ಉದ್ದೇಶಿತ ಕೆಂಪೇಗೌಡ ಬಡಾವಣೆ ನಿವಾಸಿಗಳು ಸಂಸ್ಕರಿಸಿದ ನೀರು ಬಳಸಲೇಬೇಕು

ಈ ಸುದ್ದಿಯನ್ನು ಶೇರ್ ಮಾಡಿ

Kempegowda-Layour

ಬೆಂಗಳೂರು, ಜು.24-ಕೆಟ್ಟ ಮೇಲೆ ಬುದ್ದಿ ಬಂತು…ಅಟ್ ಮೇಲೆ ಒಲೆ ಉರೀತು… ಎಂಬಂತೆ ಬಿಡಿಎ ಅಧಿಕಾರಿಗಳಿಗೆ ತಡವಾಗಿ ಜ್ಞಾನೋದಯವಾಗಿದೆ. ಉದ್ದೇಶಿತ ಕೆಂಪೇಗೌಡ ಬಡಾವಣೆಯಲ್ಲಿ ಕಾವೇರಿ ನೀರು ಹಾಗೂ ಸಂಸ್ಕರಿಸಿದ ನೀರು ಪೂರೈಸುವ ಉದ್ದೇಶದಿಂದ ಡಬಲ್ ಪೈಪ್‍ಲೈನ್ ಅಳವಡಿಸುವ ಮೂಲಕ ಕಾವೇರಿ ನೀರಿನ ದುರ್ಬಳಕೆ ತಪ್ಪಿಸಲು ಹಾಗೂ ಸಂಸ್ಕರಿಸಿದ ನೀರು ಬಳಕೆ ಪ್ರಮಾಣವನ್ನು ಪ್ರೋತ್ಸಾಹಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ.
ಬಡಾವಣೆಯ ಸುತ್ತಮುತ್ತ ಆರು ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸಿ, ಕಲುಷಿತ ನೀರನ್ನು ಸಂಸ್ಕರಿಸಿ ಟ್ಯಾಂಕ್‍ಗಳಿಗೆ ಪೂರೈಸುವ ಕಾಮಗಾರಿ ಕೈಗೆತ್ತಿಕೊಳ್ಳಲು 1320 ಕೋಟಿ ರೂ.ಗಳ ಯೋಜನೆಗೆ ಈಗಾಗಲೇ ಬಿಡಿಎ ಅಧಿಸೂಚನೆ ಹೊರಡಿಸಿದೆ. ನಗರ ಮತ್ತು ಹೊರವಲಯಗಳಲ್ಲಿ ನೂರಾರು ಅಪಾರ್ಟ್‍ಮೆಂಟ್‍ಗಳು ತಲೆ ಎತ್ತುತ್ತಿದ್ದು, ಎಲ್ಲಾ ನಿವಾಸಿಗಳು ಕಾವೇರಿ ನೀರು ಸರಬರಾಜು ಮಾಡುವುದು ಅಸಾಧ್ಯವಾಗಿ ಪರಿಣಮಿಸಿದೆ.
ಹೀಗಾಗಿ ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆ ಮಾಡುವ ಯೋಜನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ ಇದುವರೆಗೂ ಯಾವೊಬ್ಬ ಬಿಲ್ಡರ್‍ಗಳು ಇಂತಹ ಯೋಜನ ಜಾರಿಗೆ ಮುಂದಾಗಿಲ್ಲ.

ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆ ಮಾಡುವ ಯೋಜನೆಗೆ ಮುಂದಾಗಿರುವುದು ಸ್ವಾಗತಾರ್ಹ. ಭವಿಷ್ಯದಲ್ಲಿ ಖಾಸಗಿ ಬಿಲ್ಡರ್‍ಗಳು ನಿರ್ಮಿಸುವ ಅಪಾರ್ಟ್‍ಮೆಂಟ್‍ಗಳು, ಬಡಾವಣೆಗಳಿಗೆ ಕಾವೇರಿ ಕುಡಿಯುವ ನೀರಿನ ಸಂಪರ್ಕ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಎದುರಾಗಲಿದೆ. ಆದರೆ ಬಿಡಿಎ ನಿರ್ಮಿಸುವ ಕೆಂಪೇಗೌಡ ಬಡಾವಣೆಗೆ ಕಾವೇರಿ ನೀರು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೂಲಕ ಎರಡು ಪೈಪ್‍ಲೈನ್‍ಗಳಲ್ಲಿ ನೀರು ಸರಬರಾಜು ಮಾಡಲಾಗುವುದು.

ಉದ್ದೇಶಿತ ಕೆಂಪೇಗೌಡ ಬಡಾವಣೆಗೆ ಪ್ರತಿನಿತ್ಯ 125 ಮಿಲಿಯನ್ ಲೀಟರ್ ನೀರಿನ ಅವಶ್ಯಕತೆ ಬೀಳಲಿದ್ದು, ಬಡಾವಣೆ ಸುತ್ತಮುತ್ತ ಅಂತರ್ಜಲ ವೃದ್ಧಿಗೆ ಹಲವಾರು ಕ್ರಮಗಳನ್ನು ಬಿಡಿಎ ಕೈಗೆತ್ತಿಕೊಂಡಿದೆ. ಈ ಬಡಾವಣೆಯಲ್ಲಿ ಮನೆ ಕಟ್ಟಿಕೊಳ್ಳುವ ಮಾಲೀಕರಿಗೆ ಸಂಸ್ಕರಿಸಿದ ನೀರು ಬಳಕೆ ಕಡ್ಡಾಯ ಮಾಡಲಾಗುವುದು. ಯಾರು ಸಂಸ್ಕರಿಸಿದ ನೀರನ್ನು ಬಳಸುವುದಿಲ್ಲವೋ ಅಂಥವರಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವುದಿಲ್ಲ ಎಂದು ಬಿಡಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಡಾವಣೆಯ ಪ್ರತಿ ಮನೆಗಳಿಗೂ 50 ಎಂಎಲ್‍ಡಿ ಸಂಸ್ಕರಿಸಿದ ನೀರನ್ನು ಪೈಪ್‍ಲೈನ್‍ಗಳ ಮೂಲಕ ಹರಿಸಲಾಗುವುದು. ಅಲ್ಲಿನ ನಿವಾಸಿಗಳು ಈ ನೀರನ್ನು ಬಟ್ಟೆ ಒಗೆಯಲು, ಕೈತೋಟಗಳಿಗೆ ಬಳಸುವಂತಹ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ.  ಬಳಕೆಯಾಗದೆ ಉಳಿಯುವ ಸಂಸ್ಕರಿಸಿದ ನೀರನ್ನು ಬಡಾವಣೆಯ ಸುತ್ತಮುತ್ತಲಿನ ಕೆರೆಗಳಿಗೆ ಹರಿಸಲು ತೀರ್ಮಾನಿಸಲಾಗಿದೆ. ಬಡಾವಣೆಯ ಸುತ್ತಮುತ್ತ 14 ಕೆರೆಗಳಿದ್ದು, ಆ ಕೆರೆಗಳಿಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸುವ ಮೂಲಕ ಜಲಮೂಲ ಮಲಿನವಾಗದಂತೆ ನೋಡಿಕೊಳ್ಳುವ ಕಾರ್ಯಕ್ಕೂ ಬಿಡಿಎ ಮನಸ್ಸು ಮಾಡಿದೆ.

ಆನ್‍ಲೈನ್‍ಪದ್ದತಿ ಅಳವಡಿಕೆ:

ಕೆಂಪೇಗೌಡ ಬಡಾವಣೆಯ ನಿವಾಸಿಗಳು ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಆನ್‍ಲೈನ್ ಪದ್ಧತಿ ಅಳವಡಿಸುವುದು ಬಿಡಿಎ ಯೋಜನೆಯಲ್ಲಿದೆ. ಮನೆಗಳ ನಲ್ಲಿಗಳಲ್ಲಿ ವ್ಯರ್ಥವಾಗಿ ನೀರು ಹರಿಯಲು ಬಿಡುವುದನ್ನು ಆನ್‍ಲೈನ್ ಪದ್ಧತಿ ಮೂಲಕ ಪತ್ತೆ ಹಚ್ಚಬಹುದಾಗಿದೆ. ಇದರ ಜೊತೆಗೆ ಇಡೀ ಕೆಂಪೇಗೌಡ ಬಡಾವಣೆಯನ್ನು ಅತ್ಯಾಧುನಿಕವಾಗಿ ನಿರ್ಮಿಸಲು ತೀರ್ಮಾನಿಸಿರುವ ಬಿಡಿಎ ಭೂಗರ್ಭದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ.  ಇದುವರೆಗೂ ಬಿಡಿಎ ನಿರ್ಮಿಸಿರುವ ಹಲವಾರು ಬಡಾವಣೆಗಳಿಗೆ ಇನ್ನೂ ಅಗತ್ಯ ಮೂಲಭೂತ ಸೌಕರ್ಯಗಳೇ ಕಲ್ಪಿಸಿಲ್ಲ. ಆದರೆ ಪ್ರಾಧಿಕಾರದ ಕೊನೆ ಬಡಾವಣೆ ಎಂದೇ ಬಿಂಬಿಸಲಾಗುತ್ತಿರುವ ಕೆಂಪೇಗೌಡ ಬಡಾವಣೆಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದ್ದರೂ ತಡವಾಗಿಯಾದರೂ ಅಧಿಕಾರಿಗಳು ಬುದ್ಧಿ ಕಲಿತರಲ್ಲ ಎಂಬುದು ಸ್ವಾಗತಾರ್ಹ.

– ರಮೇಶ್‍ಪಾಳ್ಯ

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin