ಅವಧಿಗೆ ಮುನ್ನ ಚುನಾವಣೆ : ಕಾಂಗ್ರೆಸ್’ನ ಹೊಸ ಗೇಮ್ ಪ್ಲಾನ್ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

cm

ಬೆಂಗಳೂರು, ಜು.24- ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುತ್ತಾ..? ಡಿಸೆಂಬರ್ ಒಳಗೇ ರಾಜ್ಯದಲ್ಲಿ ಚುನಾವಣೆ ಜರುಗಲಿದೆಯೇ? ಹೀಗೊಂದು ಚಿಂತನೆ ಕಾಂಗ್ರೆಸ್ ಹೈಕಮಾಂಡ್‍ನಲ್ಲಿ ಮಾಡಿದೆ.  ರಾಜ್ಯದಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಚಿಂತನೆ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್ ಡಿಸೆಂಬರ್‍ಗೂ ಮುನ್ನವೇ ಚುನಾವಣೆ ನಡೆಸಿದರೆ ಹೇಗೆ ಎಂಬ ಚಿಂತನೆ ಆರಂಭಿಸಿದೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಸಹ ನಡೆಯುತ್ತಿದ್ದು, ಪ್ರತಿಷ್ಠೆ ಕಣವಾಗಿರುವ ಗುಜರಾತ್‍ನಲ್ಲಿ ಗೆಲುವು ಸಾಧಿಸಲು ಅಮಿತ್ ಶಾ, ಮೋದಿ ಚಿತ್ತ ನೆಡಲಿದ್ದಾರೆ.

ಹೀಗಾಗಿ, ರಾಜ್ಯದ ಮೇಲೆ ಅವರ ಪ್ರಭಾವ ಇರುವುದಿಲ್ಲ ಎಂಬುದು ಕಾಂಗ್ರೆಸ್‍ನ ಗೇಮ್ ಪ್ಲಾನ್ ಎನ್ನಲಾಗಿದೆ.  ಆದರೆ, ಸಿಎಂ ಸಿದ್ದರಾಮಯ್ಯನವರ ಪ್ಲಾನ್ ಬೇರೆಯೇ ಇದೆ ಎನ್ನಲಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಪ್ರಚಾರ ಕೊಟ್ಟು, ಏಪ್ರಿಲ್‍ನಲ್ಲಿ ಅವಧಿ ಪೂರ್ಣಗೊಳಿಸಿದ ಬಳಿಕ ಚುನಾವಣೆ ನಡೆಯಲಿದ್ದು, ಅಷ್ಟೊತ್ತಿಗೆ ಮತ್ತೊಂದು ಬಜೆಟ್ ಮಂಡಿಸಿ ಜನರ ಮೆಚ್ಚುಗೆ ಪಡೆಯುವುದು ಸಿದ್ದರಾಮಯ್ಯನವರ ಯೋಜನೆ ಎನ್ನಲಾಗಿದೆ. ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಸಿದರೆ ಆಡಳಿತ ವಿರೋಧಿ ಆಲೆಯ ಜೊತೆಗೆ ರಾಜ್ಯದಲ್ಲಿ ಆವರಿಸಿರುವ ಬರಗಾಲ ಈ ಬಾರಿಯೂ ಮುಂದುವರೆದರೆ, ಪಕ್ಷಕ್ಕೆ ಹಾನಿಯಾಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನಲೆಯಲ್ಲಿ ಡಿಸೆಂಬರ್ ಒಳಗೆ ವಿಧಾನಸಭಾ ಚುನಾವಣೆ ನಡೆಸಲು ಮಾನಸಿಕವಾಗಿ ಸಿದ್ದರಾಗುವಂತೆ ಮುಖಂಡರಿಗೆ ಸಲಹೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್ , ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೇರಿದಂತೆ ರಾಜ್ಯ ಎಲ್ಲ ನಾಯಕರಿಗೆ ಚುನಾವಣೆಗೆ ಇಂದಿನಿಂದಲೇ ಸಿದ್ದತೆ ಆರಂಭಿಸಬೇಕು. ಶತಾಯಗಾತಯ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಮೂಲಕ 2019 ರ ಲೋಕಸಭಾ ಚುನಾವಣೆಗೆ ಇದು ದೇಶಕ್ಕೆ ದಿಕ್ಸೂಚಿಯಾಗಬೇಕೆಂದು ನಿದೇರ್ಶನ ಕೊಡಲಾಗಿದೆ. ನಿಗಧಿತ ಸಮಯದಲ್ಲೇ ಚುನಾವಣೆ ನಡೆಸಿದರೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೋಡಿಯ ಅಲೆ ಹಾಗೂ ಅವರ ಪ್ರಚಾರದ ಕಾರ್ಯತಂತ್ರವನ್ನು ನಾವು ಊಹಿಸಲು ಸಾಧ್ಯವಿಲ್ಲ. ಇತ್ತೀಚಿಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಅನುಭವದ ಆಧಾರದ ಮೇಲೆಯೇ ಈ ನಿರ್ಧಾರಕ್ಕೆ ಬರಲಾಗಿದೆ. ಯಾವುದೇ ಕ್ಷಣ ಜರುಗಬಹುದಾದ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕಾರ್ಯಕರ್ತರನ್ನು ಸಜ್ಜುಗೊಳಿಸುವಂತೆ ಸೂಚಿಸಲಾಗಿದೆ.

ಎರಡೂ ಕಡೆ ಗೆಲುವು?

ಇನ್ನು ಗುಜರಾತ್‍ನಲ್ಲಿ ಕಾಂಗ್ರೆಸ್ ಕೊಂಚ ಬಲ ಪಡೆಯುತ್ತಿದ್ದು, ಕೇಂದ್ರ ಸರ್ಕಾರ ಎರಡು ದೊಡ್ಡ ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆದರೆ ಪ್ರಚಾರದಲ್ಲಿ ಹಂಚಿ ಹೋಗಲಿದೆ. ಇದರ ಲಾಭ ಪಡೆದು ಎರಡೂ ರಾಜ್ಯವನ್ನು ಬುಟ್ಟಿಗೆ ಹಾಕಿಕೊಳ್ಳುವ ನಿರೀಕ್ಷೆಯನ್ನೂ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು ಹೊಂದಿದ್ದಾರೆ. ಕಾಂಗ್ರೆಸ್ ಕರ್ನಾಟಕದಲ್ಲಿ ಪ್ರಬಲವಾಗಿದೆ. ಇಲ್ಲಿನ ಸ್ಥಳೀಯ ನಾಯಕರ ಬಲದಿಂದ ಗೆಲ್ಲುವ ಅವಕಾಶ ಇದೆ. ಒಂದೊಮ್ಮೆ ರಾಷ್ಟ್ರೀಯ ಬಿಜೆಪಿ ನಾಯಕರು ಪ್ರಚಾರಕ್ಕೆ ಇಳಿದರೆ ಕಾಂಗ್ರೆಸ್ ಗೆಲುವು ಕಷ್ಟವಾಗಲಿದೆ. ಇದರಿಂದ ಗುಜರಾತ್ ರಾಜ್ಯ ಉಳಿಸಿಕೊಳ್ಳುವ ಪ್ರತಿಷ್ಠೆಯಲ್ಲಿರುವ ರಾಷ್ಟ್ರೀಯ ನಾಯಕರು ಡಿಸೆಂಬರ್‍ನಲ್ಲಿಯೇ ಚುನಾವಣೆ ನಡೆದರೆ ಗುಜರಾತ್‍ನತ್ತ ಹೆಚ್ಚು ಗಮನ ಹರಿಸುತ್ತಾರೆ. ಆಗ ಕರ್ನಾಟಕವನ್ನು ಸುಲಭವಾಗಿ ಮರಳಿ ಪಡೆಯಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್‍ನದ್ದು.

ಕಾಂಗ್ರೆಸ್ ಹೈಕಮಾಂಡ್‍ನ ಈ ಪ್ರಸ್ತಾವವನ್ನು ಸಿಎಂ ಸಿದ್ದರಾಮಯ್ಯ ಒಪ್ಪುತ್ತಾರಾ ಅನ್ನುವುದು ದೊಡ್ಡ ಪ್ರಶ್ನೆ. ಏಕೆಂದರೆ ಬರುವ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ ಚುನಾವಣೆ ಗೆಲುವನ್ನು ಸರಳವಾಗಿಸಿಕೊಳ್ಳುವ ಯತ್ನದಲ್ಲಿರುವ ಸಿದ್ದರಾಮಯ್ಯ, ಈ ವರ್ಷ ಪೂರ್ತಿ ಪಕ್ಷದ ನಾಲ್ಕು ವರ್ಷದ ಸಾಧನೆಯನ್ನು ಜನರ ಬಳಿ ತಲುಪಿಸುವ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.  ಈ ಸಂದರ್ಭದಲ್ಲಿ ಸಂಪೂರ್ಣ ಪ್ರಚಾರ ಇಲ್ಲದೇ ಚುನಾವಣೆಗೆ ಹೋದರೆ ಅದು ಪಕ್ಷಕ್ಕೆ ಹಿನ್ನಡೆ ಆಗಬಹುದು ಎನ್ನುವ ಮಾತು ಕೂಡ ಸಿಎಂ ಕಡೆಯಿಂದ ಕೇಳಿ ಬರುವ ಸಾಧ್ಯತೆ ಇದೆ. ಈ ವರ್ಷ ಮೋಡ ಬಿತ್ತನೆ ಮಾಡಿ ಜನರ ಮನಗೆಲ್ಲುವುದು ಕೂಡ ಸಿದ್ದರಾಮಯ್ಯ ಉದ್ದೇಶವಾಗಿದೆ.

ಒಟ್ಟಾರೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‍ಗೆ ಮನವಿ ಮಾಡಿ ಮುಂದಿನ ವರ್ಷ ಚುನಾವಣೆಗೆ ಒಪ್ಪಿಸುತ್ತಾರೋ? ಅಥವಾ ಹೈಕಮಾಂಡ್ ಪ್ರಸ್ತಾಪಕ್ಕೆ ಬೆಲೆ ಕೊಟ್ಟು ಅವಧಿಗೆ ಮುನ್ನವೇ ಚುನಾವಣೆಗೆ ತೆರಳುವ ತರಾತುರಿಯ ಸಿದ್ಧತೆ ಕೈಗೊಳ್ಳುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.  ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಗೂ ಮುನ್ನ ಚುನಾವಣೆ ನಡೆಯುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದರು. ಈ ಹಿಂದೆ 2004ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಕೂಡ ಇದೇ ರೀತಿ ಅವಧಿಗೂ ಮುನ್ನ ಚುನಾವಣೆಗೆ ಹೋಗಿದ್ದರಿಂದ ಕೈಸುಟ್ಟುಕೊಂಡಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷ ಪುನಃ ಅಧಿಕಾರಕ್ಕೆ ಬಂದಿರುವುದು 1983ರಲ್ಲಿ ಮಾತ್ರ. ಅಲ್ಲಿಂದೀಚೆಗೆ ಯಾವುದೇ ಪಕ್ಷ ಪುನಃ ಅಧಿಕಾರಕ್ಕೆ ಬಂದಿರುವ ನಿದರ್ಶನವಿಲ್ಲ. ಇದೆಲ್ಲವನ್ನೂ ಅರಿತಿರುವ ಸಿದ್ದರಾಮಯ್ಯ ಅವಧಿಗೂ ಮುನ್ನ ಜನತಾ ನ್ಯಾಯಾಲಯಕ್ಕೆ ಹೋಗಲಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin