ನಿರ್ಗಮಿತ ರಾಷ್ಟ್ರಪತಿಗೆ ಭಾವಪೂರ್ಣ ವಿದಾಯ, ನೆನಪುಗಳನ್ನು ಹಂಚಿಕೊಂಡ ಪ್ರಣಬ್ ಮುಖರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Pranab-Mukharjee

ನವದೆಹಲಿ. ಜು.23 : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಳೆ ರಾಷ್ಟ್ರಪತಿ ಭವನವನ್ನು ತೊರೆಯಲಿದ್ದಾರೆ. ಅವರ ಜಾಗಕ್ಕೆ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬರಲಿದ್ದಾರೆ. ಹೀಗಾಗಿ ಇಂದು ಅವರಿಗೆ ವಿದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್, ಪ್ರಧಾನಿ ಆದಿಯಾಗಿ ಸಂಸತ್ ಸದಸ್ಯರೆಲ್ಲರೂ ಉಪಸ್ಥಿತರಿದ್ದು ಪ್ರಣಬ್ ಮುಖರ್ಜಿಯವರಿಗೆ ಭಾವಪೂರ್ಣ ವಿದಾಯ ಹೇಳಿದರು.

Pranab--2

ತನ್ನ ಅಧಿಕಾರ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿ ಪ್ರಣವ್ ಮುಖರ್ಜಿ ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸಿದ್ದಾರೆ. ಇತ್ತೀಚೆಗೆ ಅನುಷ್ಠಾನಕ್ಕೆ ಬಂದ ಜಿಎಸ್‍ಟಿ ಬಗ್ಗೆ ಮಾತನಾಡಿದ ಮುಖರ್ಜಿ ಸಂಸತ್ತಿನಲ್ಲಿ ಜಿಎಸ್‍ಟಿಯನ್ನು ಅಂಗೀಕರಿಸಿರುವುದೇ ಸಂಸತ್ತಿನ ಪ್ರಬುದ್ಧತೆಯನ್ನು ತೋರಿಸುತ್ತದೆ. ಜಿಎಸ್‍ಟಿಗೆ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿರುವುದು ದೇಶದ ಆಡಳಿತ ವ್ಯವಸ್ಥೆಯ ಒಗ್ಗಟ್ಟನ್ನು ಬಿಂಬಿಸುತ್ತದೆ ಎಂದಿದ್ದಾರೆ. ಕದನ ಕಲಾಪಗಳ ವೇಳೆ ವಾಕ್ ಔಟ್ ಮತ್ತು ಪ್ರತಿಭಟನೆಗಳಿಂದಾಗಿ ಕಲಾಪಗಳು ಆಗಾಗ ಮುಂದೂಡಲ್ಪಟ್ಟಿರುವುದರ ಬಗ್ಗೆ ಮುಖರ್ಜಿ ಖೇದ ವ್ಯಕ್ತ ಪಡಿಸಿದ್ದಾರೆ. ಸಂಸತ್ತಿನಲ್ಲಿ ಈ ರೀತಿ ಸಮಯವನ್ನು ವ್ಯರ್ಥಗೊಳಿಸಿದ್ದು ಖೇದಕರ ಎಂದು ಅವರು ಹೇಳಿದ್ದಾರೆ,

‘ನಾನು ಸಂಸತ್ತಿನ ಕೊಡುಗೆ ಎಂದರೆ ತಪ್ಪಾಗಲಾಗದು. ನನ್ನ ರಾಜಕೀಯ ದೃಷ್ಠಿಕೋನಕ್ಕೆ ಸಂಸತ್ ಮಹತ್ವದ ಕೊಡುಗೆ ನೀಡಿದೆ. ಎರಡೂ ಸಭೆಗಳಲ್ಲಿ ನಡೆದ ಗಂಭೀರ ಚರ್ಚೆಗಳಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ,’ ಎಂದು ಹೇಳಿದ ಪ್ರಣಬ್ ಮುಖರ್ಜಿ ಜುಲೈ 22, 1969ರಂದು ತಾವು ಹಾಜರಾದ ಸಂಸತ್ತಿನ ಮೊದಲ ಅಧಿವೇಶನವನ್ನು ನೆನಪಿಸಿಕೊಂಡರು. ಕಳೆದ 37 ವರ್ಷಗಳಿಂದ ನಾನು ರಾಜ್ಯಸಭೆಯ ಸದಸ್ಯನಾಗಿದ್ದೇನೆ. ನಾಲ್ಕು ಬಾರಿ ಪಶ್ಚಿಮ ಬಂಗಾಳದಿಂದ ಹಾಗೂ ಒಮ್ಮೆ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದೇನೆ ಎಂದು ಪ್ರಣಬ್ ಹೇಳಿದರು. ಇದೇ ಸಮಯದಲ್ಲಿ ರಾಷ್ಟ್ರಪತಿಗಳು ಇಂದಿರಾ ಗಾಂಧಿ ಜತೆಗಿನ ತಮ್ಮ ಒಡನಾಟದ ನೆನಪುಗಳನ್ನೂ ಹಂಚಿಕೊಂಡರು.

Pranab--2

ಇನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ನನ್ನ ವೃತ್ತಿ ಜೀವನಕ್ಕೆ ಮಾರ್ಗದರ್ಶನ ನೀಡಿದ ಅಪ್ರತಿಮ ನಾಯಕಿ. ಮೇರು ವ್ಯಕ್ತಿತ್ವ ಹೊಂದಿದ್ದ ಅವರು ನಿಜಕ್ಕೂ ಧೈರ್ಯ ಶಾಲಿಯಾಗಿದ್ದರು. ತುರ್ತು ಪರಿಸ್ಥಿತಿ ನಂತರ ಅಧಿಕಾರ ಕಳೆದುಕೊಂಡ ಇಂದಿರಾಗಾಂಧಿ ಅವರು 1978ರಲ್ಲಿ ಲಂಡನ್ ಗೆ ತೆರಳಿದ್ದಾಗ ಅಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ್ದರು ಎಂದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪ್ರಣಬ್ ಮುಖರ್ಜಿಯವರ ಮುಂದಿನ ಬಾಳ್ವೆಗೆ ಶುಭ ಹಾರೈಸಿದರು. ಇದಕ್ಕೂ ಮೊದಲು ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದ ವಿದಾಯದ ಔತಣಕೂಟದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಳೆ ಅಂದರೆ ಸೋಮವಾರ 7.30ಕ್ಕೆ ರಾಷ್ಟ್ರವನ್ನುದ್ದೇಶಿಸಿ ವಿದಾಯ ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಯಾಗಿ ಇದು ಅವರ ಕೊನೆಯ ಭಾಷಣವಾಗಲಿದೆ. ದೇಶದ 14ನೇ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಜುಲೈ 25ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin