3 ವರ್ಷಗಳಲ್ಲಿ 71,941 ಕೋಟಿ ರೂ. ಗೌಪ್ಯ ಆದಾಯ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Black-Money--01

ನವದೆಹಲಿ, ಜು.23-ಕಳೆದ ಮೂರು ವರ್ಷಗಳಿಂದ ದೇಶಾದ್ಯಂತ ಆದಾಯ ತೆರಿಗೆ (ಐಟಿ) ಇಲಾಖೆ ನಡೆದಿದ ವ್ಯಾಪಕ ಶೋಧಗಳು, ಜಪ್ತಿಗಳು ಮತ್ತು ಸರ್ವೆ ಕಾರ್ಯಾಚರಣೆಗಳಿಂದಾಗಿ 71,941 ಕೋಟಿ ರೂ.ಗಳ ರಹಸ್ಯ ಅಕ್ರಮ ಆದಾಯ ಪತ್ತೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದೆ.  ಕಳೆದ ವರ್ಷ ನವೆಂಬರ್ 9ರಿಂದ ಜಾರಿಗೆ ಬಂದ ಹಳೆ ನೋಟುಗಳ ರದ್ದತಿಯಿಂದ ಈ ವರ್ಷದ ಜನವರಿ 10ರವರೆಗೆ ಕೇವಲ ಎರಡು ತಿಂಗಳ ಅವಧಿಯಲ್ಲೇ ಒಟ್ಟು 5,400 ಕೋಟಿ ರೂ.ಗಳಿಗೂ ಹೆಚ್ಚು ಗೌಪ್ಯ ಆದಾಯ ಪತ್ತೆ ಮಾಡಲಾಗಿದೆ. ಹಾಗೂ 303.367 ಕೆಜಿಗಳಷ್ಟು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಹಣಕಾಸು ಸಚಿವಾಲಯ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಏಪ್ರಿಲ್ 1, 2014ರಿಂದ ಈ ವರ್ಷದ ಫೆಬ್ರವರಿ 28ರವರೆಗೆ ಮೂರು ವರ್ಷಗಳ ಗೋಪ್ಯ ಆದಾಯಗಳ ಸಂಪೂರ್ಣ ವಿವರಗಳನ್ನು ಅಫಿಡವಿಟ್‍ನಲ್ಲಿ ನೀಡಲಾಗಿದೆ. ಇದರಲ್ಲಿ ನೋಟು ಅಮಾನ್ಯೀಕರಣದ ಅವಧಿಯೂ ಒಳಗೊಂಡಿದೆ. ಈ ಮೂರು ವರ್ಷಗಳ ಅವಧಿಯಲ್ಲಿ, ಆದಾಯ ತೆರಿಗೆ ಅಧಿಕಾರಿಗಳು 2,027 ಸಂಸ್ಥೆಗಳಲ್ಲಿ ಶೋಧಗಳನ್ನು ನಡೆಸಿದ್ದು, ಬಹಿರಂಗಗೊಳಿಸದ 36,051 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ಗೋಪ್ಯತೆ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ.
ಇದಲ್ಲದೇ, 2,890 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಅದೇ ರೀತಿ, ಏಪ್ರಿಲ್ 1, 2014 ರಿಂದ ಈ ವರ್ಷದ ಫೆಬ್ರವರಿ ತನಕ ಐಟಿ ಇಲಾಖೆಯು 15,000ಕ್ಕೂ ಹೆಚ್ಚು ಸರ್ವೆಗಳನ್ನು ನಡೆಸಿದ್ದು, 33,000 ಕೋಟಿ ರೂ.ಗಳಿಗೂ ಹೆಚ್ಚು ಬಹಿರಂಗಗೊಳ್ಳದ ಆದಾಯವನ್ನು ಪತ್ತೆ ಮಾಡಿದೆ.

ನೋಟು ಅಮಾನ್ಯದ ಅವಧಿಯ ಸಾಧನೆಗಳ ಮೇಲೆ ಪ್ರಮಾಣಪತ್ರದಲ್ಲಿ ಬೆಳಕು ಚೆಲ್ಲಲಾಗಿದ್ದು, ಕಳೆದ ವರ್ಷ ನವೆಂಬರ್ 9ರಿಂದ ಎರಡು ತಿಂಗಳ ಅವಧಿಯಲ್ಲಿ ಐಟಿ ಇಲಾಖೆಯು ಗಮನಾರ್ಹ ಬೃಹತ್ ಸಂಖ್ಯೆಯ ಕಾರ್ಯಾಚರಣೆಗಳನ್ನು ಕೈಗೊಂಡಿದೆ ಎಂದು ತಿಳಿಸಲಾಗಿದೆ. ಈ ಅವಧಿಯಲ್ಲಿ 1,100 ಶೋಧಗಳು ಮತ್ತು ಸರ್ವೆಗಳು ಹಾಗೂ 5,100ಕ್ಕೂ ಅಧಿಕ ಪರಿಶೀಲನೆಗಳನ್ನು ನಡೆಸಲಾಗಿದೆ. ಈ ಕಾರ್ಯಾಚರಣೆಗಳ ಮೂಲಕ 513 ಕೋಟಿ ರೂ. ನಗದು ಸೇರಿದಂತೆ 610 ಕೋಟಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ 110 ಕೋಟಿ ರೂ.ಗಳಿಗೂ ಹೆಚ್ಚು ಹೊಸ ಕರೆನ್ಸಿಗಳನ್ನು ಜಪ್ತಿ ಮಾಡಲಾಗಿದೆ. ಎರಡು ತಿಂಗಳ ಅವಧಿಯಲ್ಲಿ 5,400 ಕೋಟಿ ರೂ.ಗಳಿಗೂ ಹೆಚ್ಚು ಗೌಪ್ಯ ಆದಾಯ ಬೆಳಕಿಗೆ ಬಂದಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin