ಸದ್ಯಕ್ಕೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲ್ಲ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ
ಧಾರವಾಡದ ಜೆ ಎಸ್ ಎಸ್ ಕಾಲೇಜಿನ ಆವರಣದಲ್ಲಿರುವ ಸನ್ನಿಧಿ ಸಭಾಭವನಕ್ಕೆ ಅಂಗವಿಕಲರೊಂದಿಗೆ ಬಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸೆಲ್ಪಿ ತೆಗೆದುಕೊಳ್ಳುವ ಮೂಲಕ ಕುಮಾರ ಪಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧಾರವಾಡದ ಜೆ ಎಸ್ ಎಸ್ ಕಾಲೇಜಿನ ಆವರಣದಲ್ಲಿರುವ ಸನ್ನಿಧಿ ಸಭಾಭವನಕ್ಕೆ ಅಂಗವಿಕಲರೊಂದಿಗೆ ಬಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸೆಲ್ಪಿ ತೆಗೆದುಕೊಳ್ಳುವ ಮೂಲಕ ಕುಮಾರ ಪಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹುಬ್ಬಳ್ಳಿ,ಜು.23-ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಿಲ್ಲ ಪರಿಸ್ಥಿತಿಗನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಪಟ್ಟಿ ಸಿದ್ಧವಿದೆ. ಕೆಲವು ಕಾರಣಗಳಿಂದ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಪಕ್ಷದ ವರಿಷ್ಠರಾದ ದೇವೇಗೌಡರು ಸೂಕ್ತ ಸಂದರ್ಭದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ನಮಗೆ ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಕೊರತೆ ಇಲ್ಲ. ಕೆಲವು ಕ್ಷೇತ್ರಗಳಲ್ಲಿ ಹತ್ತತ್ತು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಪಟ್ಟಿ ಬಿಡುಗಡೆ ಮಾಡಿದರೆ ಕೆಲವು ರಾಷ್ಟ್ರೀಯ ಪಕ್ಷಗಳು ನಮ್ಮ ಅಭ್ಯರ್ಥಿಗಳನ್ನು ಹೈಜಾಕ್ ಮಾಡುವ ಸಂಭವವಿದೆ. ಹಿಂದಿನ ಕಹಿ ಅನುಭವದಿಂದಲೇ ಪಟ್ಟಿ ಪ್ರಕಟಿಸದಿರಲು ತೀರ್ಮಾನಿಸಲಾಗಿದೆ ಎಂದರು.   ಜೆಡಿಎಸ್ ಅಭ್ಯರ್ಥಿಗಳು ಎಲ್ಲೇ ಇದ್ದರೂ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಬೇಕು. ನೀವು ಮಾಡುವ ಒಳ್ಳೆಯ ಕೆಲಸಗಳಿಂದಲೇ ಜನರು ಕೈ ಹಿಡಿಯುತ್ತಾರೆ. ಜಾತಿ, ಹಣ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಸೂಚ್ಯವಾಗಿ ಹೇಲಿದ್ದಾರೆ.

ಮುಖ್ಯಮಂತ್ರಿಗಳಿಂದ ಜಾತಿ ರಾಜಕೀಯ:

ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ಜಾತಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ವೀರಶೈವ ಧರ್ಮ ಸಮುದಾಯವನ್ನು ಪ್ರತ್ಯೇಕ ಧರ್ಮ ಮಾಡುವ ಅಗತ್ಯವಿಲ್ಲ. ಜನರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಲಿಂಗಾಯಿತರಲ್ಲಿ ಇರುವವರೆಲ್ಲರೂ ಶ್ರೀಮಂತರಲ್ಲ. ಈಗಲೂ ಈ ಸಮುದಾಯದ ಲಕ್ಷಾಂತರ ಮಂದಿ ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಸಮುದಾಯದ ಮುಖಂಡರು ಒಂದೆಡೆ ಕುಳಿತು ಚರ್ಚಿಸಿ ಪರಿಹರಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.

ಮಹದಾಯಿ ಹೋರಾಟಕ್ಕೆ ನಮ್ಮ ಸಂಪೂರ್ಣವಾದ ಬೆಂಬಲವಿದೆ. ಎರಡು ವರ್ಷವಾದರೂ ಯೋಜನೆ ಅನುಷ್ಠಾನವಾಗದಿರುವುದು ಅತ್ಯಂತ ನೋವಿನ ಸಂಗತಿ. ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಜನರು ಹೋರಾಟ ನಡೆಸುತ್ತಿದ್ದರೂ ಗೋವಾ ಸರ್ಕಾರ ಉದ್ದಟತನ ತೋರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ರೈತರ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಯೋಜನೆ ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ. ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.  ಇಂದಿನಿಂದ ಎರಡು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ತಂಗಿ ಈ ಭಾಗದ ಸಮಸ್ಯೆಗಳು ಹಾಗೂ ಪಕ್ಷದ ಸಂಘಟನೆಗಳ ಬಗ್ಗೆ ಚರ್ಚಿಸಲಾಗುವುದು. ಮುಂದಿನ ಚುನಾವಣೆ ಕುರಿತಂತೆ ಕಾರ್ಯಕರ್ತರ ಸಲಹೆ ಪಡೆಯುವುದಾಗಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin