ಕರಡಿ ಬೇಟೆ ವಿರುದ್ಧ ಪರಿಸರವಾದಿಗಳ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

Beer--01

ಬ್ರಿಟಿಷ್ ಕೊಲಂಬಿಯಾದಲ್ಲಿ ಕಪ್ಪು ಮತ್ತು ಕಂದು ಬಣ್ಣದ ಕರಡಿಗಳನ್ನು ಬೇಟೆಯಾಡುವುದಕ್ಕೆ ಹಿಂದಿನಿಂದಲೂ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇಲ್ಲಿ ಬೇರ್ ಹಂಟಿಂಗ್‍ನನ್ನು ಕಾನೂನುಬದ್ಧಗೊಳಿಸಲಾಗಿದೆ. ಪ್ರತಿ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ಟ್ರೋಫಿ ಹಂಟರ್‍ಗಳಿಂದ ಮುನ್ನೂರು ಕಂದು ಕರಡಿಗಳನ್ನು ಬೇಟೆಯಾಡಿ ಕೊಲ್ಲಲಾಗಿದೆ ಎಂಬುದನ್ನು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಕರಡಿಗಳನ್ನು ಕೊಲ್ಲುವುದು ಕಾನೂನುಬದ್ಧವಾಗಿದ್ದರೂ, ಇದು ಇತರ ಯಾವುದೇ ರೀತಿಯ ಬೇಟೆ ಅಥವಾ ಶಿಕಾರಿಗಿಂತ ಹೆಚ್ಚು ವಿವಾದಾಸ್ಪದವಾಗಿದೆ.

ಕಂದು ಬಣ್ಣದ ಕರಡಿಗಳನ್ನು ಪಾರಿತೋಷಕಕ್ಕಾಗಿ ಬೇಟೆಯಾಡಿ ಕೊಲ್ಲಲಾಗುತ್ತಿದೆ. ಈ ವಿಶೇಷ ಪ್ರಬೇಧದ ಕರಡಿಗಳನ್ನು ಕೊಲ್ಲುವುದಕ್ಕೆ ಬ್ರಿಟಿಷ್ ಕೊಲಂಬಿಯಾದ ಬಹುತೇಕ ಮಂದಿಯ ವ್ಯಾಪಕ ವಿರೋಧವಿದೆ. ಮೋಜಿಗಾಗಿ, ಕ್ರೀಡೆಗಾಗಿ, ಸಾಹಸಕ್ಕಾಗಿ, ಒಂದು ಪಾರಿತೋಷಕ್ಕಾಗಿ ಅಥವಾ ಕೇವಲ ತುಪ್ಪಳಕ್ಕಾಗಿ ಕೊಲ್ಲುತ್ತಿರುವುದು ತಪ್ಪು. ಇದಕ್ಕೆ ಕೆನಡಾದ ಅನೇಕರ ವಿರೋಧವಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.

ಕೇವಲ ಟ್ರೋಫಿಗಾಗಿ ಈ ಸುಂದರ ಪ್ರಾಣಿಯನ್ನು ಕೊಲ್ಲುತ್ತಿರುವುದು ವ್ಯರ್ಥ ಎಂದು ದಿ ಅಸೋಷಿಯೇಷನ್ ಫಾರ್ ದಿ ಪ್ರೊ ಟೆಕ್ಷನ್ ಆಫ್ ಫರ್ ಬೇರಿಂಗ್ ಅನಿಮಲ್ಸ್‍ನ ಲೆಸ್ಲೇ ಫಾಕ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂದು ಕರಡಿಗಳ ಮುಖ್ಯ ಶೂಟರ್‍ಗಳಾದ ವಿದೇಶಿ ಬೇಟೆಗಾರರು ಪ್ರಾಣಿಗಳ ಶಿಕಾರಿಗಾಗಿ ಓರ್ವ ಔಟ್‍ಫಿಟ್ಟರ್ ಗೈಡ್‍ನ ಮಾರ್ಗದರ್ಶನ ಪಡೆಯುತ್ತಾರೆ. ಈ ಟೂರ್ ಆಪರೇಟರ್ ಒಂದು ಕರಡಿ ಕೊಲ್ಲಲು 19,300 ಡಾಲರ್‍ಗಳ ಶುಲ್ಕ ವಿಧಿಸುತ್ತಾರೆ.
ಬ್ರಿಟಿಷ್ ಕೊಲಂಬಿಯಾಗೆ ಬಂದು ಅಧಿಕ ಮೊತ್ತದ ಹಣವನ್ನು ವೆಚ್ಚ ಮಾಡುತ್ತಿರುವವರು ಎಂದರೆ ವಿದೇಶಿ ಬೇಟೆಗಾರರು. ಇವರು ಈ ಪ್ರಾಂತ್ಯಕ್ಕೆ 270 ದಶಲಕ್ಷ ಡಾಲರ್‍ಗಳನ್ನು ನೀಡುತ್ತಿದ್ದಾರೆ ಹಾಗೂ ಎರಡು ಸಾವಿರ ಮಂದಿ ಇದರಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರ ಅಂಕಿ ಅಂಶ ನೀಡಿದೆ. ಅಮೆರಿಕದಲ್ಲಿ ನೆಲೆಸಿರುವ ಸುಮಾರು ಐದು ಸಾವಿರ ಮಂದಿ ಈ ಪ್ರಾಂತ್ಯಕ್ಕೆ ಪ್ರತಿ ವರ್ಷ ಆಗಮಿಸಿ ಒಂದು ಲೈಸನ್ಸ್‍ಗಾಗಿ 780 ಡಾಲರ್ ವೆಚ್ಚ ಮಾಡುತ್ತಾರೆ ಎಂದು `ದಿ ಗೈಡ್ ಔಟ್‍ಫಿಟ್ಟರ್ಸ್ ಅಸೋಸಿಯೇಷನ್ ಆಫ್ ಬಿ ಸಿ’ ತಿಳಿಸಿದೆ.

ಇಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಪ್ರಾಂತ್ಯದಲ್ಲಿ 1.2 ಶತಕೋಟಿ ಡಾಲರ್ ಆದಾಯ ತಂದು ಕೊಟ್ಟಿದ್ದು, 26,000 ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವೈಲ್ಡರ್‍ನೆಸ್ ಟೂರಿಸಂ ಅಸೋಸಿಯೇಷನ್ ಆಫ್ ಬಿ ಸಿ ಹೇಳಿದೆ.  ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಈ ಪ್ರಾಂತ್ಯದಲ್ಲಿ ಶೇಕಡ 91ರಷ್ಟು ಬ್ರಿಟಿಷ್ ಕೊಲಂಬಿಯನ್ನರು ಟ್ರೋಫಿ ಹಂಟಿಂಗ್‍ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶೇಕಡ 73ರಷ್ಟು ನಿವಾಸಿಗಳು ಪ್ರಾಣಿಗಳನ್ನು ಮಾಂಸಕ್ಕಾಗಿ ಕೊಲ್ಲುವುದಕ್ಕೆ ಬೆಂಬಲ ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin

One thought on “ಕರಡಿ ಬೇಟೆ ವಿರುದ್ಧ ಪರಿಸರವಾದಿಗಳ ಹೋರಾಟ

Comments are closed.