ್ರತ್ಯೇಕ ಗೋರ್ಖಾಲ್ಯಾಂಡ್‍ಗಾಗಿ ಹೋರಾಟ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.

700-800 ಕಿಮೀ:

ಡಾರ್ಜಿಲಿಂಗ್‍ನಿಂದ ರಾಜದಾನಿ ಕೋಲ್ಕತ್ತಾಕ್ಕೆ ಬರೋಬ್ಬರಿ 700ರಿಂದ 800 ಕಿ.ಮೀ ಹಾದಿ. ಬಸ್‍ನಲ್ಲಿ ಬಂದರೆ 16-18 ಗಂಟೆ. ರೈಲಿನಲ್ಲಿ ಬಂದರೆ 24-30 ಗಂಟೆ, ನಡೆದು ಬರಬೇಕೆಂದರೆ ಬರೋಬ್ಬರಿ ಒಂದು ವಾರ ಸಮಯ ಹಿಡಿಯುತ್ತದೆ. ಡಾರ್ಜಿಲಿಂಗ್‍ನ ಬಹುತೇಕ ಮಂದಿ ಇದುವರೆಗೆ ಕೋಲ್ಕತಾ ನೋಡಿಯೇ ಇಲ್ಲ ಎನ್ನುತ್ತಾರೆ ನಾಯಕರು!.  ನಾವಿನ್ನು ಯಾವ ಪುರುಷಾರ್ಥಕ್ಕಾಗಿ ಬಂಗಾಳದಲ್ಲಿರಬೇಕು? ನಾವು ಸತ್ತರೂ ಕೇಳುವವರಿಲ್ಲ. ನಾವು ಬದುಕುವುದಾದರೂ ಹೇಗೆ.. ಎಂಬುದು ಗೋರ್ಖಾಲ್ಯಾಂಡ್‍ನ ನಿವಾಸಿಗಳ ಕರುಳು ಹಿಂಡುವ ನೋವಿನ ಪ್ರಶ್ನೆ. ಇದಕ್ಕೆ ಪರಿಹಾರ..?

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin