ಜನರಿಗೆ ಮತ್ತಷ್ಟು ಕಿಕ್ ಹೊಡೆಸಿ ಆದಾಯ ಹೆಚ್ಚಿಸಿಕೊಳ್ಳಲು ಮುಂದಾದ ಸರ್ಕಾರ..!

Wine-Shop--01

ಬೆಂಗಳೂರು, ಜು.24- ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಬಂದ್ ಮಾಡಿರುವುದರಿಂದ ರಾಜ್ಯ ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಹೊಸದಾಗಿ 900 ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 30 ಹಾಗೂ ಇತರೆ ಭಾಗಗಳಲ್ಲಿ 870 ಸೇರಿದಂತೆ ಒಟ್ಟು 900 ನೂತನ ಮದ್ಯದ ಅಂಗಡಿಗಳು ಮುಂದಿನ ಆಗಸ್ಟ್ ಮಧ್ಯಭಾಗದಲ್ಲಿ ತೆರೆಯಲಿವೆ. ಎಂಎಸ್‍ಐಎಲ್ ಮೂಲಕ ಬಾರ್ ಅಂಗಡಿಗಳು ಆರಂಭವಾಗಲಿದ್ದು, ಸುಪ್ರೀಂಕೋರ್ಟ್ ನಿರ್ದೇಶನವನ್ನು ಪಾಲನೆಯಲ್ಲಿಟ್ಟುಕೊಂಡು ಕಾನೂನಿಗೆ ತೊಡಕಾಗದಂತೆ ತೆರೆಯಲು ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿದೆ.

ಹೊಸ ಮದ್ಯದಂಗಡಿಗಳನ್ನು ಪ್ರಾರಂಭಿಸಲು ಸರ್ಕಾರದಿಂದ ನಿರ್ದೇಶನ ಬಂದಿದೆ. ಈಗಾಗಲೇ ನಾವು ಪ್ರಕ್ರಿಯೆಗಳನ್ನು ಆರಂಭಿಸಿದ್ದೇವೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.  ಈ ಹಿಂದೆ ಸರ್ಕಾರ ರಾಜ್ಯದ ವಿವಿಧೆಡೆ ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಎಂಎಸ್‍ಐಎಲ್ ಮೂಲಕ ತೆರೆಯಲು ಮುಂದಾಗಿತ್ತು. ಆದರೆ, ಇದಕ್ಕೆ ಸಾರ್ವಜನಿಕರು ಮತ್ತು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಪ್ರಸ್ತಾವನೆಯನ್ನು ಕೈ ಬಿಡಲಾಗಿತ್ತು.

ಒಂದೆಡೆ ಬಿಹಾರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮದ್ಯಪಾನವನ್ನೇ ಅಲ್ಲಿನ ಸರ್ಕಾರಗಳು ನಿಷೇಧಿಸಿರುವಾಗ ಸರ್ಕಾರ ಯಾವ ಉದ್ದೇಶಕ್ಕಾಗಿ ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುತ್ತಿದೆ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಇನ್ನೊಂದೆಡೆ ಸಾರ್ವಜನಿಕರಿಂದಲೂ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಸರ್ಕಾರ ತಾತ್ಕಾಲಿಕವಾಗಿ ಈ ಪ್ರಸ್ತಾವನೆಯನ್ನು ಕೈ ಬಿಟ್ಟಿತ್ತು.

ಆದಾಯಕ್ಕೆ ಹೊಡೆತ:

ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕ 500 ಮೀಟರ್ ಅಂತರದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‍ಗಳನ್ನು ಕಳೆದ ಜು.1ರಿಂದ ಬಂದ್ ಮಾಡಿದ ಪರಿಣಾಮ ಸರ್ಕಾರದ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಬೆಂಗಳೂರು ಸೇರಿದಂತೆ ಇತರೆ ಭಾಗಗಳಲ್ಲಿ ಸರಿಸುಮಾರು 750ಕ್ಕೂ ಹೆಚ್ಚು ವಿವಿಧ ಶ್ರೇಣಿಯ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಬೀಗ ಬಿದ್ದ ಪರಿಣಾಮ ಒಂದೂವರೆ ಸಾವಿರ ಕೋಟಿ ಆದಾಯ ನಷ್ಟವಾಗಿದೆ.
ಅಬಕಾರಿ ಇಲಾಖೆಯಿಂದ ಪ್ರತೀ ವರ್ಷ ಕನಿಷ್ಠ ಸರ್ಕಾರಕ್ಕೆ 17ಸಾವಿರ ಕೋಟಿಯಿಂದ 20ಸಾವಿರ ಕೋಟಿ ರೂ. ಆದಾಯ ಬರುತ್ತಿತ್ತು. ಈ ಆದಾಯದ ಹಣವನ್ನು ಸರ್ಕಾರ ಕೆಲವು ಜನಪ್ರಿಯ ಯೋಜನೆಗಳಿಗೆ ಬಳಸಿಕೊಳ್ಳುತಿತ್ತು.

ಈಗ ಆದಾಯ ಕುಸಿದ ಪರಿಣಾಮ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಅನುದಾನ ಒದಗಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಡಿಸಿದ್ದರು. ಈ ಎಲ್ಲಾ ಸಾಧಕ-ಬಾಧಕಗಳನ್ನು ಗಮನಿಸಿರುವ ಸರ್ಕಾರ ಹೊಸದಾಗಿ 900 ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡುವ ಮೂಲಕ ಜನರಿಗೆ ಮತ್ತಷ್ಟು ಕಿಕ್ ಹೊಡೆಸಿ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin