ಎಲೆಕ್ಷನ್ ಗೇಮ್ ಪ್ಲಾನ್ ಮಾಡಲು ದೆಹಲಿಗೆ ಹಾರಲಿದ್ದಾರೆ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01

ಬೆಂಗಳೂರು, ಜು.24- ಮುಂಬರುವ ವಿಧಾನಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರ ಸಚಿವ ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಂಗಳಾಂತ್ಯದಲ್ಲಿ ದೆಹಲಿಗೆ ತೆರಳಲಿದ್ದಾರೆ. ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಪಕ್ಷ ಸಂಘಟನೆ ಸಂಬಂಧ ಉಸ್ತುವಾರಿಗಳು ನಡೆಸಿರುವ ರಾಜ್ಯ ಪ್ರವಾಸ, ಕಾರ್ಯಕರ್ತರ ಸಭೆ ಮುಂತಾದ ವಿಷಯಗಳ ಬಗ್ಗೆ ಹೈಕಮಾಂಡ್ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂತಾದವರು ಚರ್ಚೆ ನಡೆಸಲಿದ್ದಾರೆ.

ಕಳೆದ ಜೂನ್ ತಿಂಗಳಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಬೇಕಿತ್ತು. ಸಂಪುಟದಲ್ಲಿ ಖಾಲಿ ಉಳಿದಿರುವ ಮೂರು ಸ್ಥಾನಗಳನ್ನು ಭರ್ತಿ ಮಾಡುವಂತೆ ಹೈಕಮಾಂಡ್ ಸೂಚಿಸಿತ್ತಾದರೂ ಈವರೆಗೆ ಯಾರನ್ನೂ ನೇಮಕ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಜತೆ ಚರ್ಚಿಸಿ ಸಂಪುಟಕ್ಕೆ ಮೂವರನ್ನು ಸೇರ್ಪಡೆ ಮಾಡಿಕೊಳ್ಳಲು ಚರ್ಚೆ ನಡೆಸಲಿದ್ದಾರೆ. ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನ, ಎಚ್.ವೈ.ಮೇಟಿ ಹಾಗೂ ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಅದೇ ಜಾತಿಯ ಮುಖಂಡರನ್ನು ನೇಮಕ ಮಾಡಿಕೊಳ್ಳಬೇಕೆಂದು ನಿರ್ಧರಿಸಲಾಗಿತ್ತಾದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಲವು ಖಾತೆಗಳನ್ನು ಬದಲಿಸಿ ಸಂಪುಟ ಪುನರ್ ರಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಈ ಸಂಬಂಧ ಹೈಕಮಾಂಡ್ ಜತೆ ಮಾತುಕತೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕರಾವಳಿ ಪ್ರದೇಶದ ಕೋಮುಗಲಭೆ, ಜೈಲು ರಾದ್ದಾಂತ ಪ್ರಕರಣ, ಪ್ರತ್ಯೇಕ ನಾಡಧ್ವಜಕ್ಕೆ ಸಮಿತಿ ರಚನೆ ವಿಷಯಗಳ ಸಂಬಂಧ ಉಂಟಾದ ಪರಿಣಾಮಗಳ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನೂತನ ಪದಾಧಿಕಾರಿಗಳ ನೇಮಕ, ಈ ಸಂದರ್ಭದಲ್ಲಿ ಉಂಟಾದ ಭಿನ್ನಮತ, ಪಕ್ಷ ಸಂಘಟನೆ ಸಂಬಂಧ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಕೂಡ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ.

ನೂತನ ಉಸ್ತುವಾರಿ ವೇಣುಗೋಪಾಲ್ ಅವರ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದ್ದು, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ರೂಪುರೇಷೆಗಳ ಬಗ್ಗೆ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರಪ್ರತಿ ಚುನಾವಣೆಯಲ್ಲಿ ಪ್ರದರ್ಶಿಸಿದ ಒಗ್ಗಟ್ಟು, ಇತ್ತೀಚೆಗೆ ರಾಜ್ಯದಲ್ಲಿ ನಡೆದ ಅಂಬೇಡ್ಕರ್ ಅಂತಾರಾಷ್ಟ್ರೀಯ ದಿನಾಚರಣೆ, ಅಹಿಂದ ಮತಗಳ ಕ್ರೂಢೀಕರಣ, ದಿನೇ ದಿನೇ ಕಾಂಗ್ರೆಸ್‍ನ ಬಲವರ್ಧನೆಯಾಗುತ್ತಿರುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ಮುಂದಿ ಕೈಗೆತ್ತಿಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin