ಹಿಂದಿ ಹೇರಿಕೆ ವಿರುದ್ಧ ಸಾಹಿತಿಗಳ ಆಕ್ರೋಶ, ಜನಾಂದೋಲನದ ಎಚ್ಚರಿಕೆ

Kannada-Hindi

ಬೆಂಗಳೂರು, ಜು.23-ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು, ಬಲವಂತ ಹಿಂದಿ ಹೇರಿಕೆ ಕ್ರಮವನ್ನು ಕೈಬಿಡದಿದ್ದರೆ ಜನಾಂದೋಲನ ಮಾದರಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾಹಿತಿಗಳು, ಬರಹಗಾರರು, ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸ್ ಆಯುಕ್ತರಾದ ಪ್ರವೀಣ್‍ಸೂದ್ ಅವರು ಕೋಮು ಗಲಭೆಯ ಪ್ರಕರಣ ದಾಖಲಿಸಿದ್ದಾರೆ. ಕನ್ನಡ ಮಾತನಾಡುವವರು ಒಂದು ಕೋಮು, ಕನ್ನಡ ಮಾತನಾಡದವರು ಒಂದು ಕೋಮು ಎಂದೇನಾದರೂ ಇದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಹಿತಿ ಚಂದ್ರಶೇಖರ ಪಾಟೀಲ್ ರಂಗಕರ್ಮಿ ಪ್ರಕಾಶ್ ಬೆಳವಾಡಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಪ್ರಸಾದ್, ಬನವಾಸಿ ಬಳಗದ ಡಾ.ಆನಂದ್, ನಾರಾಯಣ್, ಡಾ.ವಾಸು, ಸಮೀವುಲ್ಲಾ, ರಫಾಯಲ್ ರಾಜು, ವೆಂಕಟಸ್ವಾಮಿ ಮುಂತಾದವರು ಮಾತನಾಡಿ ಹಿಂದಿ ಹೇರಿಕೆ ವಿರುದ್ಧ ರಕ್ಷಣಾ ವೇದಿಕೆಕಾರ್ಯಕರ್ತರು ನಡೆಸುತ್ತಿರುವ ಹೋರಾಟವನ್ನು ನಾವು ಬೆಂಬಲಿಸುತ್ತೇವೆ. ಹಿಂದಿ ಹೇರಿಕೆಯನ್ನು ಖಂಡಿಸುತ್ತೇವೆ ಎಂದರು. ಚಂಪಾ ಮಾತನಾಡಿ, ಮೆಟ್ರೋ ರೈಲಿನಲ್ಲಿ ಹಿಂದಿ ನಾಮಫಲಕದ ಮೇಲೆ ಮಸಿ ಬಳಿದ ಕಾರ್ಯಕರ್ತರ ಮೇಲೆ ದುರುದ್ದೇಶದಿಂದ ಬೇರೆ ಬೇರೆ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಇಲ್ಲಸಲ್ಲದ ಕೇಸ್‍ಗಳನ್ನು ಹಾಕಿರುವುದು ಖಂಡನಾರ್ಹ. ಹಿಂದಿ ಭಾಷಿಕ ಅಧಿಕಾರಿಗಳು ಈ ರೀತಿ ದೌರ್ಜನ್ಯ ಮಾಡುತ್ತಿದ್ದಾರೆ ಎಂಧು ಭಾವಿಸಬೇಕಾಗುತ್ತದೆ.

ಅವರು ಪ್ರಕರಣಗಳನ್ನು ಹಿಂಪಡೆಯದಿದ್ದರೆ ಹಿಂದಿ ಹಠಾವೋ ಮತ್ತು ಕಮೀಷನರ್ ಹಠಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರಕಾಶ್ ಬೆಳವಾಡಿ ಮಾತನಾಡಿ, ಪ್ರಾದೇಶಿಕ ಸಮಾನತೆ ಅಗತ್ಯವಾಗಿದೆ. ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಅಳಿಸಿದರೆಂಬ ಕಾರಣಕ್ಕೆ ಕೋಮು ಗಲಭೆಯ ಆಪಾದನೆ ಹೊರಿಸಲಾಗಿದೆ. ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ ಅವರು, ಇದರ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಂಡರೆ ಅಭ್ಯಂತರವಿಲ್ಲ. ಆದರೆ ಅವರ ಮೇಲೆ ಸಂಬಂಧವಿಲ್ಲದ ಕೇಸುಗಳನ್ನು ಹಾಕಿರುವುದು ಸರಿಯಲ್ಲ. ಹಿಂದಿ ಹೇರಿಕೆ ಅಗತ್ಯವಿಲ್ಲ ಎಂದು ಮುಖ್ಯಕಾರ್ಯದರ್ಶಿಗಳೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಮೆಟ್ರೋ ಅಧಿಕಾರಿಗಳು ಸಹ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.   ಹಾಗಿದ್ದೂ ಸಹ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ಅಳವಡಿಸುವಂತೆ ಹೇಳಿದೆ. ಅನಗತ್ಯ ಹಿಂದಿ ಹೇರಿಕೆ ನಡೆಯುತ್ತಿದೆ. ಇದೇ ರೀತಿ ಮುಂದುವರೆದರೆ ಜೈಲು ಭರೋ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಕನ್ನಡ ಕಾಯುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.  ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಪ್ರಸಾದ್ ಮಾತನಾಡಿ, ಸರ್ಕಾರ ಡಬಲ್ ಗೇಮ್ ಆಡುತ್ತಿದೆ. ಆಯುಕ್ತ ಪ್ರವೀಣ್‍ಸೂದ್ ಹಾಗೂ ಯಶವಂತಪುರ ಎಸಿಪಿ ಇಬ್ಬರೂ 25 ಜನರ ಮೇಲೆ ಕೇಸು ಹಾಕಿದ್ದಾರೆ. ಜಾಮೀನು ಸಿಗದಂತೆ ಕೇಸು ಹಾಕಿರುವ ಇವರನ್ನು ಮುಖ್ಯಮಂತ್ರಿಗಳು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಪಿ.ವಿ.ನಾರಾಯಣ ಅವರು ಮಾತನಾಡಿ, ರೈತರು ದಲಿತರು ಕಾರ್ಮಿಕರನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸಮಾನತೆಗಾಗಿ ಹೋರಾಡುವವರ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ.

ಹಿಂದಿಗೆ ಮಾನ್ಯತೆ ಎಂಬುದೇ ಅಸಿಂಧುವಾಗಿದೆ. ಮಸಿ ಬಳಿಯುವ ಮೂಲಕ ನಮ್ಮ ಹೋರಾಟವನ್ನು ನಾವು ದಾಖಲಿಸಿದ್ದೇವೆ. ಆದರೆ ಅದಕ್ಕೆ ಅನಗತ್ಯ ಕೇಸು ಹಾಕಿ ಪೊಲೀಸರು ದಬ್ಬಾಳಿಕೆ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಮತಾ ಸೈನಿಕ ದಳದ ವೆಂಕಟಸ್ವಾಮಿ ಮಾತನಾಡಿ, ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನ್ಯಾಯ ಒದಗಿಸಬೇಕು ಎಂದರು.  ಬನವಾಸಿ ಬಳಗದ ಆನಂದ್ ಮಾತನಾಡಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅನುದಾನ ಕೊಡುತ್ತೇವೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಹಿಂದಿ ಹೇರಲು ಮುಂದಾದರೆ ನಾವು ತೆರಿಗೆ ಕಟ್ಟುತ್ತೇವೆ ಎಂಬುದನ್ನು ನೆನಪಿಸಬೇಕಾಗುತ್ತದೆ. ಅನಗತ್ಯವಾಗಿ ಹಿಂದಿ ಹೇರಿಕೆ ಬೇಡ. ಹಿಂದಿ ಭಾಷಿಗರನ್ನು ನಾವು ದ್ವೇಷಿಸುವುದಿಲ್ಲ. ಹಿಂದಿ ಹೇರಿಕೆ ಬೇಡ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin